ಶೀಘ್ರದಲ್ಲೇ ಟೋಲ್ ಬರೆ: 17 ರಾಜ್ಯ ಹೈವೇಗಳ ಪೈಕಿ ಏಳು ಹೆದ್ದಾರಿಗಳ ಟೆಂಡರ್ ಅಂತಿಮ

ಬೆಂಗಳೂರು:ಮೇ-7: ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸವಾರರಿಗೆ ಶೀಘ್ರದಲ್ಲೇ ಟೋಲ್ ಬರೆ ಬೀಳಲಿದೆ. 17 ರಾಜ್ಯ ಹೆದ್ದಾರಿಗಳ ಪೈಕಿ ಏಳಕ್ಕೆ ಟೋಲ್ ಅಳವಡಿಸಲು ಟೆಂಡರ್ ಅಂತಿಮಗೊಳಿಸಿರುವುದಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ. ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ಎಡಿಬಿ, ವಿಶ್ವಬ್ಯಾಂಕ್, ಹುಡ್ಕೋಗಳಿಂದ 3 ಸಾವಿರ ಕೋಟಿ ರೂ. ಸಾಲ ಪಡೆಯಲಾಗಿದೆ. ಸದ್ಯ ಮೂರು ವರ್ಷಕ್ಕೆ ಸೀಮಿತವಾಗಿ ಟೋಲ್ ಅಳವಡಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಟೋಲ್ ಜತೆಯಲ್ಲೇ ರಾಜ್ಯ ಹೆದ್ದಾರಿಗೂ ಟೋಲ್ ನಿಗದಿಪಡಿಸಿದರೆ ವಾಹನ ಸವಾರರಿಗೆ ತೊಂದರೆಯಾಗುವುದಿಲ್ಲವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಹೆದ್ದಾರಿಗಳಿಗೆ ಟೋಲ್ ಅಳವಡಿಕೆ ನಿರ್ಧಾರ ನಮ್ಮದಲ್ಲ. ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ 2011ರಲ್ಲೇ ಆದೇಶ ಮಾಡಿದ್ದಾರೆ. ಆ ಬಗ್ಗೆ ಅವರನ್ನೇ ಕೇಳಿ ಎಂದರು.

ಬಿಡಿಎ ಸಿಇ ಯಾರೋ ಗೊತ್ತಿಲ್ಲ: ‘ಬಿಡಿಎಗೆ ಹೆಚ್ಚುವರಿ ಮುಖ್ಯ ಇಂಜಿನಿಯರ್ ನೇಮಕ ಮಾಡಿರುವುದು ನನಗೆ ಗೊತ್ತಿಲ್ಲ. ಆ ಇಂಜಿನಿಯರ್ ಯಾರೆಂಬುದೂ ತಿಳಿದಿಲ್ಲ. ಆ ಖಾತೆ ಕೂಡ ನನಗೆ ಸಂಬಂಧಿಸಿದ್ದಲ್ಲ. ಡಿಪಿಆರ್​ಗೆ ಬರುತ್ತದೆ. ಈ ವಿಚಾರದಲ್ಲಿ ಯಾವ ಮ್ಯಾಜಿಕ್ಕೂ ಇಲ್ಲ, ಹುಣಸೇಕಾಯಿನೂ ಇಲ್ಲ’ ಎಂದು ರೇವಣ್ಣ ತಿರುಗೇಟು ನೀಡಿದರು.

ನಾನು ಯಾವ ರೇಸ್​ನಲ್ಲೂ ಇಲ್ಲ: ಪಕ್ಷ ಹಾಗೂ ಸಿಎಂ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಡಿಸಿಎಂ ಹುದ್ದೆ ರೇಸಿಗೆ ಹೋಗಲು ನನ್ನ ಬಳಿ ಕುದುರೆಯೇ ಇಲ್ಲ. ರಾಜ್ಯದಲ್ಲಿ ಮೈತ್ರಿ ಪಕ್ಷಗಳಿಂದ 18-20 ಸೀಟು ಗೆಲ್ಲುತ್ತೇವೆ. ಇದರಲ್ಲಿ 5-6 ಸೀಟು ಜೆಡಿಎಸ್ ಗೆಲ್ಲುತ್ತದೆ. ಜೆಡಿಎಸ್ ಏಳಕ್ಕೆ ಏಳು ಗೆದ್ದರೂ ಅಚ್ಚರಿಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೋದಿ ಹೇಳಿಕೆಗೆ ಖಂಡನೆ: ರಾಜೀವ್ ಗಾಂಧಿ ಬಗ್ಗೆ ಮೋದಿ ಹೇಳಿಕೆಯನ್ನು ರೇವಣ್ಣ ಖಂಡಿಸಿದ್ದಾರೆ.ರಾಜೀವ್ ಕರ್ನಾಟಕಕ್ಕೆ ಅನೇಕ ಕೊಡುಗೆ ಕೊಟ್ಟಿದ್ದಾರೆ. ಆ ಕೊಡುಗೆ ದೇವೇಗೌಡರಿಗೆ ಗೊತ್ತು. ಕಾಲ ಬಂದಾಗ ರಾಜೀವ್ ಗಾಂಧಿ ಕೆಲಸದ ಬಗ್ಗೆ ಹೇಳುತ್ತೇನೆ. ಅವರು ಪ್ರಾಮಾಣಿಕ ರಾಜಕಾರಣಿ. ಸತ್ತವರ ಬಗ್ಗೆ ಈಗ ಮಾತನಾಡುವುದು ಪ್ರಧಾನಿ ಘನತೆಗೆ ತಕ್ಕುದಲ್ಲ ಎಂದರು.

