ಬೆಂಗಳೂರು, ಜುಲೈ 30, 2022(www.justkannada.in): ಮೆಟ್ರೋ ರೈಲಿನಲ್ಲಿ ಪ್ರತಿನಿತ್ಯ ಪ್ರಯಾಣಿಸುವವರಿಗೆ ನಮ್ಮ ಮೆಟ್ರೋದಿಂದ ಇಲ್ಲೊಂದು ಹೃದಯಕ್ಕೆ ಹತ್ತಿರವಾಗುವ ಸಂತಸದ ಸುದ್ದಿಯಿದೆ. ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಗುರುವಾರದಂದು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಮೊದಲ ಸ್ವಯಂಚಾಲಿತ ಬಾಹ್ಯ ಡೀಫಿಬ್ರಿಲ್ಲೇಟರ್ (Automated External Defibrillators (AED) ಅನ್ನು ಅಳವಡಿಸಿತು. ನಗರದಾದ್ಯಂತ ಐದು ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಈ ಎಇಡಿಗಳನ್ನು ಅಳವಡಿಸಲು ಯೋಜಿಸಿದ್ದು, ಇದು ಮೊದಲ ಪ್ರಯತ್ನವಾಗಿದೆ.
ಈ ಪೋರ್ಟೆಬಲ್ ಸಾಧನ ಇದ್ದಕ್ಕಿದ್ದಂತೆ ಹೃದಯಾಘಾತ ಅನುಭವಿಸುವ ಜನರ ಚಿಕಿತ್ಸೆಗಾಗಿ ವಿನ್ಯಾಸಪಡಿಸಲಾಗಿದ್ದು, ಶೀಘ್ರದಲ್ಲೇ ಯಶವಂತಪುರ, ನ್ಯಾಷನಲ್ ಕಾಲೇಜು, ವಿಜಯನಗರ ಹಾಗೂ ಎಂ.ಜಿ. ರಸ್ತೆ ಮೆಟ್ರೋ ಸ್ಟೇಷನ್ ಗಳಲ್ಲಿಯೂ ಅಳವಡಿಸಲಾಗುತ್ತದೆ.
ಈ ಡೀಫಿಬ್ರಿಲ್ಲೇಟರ್ ಗಳು ತುರ್ತು ಸಂದರ್ಭಗಳಲ್ಲಿ ಸೇವೆಯನ್ನು ಒದಗಿಸುವ ಮೂಲಕ ಇಂತಹ ಸಂದರ್ಭಗಳಲ್ಲಿ ಮೃತಪಡುವವರ ಸಂಖ್ಯೆಯನ್ನು ನಿಯಂತ್ರಿಸಲಿದೆ. “ದಿನನಿತ್ಯ ಸಹಸ್ರಾರು ಜನ ಮೆಟ್ರೋ ರೈಲುಗಳಲ್ಲಿ ಓಡಾಡುತ್ತಾರೆ. ಹಾಗಾಗಿ, ಮೆಟ್ರೋ ನಿಲ್ದಾಣಗಳಲ್ಲಿ ನಾವು ಸುರಕ್ಷತಾ ಕ್ರಮವಾಗಿ ಎಇಡಿಗಳನ್ನು ಅಳವಡಿಸಲು ನಿರ್ಧರಿಸಿದ್ದೇವೆ. ಇದು ತುರ್ತು ಸಂದರ್ಭದಲ್ಲಿ ಜೀವವನ್ನು ಉಳಿಸುವಂತಹ ಒಂದು ಯಂತ್ರ. ಸಮಯಕ್ಕೆ ಸರಿಯಾಗಿ ನೆರವೂ ಸಹ ಒದಗುವುದನ್ನು ಖಾತ್ರಿಪಡಿಸಲು ನಾವು ನಮ್ಮ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಈ ಎಇಡಿಗಳನ್ನು ಬಳಸುವುದು ಹೇಗೆ ಎಂದು ತರಬೇತಿಯನ್ನು ನೀಡಿದ್ದೇವೆ,” ಎಂದು ಬಿಎಂಆರ್‌ಸಿಎಲ್ ನ ಕಾರ್ಯನಿರ್ವಾಹಕ ನಿರ್ದೇಶಕ (ಕಾರ್ಯಾಚರಣೆಗಳು ಹಾಗೂ ನಿರ್ವಹಣೆ) ಎ.ಎಸ್. ಶಂಕರ್ ತಿಳಿಸಿದರು.
ಬಿಎಂಆರ್‌ಸಿಎಲ್ ನ ಅಧಿಕಾರಿಗಳ ಪ್ರಕಾರ, ಇತ್ತೀಚೆಗೆ ಎರಡು ಎಇಡಿಗಳನ್ನು ಖರೀದಿಸಲಾಗಿದ್ದು, ಬಳಕೆಯ ಪ್ರಮಾಣವನ್ನು ಆಧರಿಸಿ ಉಳಿದ ಸಾಧನಗಳನ್ನು ಖರೀದಿಸಲಾಗುವುದು.
“ನಾವು ಮೊದಲ ಹಂತದಲ್ಲಿ ಎರಡು ಯಂತ್ರಗಳನ್ನು ಖರೀದಿಸಿದ್ದೇವೆ. ಮೊದಲ ಯಂತ್ರವನ್ನು ಕೆಂಪೇಗೌಡ ನಿಲ್ದಾಣದಲ್ಲಿ ಅಳವಡಿಸಲಾಗಿದೆ. ಮತ್ತೊಂದನ್ನು ಯಶವಂತಪುರ ಮೆಟ್ರೋ ನಿಲ್ದಾಣದಲ್ಲಿ ಅಳವಡಿಸಲಾಗುವುದು. ನಿಲ್ದಾಣಕ್ಕೆ ಬಂದು ಹೋಗುವ ಜನಸಂಖ್ಯೆಯನ್ನು ಆಧರಿಸಿ ಈ ಯಂತ್ರಗಳನ್ನು ಎಲ್ಲೆಲ್ಲಿ ಅಳವಡಿಸಬಹುದು ಎಂದು ಅಂದಾಜಿಸಲಾಗುತ್ತಿದೆ. ಇದೇ ರೀತಿ, ಈ ಉಪಕ್ರಮದಡಿ ಮೊದಲ ಹಂತದಲ್ಲಿ ಒಟ್ಟು ಐದು ಎಇಡಿಗಳನ್ನು ಅಳವಡಿಸಲು ಯೋಜಿಸಲಾಗಿದೆ. ಆಯ್ಕೆಯಾಗಿರುವ ಮುಂದಿನ ಮೂರು ನಿಲ್ದಾಣಗಳ ಪೈಕಿ ನ್ಯಾಷನಲ್ ಕಾಲೇಜು, ವಿಜಯನಗರ ಹಾಗೂ ಎಂ.ಜಿ. ರಸ್ತೆ ನಿಲ್ದಾಣಗಳು ಸೇರಿವೆ,” ಎಂದು ಶಂಕರ್ ಅವರು ವಿವರಿಸಿದರು.
ಈ ಉಪಕ್ರಮವನ್ನು ಆರೋಗ್ಯಸೇವಾ ತಜ್ಞರು ಹಾಗೂ ಸಾರ್ವಜನಕರು ಸ್ವಾಗತಿಸಿದ್ದಾರೆ. ವೈದ್ಯಕೀಯ ತಜ್ಞರ ಪ್ರಕಾರ ಈ ಸಾಧನ ನಗರದ ತುರ್ತು ಪ್ರತಿಕ್ರಿಯಾ ವ್ಯವಸ್ಥೆಯನ್ನು ಸುಧಾರಿಸಲಿದೆ. ತಜ್ಞರ ಪ್ರಕಾರ, ಈ ಎಇಡಿಗಳು ಹೃದಯಾಘಾತವಾಗಿರುವ ವ್ಯಕ್ತಿಯ ಹೃದಯಕ್ಕೆ ಎಲೆಕ್ಟ್ರಿಕ್ ಶಾಕ್ ಮೂಲಕ ಹೃದಯದ ಬಡಿತ ಪುನರ್ ಸ್ಥಾಪಿಸಲು ನೆರವಾಗುತ್ತವೆ. ಈ ಯಂತ್ರದ ಬಳಕೆ ಬಹಳ ಸುಲಭವಾಗಿದ್ದು ವೈದ್ಯಕೀಯೇತರ ಸಿಬ್ಬಂದಿಗಳೂ ಸಹ ಉಪಯೋಗಿಸಬಹುದು.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತಗಳು ಸಾಮಾನ್ಯ ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದೆ. ಈ ಹಿನ್ನೆಲೆಯಲ್ಲಿ ತಜ್ಞರು ಹೇಳಿರುವಂತೆ ಈ ಎಇಡಿಗಳು ವೈದ್ಯಕೀಯ ನೆರವು ತಲುಪುವವರೆಗೂ ಗಂಡಾಂತರದಲ್ಲಿರುವ ವ್ಯಕ್ತಿಗೆ ಸಮಯ ಒದಗಿಸುತ್ತದೆ.
