ಮಂಗಳೂರು,ಆಗಸ್ಟ್,1,2022(www.justkannada.in): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಹತ್ಯೆಗೆ ಗುರಿಯಾಗಿದ್ದ ಪ್ರವೀಣ್ ನೆಟ್ಟಾರು ಹಾಗೂ ಮಸೂದ್ ಅವರ ಮನೆಗಳಿಗೆ ಇಂದು ಬೆಳಗ್ಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ದುಃಖತಪ್ತ ಎರಡೂ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಅಲ್ಲದೆ, ನೊಂದ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಧನ ಸಹಾಯದ ಚೆಕ್ ಗಳನ್ನು ಹಸ್ತಾಂತರ ಮಾಡಿದರು. ಬೆಳಗ್ಗೆಯೇ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಅವರು ವಿಮಾನ ವಿಮಾನ ನಿಲ್ದಾಣದಿಂದ ನೇರವಾಗಿ ಬೆಳ್ಳಾರೆ ಗ್ರಾಮದ ಪ್ರವೀಣ್ ನೆಟ್ಟಾರು ಅವರು ಮನೆಗೆ ಧಾವಿಸಿದರು. ಈ ಸಂದರ್ಭದಲ್ಲಿ ಪ್ರವೀಣ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಬಳಿಕ ಪ್ರವೀಣ್ ಅವರ ಪತ್ನಿ ನೂತನ ಹಾಗೂ ಅವರ ತಂದೆ ತಾಯಿ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸಾಂತ್ವನ ಹೇಳಿದರು. ಯಾವುದೇ ಕಾರಣಕ್ಕೂ ಎದೆಗುಂದಬೇಡಿ. ನಿಮ್ಮ ಕುಟುಂಬಕ್ಕೆ ನ್ಯಾಯ ಸಿಗುವ ದೊರೆಯುವ ರೀತಿಯಲ್ಲಿ ನಾನು ಹೋರಾಟ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಆರ್ಥಿಕವಾಗಿ ಅಥವಾ ಯಾವುದೇ ರೀತಿಯ ಸಂಕಷ್ಟ ಎದುರಾದರೂ ನನಗೆ ಕರೆ ಮಾಡಿ. ನಮ್ಮ ಪಕ್ಷವು ನಿಮ್ಮ ನೆರವಿಗೆ ಧಾವಿಸುತ್ತದೆ ಎಂದು ಕುಟುಂಬದವರಿಗೆ ತಮ್ಮ ಮಾಬೈಲ್ ಸಂಖ್ಯೆಯನ್ನು ಕೊಟ್ಟರು.
ನಿಮ್ಮೊಂದಿಗೆ ನಾನೀದ್ದೇನೆ. ಪ್ರವೀಣ್ ಅವರ ಆತ್ಮಕ್ಕೆ ಶಾಂತಿ ಸಿಗಲು ನಿಮ್ಮ ಮನೆ ಮಗನಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದು ನಾನು ನಿಮ್ಮ ಕುಟುಂಬಕ್ಕೆ ನೀಡುವ ವಚನ ಎಂದು ಕುಮಾರಸ್ವಾಮಿ ಅವರು ಕುಟುಂಬಕ್ಕೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಪ್ರವೀಣ್ ಅವರ ಪತ್ನಿ ನೂತನ ಅವರು, ನನ್ನ ಪತಿಯನ್ನು ಕೊಂದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕುಮಾರಸ್ವಾಮಿ ಅವರ ಬಳಿ ಕಣ್ಣೀರಿಟ್ಟರು. ಆಗ ಧೈರ್ಯ ತುಂಬಿದ ಅವರು, ತಮ್ಮ ವೈಯಕ್ತಿಕ ಮೊಬೈಲ್ ನಂಬರ್ ನೀಡಿ ಯಾವುದೇ ಸಮಸ್ಯೆ ಬಂದರೂ ತಮ್ಮನ್ನು ಸಂಪರ್ಕಿಸಬಹುದು. ತಮಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು. ಧೈರ್ಯ ಕಳೆದುಕೊಳ್ಳಬೇಡಿ, ತಮ್ಮ ಕೆಲಸವನ್ನು ಮುನ್ನಡೆಸಿ ಎಂದು ಕುಮಾರಸ್ವಾಮಿ ಅವರು ಧೈರ್ಯ ತುಂಬಿದರು. ನಂತರ ಹೆಚ್ ಡಿಕೆ, ಸ್ಥಳದಲ್ಲೇ ಐದು ಲಕ್ಷ ರೂ. ಪರಿಹಾರದ ಚೆಕ್ ನೀಡಿದರು.
ಮಸೂದ್, ಫಾಝಿಲ್ ಮನೆಗಳಿಗೂ ಭೇಟಿ:
ಪ್ರವೀಣ್ ಅವರಿಗಿಂತ ಮೊದಲು ಬೆಳ್ಳಾರೆ ಗ್ರಾಮದಲ್ಲಿ ಹತ್ಯೆಯಾಗಿದ್ದ ಮಸೂದ್ ಅವರ ಕಳಂಜದ ನಿವಾಸಕ್ಕೆ ಕುಮಾರಸ್ವಾಮಿ ಅವರು ಭೇಟಿ ನೀಡಿದರು.
ಮನೆಯಲ್ಲಿದ್ದ ಮಸೂದ್ ಅವರ ಚಿಕ್ಕಪ್ಪ ಹಾಗೂ ಆ ಯುವಕನ ಅಣ್ಣ ತಮ್ಮನೂ ಸೇರಿ ಇಡೀ ಕುಟುಂಬಕ್ಕೆ ಸಾಂತ್ವನ ಹೇಳಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಆ ಕುಟುಂಬಕ್ಕೂ ಸ್ಥಳದಲ್ಲೇ ಪರಿಹಾರವಾಗಿ 5 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರ ಮಾಡಿದರು. ಮಸೂದ್ ಮುಗ್ಧನಾಗಿದ್ದು, ನಮ್ಮ ಕುಟುಂಬಕ್ಕೆ ಅನ್ಯಾಯ ಆಗಿದೆ ಎಂದು ಕುಟುಂಬಸ್ಥರು ದುಃಖ ತೋಡಿಕೊಂಡರು.
ಬಳಿಕ ಹೆಚ್.ಡಿಕೆ ಸುರತ್ಕಲ್ ನಲ್ಲಿ ಹತ್ಯೆಯಾದ ಫಾಝಿಲ್ ಅವರ ಮನೆಗೂ ಭೇಟಿ ನೀಡಿ ಅವರ ತಂದೆ ತಾಯಿ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೆ, ಸ್ಥಳದಲ್ಲೇ 5 ಲಕ್ಷ ರೂಪಾಯಿ ಮೊತ್ತದ ಪರಿಹಾರ ಚೆಕ್ ಅನ್ನು ಪೋಷಕರಿಗೆ ಹಸ್ತಾಂತರ ಮಾಡಿದರು.
ಈ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಭೋಜೆಗೌಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
Key words: HD Kumaraswamy-Praveen Nettaru-Masood – Fazil – compensation – Rs 5 lakh