ಬೆಂಗಳೂರು,ಏಪ್ರಿಲ್,29,2025 (www.justkannada.in): ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯಲ್ಲಿನ ಪಿ.ಜಿ.ಡಿ.ಹೆಚ್.ಪಿ.ಇ (Post Graduate Diploma in Health Promotion Education) ಸಿ.ಪಿ.ಹೆಚ್.ಎನ್ (Certificate in Public Health Nursing) ಕೋರ್ಸ್ನ್ನು ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ.
ಈ ಕುರಿತು ಆದೇಶ ಹೊರಡಿಸಿರುವ ಸರ್ಕಾರದ ಅಧೀನ ಕಾರ್ಯದರ್ಶಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ) ಪ್ರದೀಪ್ ಕುಮಾರ್ ಬಿ.ಎಸ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯಲ್ಲಿನ ಪಿ.ಜಿ.ಡಿ.ಹೆಚ್.ಪಿ.ಇ. ಕೋರ್ಸ್ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಿಗೆ ತರಬೇತಿ ನೀಡುವ ಒಂದು ವರ್ಷದ ಕೋರ್ಸ್ ಆಗಿದ್ದು, ಪ್ರಸ್ತುತ ಸದರಿ ಕೋರ್ಸ್ಗೆ ಸಂಸ್ಥೆಯು ಮಾನ್ಯತೆ ಪಡೆದಿರುವುದಿಲ್ಲ. ಅಲ್ಲದೆ, ಸದರಿ ಕೋರ್ಸ್ಗೆ ಪ್ರಸ್ತುತ 14 ಮಂದಿ ಅಭ್ಯರ್ಥಿಗಳಷ್ಟೇ ನೊಂದಾಯಿಸಲ್ಪಟ್ಟಿದ್ದು, ಸದರಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಸಂಸ್ಥೆಯಲ್ಲಿ NHM ಅಡಿಯಲ್ಲಿ 12 ಮಂದಿ ಸಿಬ್ಬಂದಿಗಳು ಗುತ್ತಿಗೆ / ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಪ್ರಸ್ತಾಪಿಸಲಾಗಿದೆ.
ಮುಂದುವರೆದು, CPHN (Certificate in Public Health Nursing) ಕೋರ್ಸ್ ಹಿರಿಯ ಆರೋಗ್ಯ ಸಹಾಯಕರಿಗೆ ತರಬೇತಿ ನೀಡುವ 18 ತಿಂಗಳ ಕೋರ್ಸ್ ಆಗಿದ್ದು, ಪ್ರಸ್ತುತ ಸದರಿ ಕೋರ್ಸ್ಗೆ ಸಂಸ್ಥೆಯು ಮಾನ್ಯತೆ ಪಡೆದಿರುವುದಿಲ್ಲ. ಅಲ್ಲದೆ, ಸದರಿ ಕೋರ್ಸ್ಗೆ ಪ್ರಸ್ತುತ 30 ಅಭ್ಯರ್ಥಿಗಳು ನೊಂದಾಯಿಸಲ್ಪಟ್ಟಿದ್ದು, ಸದರಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಸಂಸ್ಥೆಯಲ್ಲಿ NHM ಅಡಿಯಲ್ಲಿ 11 ಮಂದಿ ಸಿಬ್ಬಂದಿಗಳು ಗುತ್ತಿಗೆ / ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಪ್ರಸ್ತಾಪಿಸಲಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯಲ್ಲಿನ ಈ ಮೇಲಿನ ಪಿ.ಜಿ.ಡಿ.ಹೆಚ್.ಪಿ.ಇ. ಮತ್ತು ಸಿ.ಪಿ.ಹೆಚ್.ಎನ್. ಕೋರ್ಸ್ಗಳಿಗೆ ಮಾನ್ಯತೆ ಪಡೆದಿಲ್ಲದಿರುವುದರಿಂದ ಹಾಗೂ ಪ್ರಸ್ತುತ ಕಡಿಮೆ ಅಭ್ಯರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಮತ್ತು ಬೇರೆ ಸಂಸ್ಥೆಗಳಲ್ಲಿ ಸದರಿ ಕೋರ್ಸ್ ಅನ್ನು ಮಾಡಲು ಅವಕಾಶಗಳಿದ್ದು SIHFW ನಲ್ಲಿನ ಸದರಿ 02 ಕೋರ್ಸ್ ಗಳನ್ನು ರದ್ದುಗೊಳಿಸುವುದರಿಂದ ಇಲಾಖೆಗೆ ಮಾನವ ಸಂಪನ್ಮೂಲದ ಉಳಿತಾಯವಾಗುವುದನ್ನು ಸರ್ಕಾರವು ಮನಗಂಡು SIHFW ಪಿ.ಜಿ.ಡಿ.ಹೆಚ್. ಪಿ.ಇ. ಮತ್ತು ಸಿ.ಪಿ.ಹೆಚ್.ಎನ್. ಕೋರ್ಸ್ಗಳನ್ನು ರದ್ದುಪಡಿಸಲು ಮತ್ತು ಪ್ರಸ್ತುತ ತರಬೇತಿಯಲ್ಲಿರುವ ನೌಕರರನ್ನು ಇಲಾಖಾ ಕರ್ತವ್ಯಕ್ಕೆ ಮರಳಿ ಪಡೆಯಲು ತೀರ್ಮಾನಿಸಿದೆ.
ಹೀಗಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯಲ್ಲಿನ ಪಿ.ಜಿ.ಡಿ.ಹೆಚ್.ಪಿ.ಇ ಕೋರ್ಸ್ ಮತ್ತು ಸಿ.ಪಿ.ಹೆಚ್. ಎನ್ ಕೋರ್ಸ್ ಗಳನ್ನು ರದ್ದುಗೊಳಿಸಿ, ಪ್ರಸ್ತುತ ತರಬೇತಿಯಲ್ಲಿರುವ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮತ್ತು ಹಿರಿಯ ಆರೋಗ್ಯ ಸಹಾಯಕ ವೃಂದದ ನೌಕರರನ್ನು ಇಲಾಖಾ ಕರ್ತವ್ಯಕ್ಕೆ ಹಿಂಪಡೆದು ಕಾರ್ಯವರದಿ ಮಾಡಿಸಿಕೊಳ್ಳಲು ಆದೇಶಿಸಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
Key words: PGDHPE, CPHN courses, State Institute of Health and Family Welfare, cancelled.