ಪಿಂಡ ಪ್ರದಾನಕ್ಕೆ ಹೋಗಿದ್ದು: ‘ನಮ್ಮ ಕುಟುಂಬ ಚಿಕ್ಕಮಗಳೂರಿಗೆ ಹೋಗಿದ್ದು ಪೂಜೆ ಮಾಡಿಸಲು ಅಲ್ಲ. ಪಿಂಡ ಪ್ರದಾನ ಮಾಡುವ ಶ್ರಾದ್ಧ ಕರ್ಮಕ್ಕಾಗಿ’ ಎಂದು ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದರು. ದೇವೇಗೌಡರ ತಂದೆಗೆ ಮೂವರು ಪತ್ನಿಯರಿದ್ದರು. ಪ್ಲೇಗ್ ರೋಗ ಬಂದು ನಮ್ಮ ಮೂವರೂ ಅಜ್ಜಿಯರು ಅಕಾಲಮರಣ ಹೊಂದಿದ್ದರು. ಅವರ ಸದ್ಗತಿ ಆಗಬೇಕೆಂದು ಜ್ಯೋತಿಷಿಗಳು ಸಲಹೆ ಮಾಡಿದ ಹಿನ್ನೆಲೆಯಲ್ಲಿ ನಮ್ಮ ತಂದೆಯವರು ಚಿಕ್ಕಮಗಳೂರಿನ ಬಳಿ ಶ್ರಾದ್ಧಕರ್ಮ ನೆರವೇರಿಸಿದ್ದಾರೆ. ಇದು ನಿಖಿಲ್ ಅಥವಾ ಪ್ರಜ್ವಲ್ ಗೆಲುವಿಗೆ ಮಾಡಿಸಿದ ಪೂಜೆಯಲ್ಲ. ಆ ಪೂಜೆಯಲ್ಲಿ ನಿಖಿಲ್ ಮತ್ತು ಪ್ರಜ್ವಲ್ ಹಾಗೂ ನನ್ನ ಮತ್ತು ಕುಮಾರಸ್ವಾಮಿಯವರ ಪತ್ನಿ ಭಾಗಿಯಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಕಳ್ಳ ಓಟು ಹಾಕಿಸಿಲ್ಲ

ನಾನು ಯಾವುದೇ ಕಳ್ಳ ವೋಟು ಹಾಕಿಸಿಲ್ಲ. ಚುನಾವಣಾ ಆಯೋಗಕ್ಕೆ ದೂರು ನೀಡಿದ ದೇವರಾಜ್ ಎಂಥ ವ್ಯಕ್ತಿ ಅಂತ ತಿಳಿದುಕೊಂಡು ಮಾತಾಡಿ. ದೂರು ಕೊಟ್ಟವರ ಮೇಲೆ ಎರಡು ಕೇಸ್ ಬುಕ್ ಆಗಿದೆ. ಚುನಾವಣೆ ದಿನ ನಾನು ಮಾಧ್ಯಮಗಳ ಜತೆಯೇ ಇದ್ದೆ. ಈ ಸಂಬಂಧ ಯಾವುದೇ ನೊಟೀಸ್ ಆಯೋಗದಿಂದ ಬಂದಿಲ್ಲ. ಯಾವ ತನಿಖೆಯಾದರೂ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು.

ಸರ್ವೀಸ್ ರಸ್ತೆ ಬಳಸಿ ಟೋಲ್ ಹೊರೆ ತಪ್ಪಿಸುವ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಸರ್ವೀಸ್ ರಸ್ತೆ ನಿರ್ವಿುಸಲಾಗುವುದು. ಟೋಲ್ ಪಾವತಿಸದವರು ಆ ರಸ್ತೆಯಲ್ಲಿ ಪ್ರಯಾಣಿಸಬಹುದು.

| ಎಚ್.ಡಿ.ರೇವಣ್ಣ ಲೋಕೋಪಯೋಗಿ ಸಚಿವ

ತುಂಡುಗುತ್ತಿಗೆ ನೀಡಿಲ್ಲ

‘ರೇವಣ್ಣ 1,400 ಕೋಟಿ ರೂ. ಮೊತ್ತದ ಯೋಜನೆಗಳನ್ನು ತುಂಡು ಗುತ್ತಿಗೆ ನೀಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈವರೆಗೂ ಒಂದೇ ಒಂದು ಕಾಮಗಾರಿ ಯನ್ನೂ ತುಂಡು ಗುತ್ತಿಗೆ ಕೊಟ್ಟಿಲ್ಲ’ ಎಂದು ಸಚಿವರು ಸ್ಪಷ್ಟಪಡಿಸಿದರು.

ಕೃಪೆ:ವಿಜಯವಾಣಿ

ಶೀಘ್ರದಲ್ಲೇ ಟೋಲ್ ಬರೆ: 17 ರಾಜ್ಯ ಹೈವೇಗಳ ಪೈಕಿ ಏಳು ಹೆದ್ದಾರಿಗಳ ಟೆಂಡರ್ ಅಂತಿಮ
hd-revanna-toll-state-highway-tender-vehicle-state-govt