ಬೆಂಗಳೂರು,ಡಿಸೆಂಬರ್,18,2024 (www.justkannada.in): ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಆಗ್ರಹಿಸಿದರು.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವ ಹೆಚ್.ಸಿ ಮಹದೇವಪ್ಪ, “ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಶೋಕಿಯಾಗಿಬಿಟ್ಟಿದೆ. ಅಂಬೇಡ್ಕರ್ ಅವರ ಹೆಸರನ್ನು ಬಳಸಿದಷ್ಟು ಏನಾದರೂ ದೇವರ ಹೆಸರನ್ನು ಬಳಸಿದ್ದರೆ ಇಷ್ಟು ಹೊತ್ತಿಗೆ ಏಳು ಜನ್ಮದ ಪುಣ್ಯ ಬರುತ್ತಿತ್ತು” ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯ ಸಭೆಯಲ್ಲಿ ಹೇಳಿದ್ದು, ಅವರ ಈ ಅಸೂಕ್ಷ್ಮವಾದ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
ಭಾರತದ ಇತಿಹಾಸದಲ್ಲಿ ಅಸ್ಪೃಶ್ಯ ಸಮುದಾಯಗಳಿಗೆ ಇದ್ದ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ವಿಪರೀತ ಅವಮಾನ ದೌರ್ಜನ್ಯಕ್ಕೆ ಒಳಗಾಗಿದ್ದ ಅವರನ್ನು ಯಾವ ದೇವರೂ ಕೂಡಾ ರಕ್ಷಣೆ ಮಾಡಿದ ಉದಾಹರಣೆ ಇಲ್ಲ.
ಆದರೆ ಅಸ್ಪೃಶ್ಯರು, ಮಹಿಳೆಯರು ಮತ್ತು ಶೋಷಿತರ ಬದುಕನ್ನು ತನ್ನ ತ್ಯಾಗ, ಅಧ್ಯಯನ, ಬದ್ಧತೆ ಮತ್ತು ಮಹಾಲೋಕದೃಷ್ಟಿಯ ಮೂಲಕ ಪ್ರತಿದಿನವೂ ರಕ್ಷಣೆ ಮಾಡುತ್ತಿರುವ ನಿಜವಾದ ಶಕ್ತಿ ಯಾವುದಾದರೂ ಇದ್ದರೆ ಅದು ಬಾಬಾ ಸಾಹೇಬರು ಮತ್ತವರ ಸಂವಿಧಾನ ಎಂಬುದನ್ನು ನಾನು ಎದೆ ಕಟ್ಟಿಕೊಂಡು ಹೇಳುತ್ತೇನೆ ಎಂದು ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.
ಹಾಗೆಯೇ ಭಾರತದ ಸಂದರ್ಭದಲ್ಲಿ ಅಸ್ಪೃಶ್ಯತೆ ಅನುಭವಿಸಿದ ನಮ್ಮ ಜನರು, ಇಲ್ಲಿನ ಮಹಿಳೆಯರು ಮತ್ತು ಶೋಷಿತ ವರ್ಗಗಳು ಅಂಬೇಡ್ಕರ್ ಅವರನ್ನು ಬಿಟ್ಟು ಅಮಿತ್ ಶಾ ಅವರ ದೇವರ ಹೆಸರನ್ನು ಹೇಳುತ್ತಾ ಕೂತಿದ್ದರೆ ಇಷ್ಟೊತ್ತಿಗೆ ಅವರೆಲ್ಲರೂ ದೇವರ ಪಾದ ಸೇರಬೇಕಾಗಿತ್ತು ಎಂದು ವ್ಯಂಗ್ಯವಾಡಿದರು.
ಹೀಗಾಗಿ ಪುಣ್ಯ ಗಿಣ್ಯ ಎಂದು ಹೇಳುತ್ತಾ ಸಮಾಜಕ್ಕೆ ಕಂಟಕಪ್ರಾಯವಾದ ಮೌಢ್ಯತೆಯನ್ನು ಆಚರಿಸುವುದಕ್ಕಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಹೀನ ಧೈರ್ಯ ತೋರುತ್ತಿರುವ ಅಮಿತ್ ಷಾ ಅವರು ದೇಶದ ಮುಂದೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಈ ಮೂಲಕ ನಾನು ಆಗ್ರಹಿಸುತ್ತೇನೆ. ಜೊತೆಗೆ “ಯಾವ ಧರ್ಮ ಅಥವಾ ದೇವರು ನಮ್ಮನ್ನು ರಕ್ಷಣೆ ಮಾಡುವುದಿಲ್ಲ, ಬದಲಿಗೆ ಶಿಕ್ಷಣ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವೇ ನಮ್ಮ ಬದುಕನ್ನು ಬದಲಿಸುವ ಕೀಲಿಕೈ” ಎಂಬ ಬಾಬಾ ಸಾಹೇಬರ ಮಾತನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇನೆ ಎಂದು ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.
Key words: Statement, Ambedkar, HC Mahadevappa, Amit Shah