ಹಾಸನ, ಜನವರಿ 09, 2021 (www.justkannada.in): ಹಾಸನ ರಿಂಗ್ ರಸ್ತೆ ಪರಿಹಾರ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ಪ್ರೀತಂ ಗೌಡ ಬೆಂಬಲಿಗರು ಹಾಗೂ ಗ್ರಾಮಸ್ಥರು ನಡುವೆ ಮಾರಾಮಾರಿ ನಡೆದಿದೆ.
ಘಟನೆಯಲ್ಲಿ ಐದಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಡರಾತ್ರಿ ಹಾಸನದ ರಿಂಗ್ ರಸ್ತೆಯ ಉದ್ದೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಗ್ರಾಮದ ಸುರೇಶ್, ಆನಂದ, ಕೃಷ್ಣ, ಕುಮಾರಿ, ಲೋಲಾಕ್ಷಿ ಎಂಬುವವರ ಮೇಲೆ ಶಾಸಕ ಪ್ರೀತಂಗೌಡ ಬೆಂಬಲಿಗರಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಹಾಸನದ ಡೈರಿ ವೃತ್ತದಿಂದ ಬೇಲೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಭೂಮಿ ನೀಡಿದ್ದು ಸೂಕ್ತ ಪರಿಹಾರ ನೀಡಿಲ್ಲ ಎಂದು ರೈತರು ನ್ಯಾಯಾಲಯದ ಮೊರೆ ಹೋಗಿದ್ದರು.
ಇದನ್ನು ಪರಿಗಣಿಸಿ ಕಳೆದ ಆಗಸ್ಟ್ 16 ರಂದು ಕಾಮಗಾರಿಗೆ ಕೋರ್ಟ್ ತಡೆ ನೀಡಿತ್ತು. ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ನಡೆಯುತ್ತಿದ್ದ ಕಾಮಗಾರಿ ಪ್ರಶ್ನಿಸಿದವರಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.
ಶಾಸಕ ಪ್ರೀತಂಗೌಡ ಹಾಗೂ ಬೆಂಬಲಿಗರ ವಿರುದ್ಧ ರೈತರು ಗಂಭೀರ ಆರೋಪ ಮಾಡಿದ್ದಾರೆ. ಪ್ರತಿನಿತ್ಯ ಗ್ರಾಮಸ್ಥರಿಗೆ ಶಾಸಕರ ಬೆಂಬಲಿಗರು ಧಮ್ಕಿ ಹಾಕುತ್ತಿದ್ದಾರೆ ಎಂದು ದೂರಲಾಗಿದೆ, ನೀವು ನ್ಯಾಯಾಲಯದಲ್ಲಿ ಹಾಕಿರುವ ಕೇಸ್ ವಾಪಸ್ ಪಡೆಯಿರಿ. ಇಲ್ಲವಾದರೆ ಯಾವುದೇ ರೀತಿಯ ಪರಿಹಾರ ಕೊಡುವುದಿಲ್ಲ ಎಂದು ಆವಾಜ್ ಹಾಕಿದ್ದಾರೆ. ನಿನ್ನೆ ತಡರಾತ್ರಿ ಶಾಸಕರ ಕೆಲ ಬೆಂಬಲಿಗರು ಉದ್ದೂರಿಗೆ ತೆರಳಿ ಸ್ಥಳೀಯರೊಂದಿಗೆ ಗಲಾಟೆ ನಡೆಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪೆನ್ ಷನ್ ಮೊಹಲ್ಲಾ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ.