ಬೆಂವಿವಿ ವಿದ್ಯಾರ್ಥಿಗಳಿಗೂ ಆರೋಗ್ಯ ವಿಮೆ: ನನೆಗುದಿಗೆ ಬಿದ್ದಿದ್ದ ಯೋಜನೆ, ಶೀಘ್ರ ಚಾಲನೆ ನೀಡಲು ವಿಶ್ವವಿದ್ಯಾಲಯ ನಿರ್ಧಾರ

ಬೆಂಗಳೂರು:ಜುಲೈ-22: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ನೀಡುವ ಯೋಜನೆ ಮತ್ತೆ ಆರಂಭವಾಗಲಿದೆ.

2019-20ನೇ ಸಾಲಿನಿಂದಲೇ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವೈದ್ಯಕೀಯ ವಿಮೆ ದೊರೆಯುವ ಸಾಧ್ಯತೆ ಹೆಚ್ಚಿದೆ. ಬೆಂ.ವಿವಿ 2017ರಲ್ಲೇ ಆರೋಗ್ಯ ವಿಮೆ ನೀಡಲು ನಿರ್ಧರಿಸಿತ್ತು. ಇದಕ್ಕಾಗಿ ಸಮಿತಿಯನ್ನೂ ರಚಿಸಿತ್ತು. ಸಮಿತಿಯು ವರದಿಯನ್ನು ವಿವಿಗೆ ನೀಡಿತ್ತು. ಆದರೆ, ಆ ನಂತರ ವರದಿ ಮೂಲೆ ಸೇರಿತ್ತು.

ಇತ್ತೀಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ವಿಚಾರ ಮತ್ತೆ ಚರ್ಚೆಯಾಗಿತ್ತು. ವಿಮೆ ನೀಡುವಲ್ಲಿ ವಿಳಂಬ ಧೋರಣೆಗೆ ಕೆಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ವಿವಿಯು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.

ಜ್ಞಾನಭಾರತಿ ಆವರಣದಲ್ಲಿ 52 ವಿಭಾಗಗಳಿದ್ದು, 8,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ವಿಮೆ ಸೌಲಭ್ಯ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ವಿವಿ ವ್ಯಾಪ್ತಿಯಲ್ಲಿರುವ 276 ಸಂಯೋಜಿತ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಯಿಂದಲೇ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಹೀಗಾಗಿ ವಿವಿ ಕೇವಲ ತನ್ನ ಕ್ಯಾಂಪಸ್​ನ ವಿದ್ಯಾರ್ಥಿಗಳಿಗಷ್ಟೇ ಈ ಬಾರಿ ವಿಮೆ ಕಲ್ಪಿಸಲಿದೆ.

ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡದೇ ವಿವಿಯೇ ಎಲ್ಲ ಮೊತ್ತವನ್ನು ಪಾವತಿಸಬೇಕು. ಜತೆಗೆ ವಿವಿಯ ಆವರಣದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಪೂರ್ಣ ಪ್ರಮಾಣದಲ್ಲಿ ಮೂಲಸೌಕರ್ಯ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರಕಿಸಿಕೊಡಬೇಕು ಎಂಬುದು ವಿವಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಆಗ್ರಹವಾಗಿದೆ. ಈಗಾಗಲೇ ಬಹುತೇಕ ಶಾಲೆ-ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ಮಾಡಿಸಿವೆ.

ಉಮ್ಮೇ ಕುಲ್ಸುಮ್ ನೇತೃತ್ವ

ವಿಮೆಯನ್ನು 2019-20ನೇ ಸಾಲಿನಿಂದಲೇ ಜಾರಿಗೊಳಿಸಲು ವಿವಿ ನಿರ್ಧರಿಸಿದ್ದು, ಇದರ ರೂಪುರೇಷೆ ಸಿದ್ಧಪಡಿಸಲು ಹಿರಿಯ ಡೀನ್ ಪ್ರೊ.ಉಮ್ಮೇ ಕುಲ್ಸುಮ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ. ಉಳಿದ ಎಲ್ಲ ನಿಕಾಯಗಳ ಡೀನ್​ಗಳು ಇದರ ಸದಸ್ಯರಾಗಿದ್ದು, ವಿತ್ತಾಧಿಕಾರಿ ಸದಸ್ಯ ಕಾರ್ಯದರ್ಶಿ ಯಾಗಿದ್ದಾರೆ. ಆರೋಗ್ಯ ವಿಮೆಯ ಪ್ರೀಮಿಯಂ ಎಷ್ಟಿರಬೇಕು? ಇದರಲ್ಲಿ ವಿದ್ಯಾರ್ಥಿ ಮತ್ತು ವಿವಿಯು ಯಾವ ಪ್ರಮಾಣ ಎಷ್ಟು ಇತ್ಯಾದಿಗಳ ಬಗ್ಗೆ ವಿಶ್ವವಿದ್ಯಾಲಯಕ್ಕೆ ಸಮಿತಿ ವರದಿ ನೀಡಬೇಕಿದೆ.

ಇತ್ತೀಚೆಗೆ ಮೂರ್ನಾಲ್ಕು ವಿದ್ಯಾರ್ಥಿಗಳು ಜ್ಞಾನಭಾರತಿ ಕ್ಯಾಂಪಸ್​ನಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಅವರ ವೈದ್ಯಕೀಯ ವೆಚ್ಚವನ್ನು ವಿವಿಯೇ ಭರಿಸಬೇಕಿದೆ. ಅದರ ಬದಲಾಗಿ ವಿಮೆ ಮಾಡಿಸುವುದು ಉತ್ತಮವೆಂದು ವಿವಿಯ ಗಮನ ಸೆಳೆದಿದ್ದೇನೆ.

| ಬಿ. ಶಿವಣ್ಣ ಸಿಂಡಿಕೇಟ್ ಸದಸ್ಯ
ಕೃಪೆ:ವಿಜಯವಾಣಿ

ಬೆಂವಿವಿ ವಿದ್ಯಾರ್ಥಿಗಳಿಗೂ ಆರೋಗ್ಯ ವಿಮೆ: ನನೆಗುದಿಗೆ ಬಿದ್ದಿದ್ದ ಯೋಜನೆ, ಶೀಘ್ರ ಚಾಲನೆ ನೀಡಲು ವಿಶ್ವವಿದ್ಯಾಲಯ ನಿರ್ಧಾರ
health-insurance-for-bangaluru-vv-students