ಬೆಂಗಳೂರು,ಅಕ್ಟೋಬರ್,26,2024 (www.justkannada.in): ‘ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಭೂಕಬಳಿಕೆ ಪ್ರಕರಣಕ್ಕೆ ಸಂಬಂಧ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಹೊರಡಿಸಿರುವ ಆದೇಶ ಜಾರಿಗೊಳಿಸುವಂತೆ ಹೈಕೋರ್ಟ್ ಈ ಹಿಂದೆ ಆದೇಶಿಸಿತ್ತು. ಆದರೆ ‘ಈ ಆದೇಶ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿ ಎಸ್. ಆರ್.ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಹೈಕೋರ್ಟ್ ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ನ್ಯಾಯಮೂರ್ತಿ ಕೆ.ಸೋಮಶೇಖರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತು. ಈ ವೇಳೆ ವಾದ ಮಂಡಿಸಿದ ಸರ್ಕಾರಿ ವಕೀಲರು, ‘ನ್ಯಾಯಾಲಯ ಅನುಮತಿ ನೀಡಿದರೆ ಹೊಸದಾಗಿ ತನಿಖೆ ನಡೆಸಲಾಗುವುದು. ತನಿಖೆಗಾಗಿ ನ್ಯಾಯಾಲಯ ಸೂಚಿಸಿದವರನ್ನೇ ನೇಮಕ ಮಾಡಲಾಗುವುದು. ಇದರ ಮೇಲೆ ನ್ಯಾಯಾಲಯ ನಿಗಾ ಇರಿಸಬಹುದು’ ಎಂದು ಹೇಳಿದರು.
ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಮಾಜ ಪರಿವರ್ತನಾ ಸಮುದಾಯ ಪರ ವಕೀಲರು, ‘ರಾಮನಗರ ಜಿಲ್ಲೆಯ ಹಿಂದಿನ ಮೂವರು ಜಿಲ್ಲಾಧಿಕಾರಿಗಳು ನ್ಯಾಯಾಲಯದ ನಿರ್ದೇಶನದಂತೆ ಪ್ರಾಮಾಣಿಕವಾಗಿ ತನಿಖೆ ನಡೆಸಿದ್ದಾರೆ. ನಂತರ ಬಂದ ಸರ್ಕಾರಗಳು ಇದನ್ನು ಅನುಷ್ಠಾನಗೊಳಿಸಲು ಮನಸ್ಸು ಮಾಡಿಲ್ಲ. ಯಾವ ಕಾರಣಕ್ಕಾಗಿ ಹೊಸದಾಗಿ ತನಿಖೆ ನಡೆಸಬೇಕು’ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸರ್ಕಾರಿ ವಕೀಲರು, ಪ್ರಕರಣ ಕುರಿತು ಇದುವರೆಗೆ ರಾಜ್ಯ ಸರ್ಕಾರದಿಂದ ನ್ಯಾಯಾಲಯಕ್ಕೆ 11 ಪ್ರಮಾಣಪತ್ರ ಸಲ್ಲಿಕೆಯಾಗಿವೆ. ಅವುಗಳನ್ನು ಅಧ್ಯಯನ ಮಾಡಿ ಹೊಸದಾಗಿ ಸಮಗ್ರವಾದ ವರದಿಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಅದಕ್ಕಾಗಿ ಮೂರು ವಾರ ಕಾಲಾವಕಾಶ ನೀಡಬೇಕು’ ಎಂದು ಕೋರಿದರು.
ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ಕುರಿತು ಹೊಸದಾಗಿ ತನಿಖೆ ನಡೆಸಲು ಅನುಮತಿ ನಿರಾಕರಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ 11 ಪ್ರಮಾಣ ಪತ್ರಗಳನ್ನು ಅಧ್ಯಯನ ಮಾಡಿ ಸಮಗ್ರ ವರದಿ ಸಲ್ಲಿಸುವಂತೆ ಸರ್ಕಾರಿ ವಕೀಲರಿಗೆ ಸೂಚನೆ ನೀಡಿ ವಿಚಾರಣೆಯನ್ನು ನವೆಂಬರ್ 20ಕ್ಕೆ ಮುಂದೂಡಿದೆ.
Key words: HDK, land grab, High Court, notice, report