ಮೈಸೂರು, ಮೇ 23, 2023 (www.justkannada.in): ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆಯ ಅಂಗವಾಗಿ ಸಮುದಾಯ ವೈದ್ಯಶಾಸ್ತ್ರ ವಿಭಾಗ, ಜೆಎಸ್ಎಸ್ ವೈದ್ಯಕೀಯ ಕಾಲೇಜು ವತಿಯಿಂದ ಉಚಿತ ಆರೋಗ್ಯ ಶಿಬಿರವನ್ನು ಹಂಚ್ಯಾ ಗ್ರಾಮದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿ ಡಾ. ಪ್ರವೀಣ್ ಕುಲಕರ್ಣಿ, ಉಪ ಪ್ರಾಂಶುಪಾಲರು (ಪ್ಯಾರಾ ಕ್ಲಿನಿಕಲ್) ಗೌರವ ಅತಿಥಿಗಳು ಡಾ. ಸುನಿಲ್ ಕುಮಾರ್ ಡಿ, ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಮತ್ತು ಹಂಚ್ಯಾ ಪಿ ಎಚ್ ಸಿ ವೈದ್ಯಾಧಿಕಾರಿ ಡಾ. ರವೀಂದ್ರ ಅವರು ಆರೋಗ್ಯ ಶಿಬಿರವನ್ನು ಉದ್ಘಾಟಿಸಿದರು. ಸಂಘಟಕರಾದ ಡಾ. ಅಮೋಘ ಶ್ರೀ, ಸಹಾಯಕ ಪ್ರಾಧ್ಯಾಪಕಿ ಮತ್ತು ಡಾ. ರಶ್ಮಿ ಎಸ್, ಸೀನಿಯರ್ ರೆಸಿಡೆಂಟ್ ಉಪಸ್ಥಿತರಿದ್ದರು.
ಅಧಿಕ ರಕ್ತದೊತ್ತಡದ ಲಕ್ಷಣಗಳು ಮತ್ತು ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸಲು ಮೊದಲನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಂದ ಜಾತಾವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಬಿಪಿ ಮಾಪನ, ರಕ್ತದಲ್ಲಿನ ಸಕ್ಕರೆ ಮತ್ತು ಹಿಮೋಗ್ಲೋಬಿನ್ ಅಂದಾಜು ಪರೀಕ್ಷೆ ಮಾಡಲಾಯಿತು. ಎಲ್ಲಾ ಫಲಾನುಭವಿಗಳಿಗೆ ಸಲಹೆ ಮತ್ತು ಆರೋಗ್ಯ ಶಿಕ್ಷಣವನ್ನು ಕೂಡ ನೀಡಲಾಯಿತು.
ಸುಮಾರು 50 ಜನರು ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು. ಈ ಸಂದರ್ಭದಲ್ಲಿ ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸಿಬ್ಬಂದಿಗಳು, ಸ್ನಾತಕೋತರ ಪದವೀಧರರು, ವೈದ್ಯಕೀಯ ಸಾಮಾಜಿಕ ಕಾರ್ಯಕರ್ತರು, ಹಂಚ್ಯಾ ಪಿಎಚ್ ಸಿಯ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.