“ಭಾರತದಲ್ಲಿ, ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಸೇರುವಂತಹ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿಯೂ ಈ ರೀತಿ ಎಇಡಿಗಳು ಲಭ್ಯವಿಲ್ಲ. ಹೃದಯಾಘಾತ ಪ್ರತಿನಿತ್ಯ ಸಂಭವಿಸಬಹುದಾಗಿರುವಂತಹ ತರ್ತು ಪರಿಸ್ಥಿತಿ ಅಲ್ಲದಿದ್ದರೂ ಸಹ, ಒಮ್ಮೆ ಹೀಗಾದಾಗ ಅದು ತುರ್ತು ಪರಿಸ್ಥಿತಿ ನಿರ್ಮಾಣ ಮಾಡುತ್ತದೆ. ಇಂತಹ ಅವಘಡವನ್ನು ಎದುರಿಸುವ ವ್ಯಕ್ತಿಗೆ ಸಮಯಕ್ಕೆ ಸರಿಯಾಗಿ, ಅಂದರೆ ಕೆಲವು ನಿಮಿಷಗಳೊಳಗೆ ಕನಿಷ್ಠ ಈ ರೀತಿಯ ನೆರವು ಲಭ್ಯವಾಗದಿದ್ದರೆ ವ್ಯಕ್ತಿ ಮೃತಪಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬಿಎಂಆರ್ ಸಿಎಲ್ ನಿಲ್ದಾಣಗಳಲ್ಲಿ ತುರ್ತು ವೈದ್ಯಕೀಯ ಪ್ರತಿಕ್ರಿಯಾ ವ್ಯವಸ್ಥೆಯ ಉಪ್ರಕವನ್ನು ಕೈಗೊಂಡಿದೆ. ಈ ಉಪಕ್ರಮವು ಇಂತಹ ಅವಘಡಳಿಗೆ ಈಡಾಗುವಂತಹವರಿಗೆ ಬದುಕುಳಿಯುವ ಅತ್ಯುತ್ತಮ ಅವಕಾಶವನ್ನು ಕಲ್ಪಿಸಲಿದೆ. ನಾವು ಇಂತಹ ಯಂತ್ರಗಳನ್ನು ಮಾಲ್ ಗಳು, ಫಿಟ್ನೆಸ್ ಕೇಂದ್ರಗಳು ಹಾಗೂ ರೈಲ್ವೆ ನಿಲ್ದಾಣಗಳಲ್ಲಿಯೂ ಅಳವಡಿಸಲು ಯೋಚಿಸಬೇಕು,” ಎನ್ನುತ್ತಾರೆ ತುರ್ತು ಪರಿಸ್ಥಿತಿ ಹಾಗೂ ಸುರಕ್ಷತಾ ತರಬೇತುದಾರ ಡಾ. ದಿನಕರ್ ಡಿ.
“ಇಂತಹ ಸಾಧನಗಳು ವಿಶ್ವದಾದ್ಯಂತ ಎಲ್ಲಾ ಪ್ರಮುಖ ನಗರಗಳಲ್ಲಿಯೂ ಲಭ್ಯವಿವೆ. ಈ ಸಾಧನದ ಮೂಲಕ ಕೇವಲ ಒಂದೇ ಒಂದು ಜೀವವನ್ನು ಉಳಿಸುವುದು ಸಾಧ್ಯವಾದರೂ ಸಹ ಅದಕ್ಕೆ ಅತ್ಯುನ್ನತ ಮೌಲ್ಯವಿದೆ,” ಎನ್ನುವುದು ರಾಜ್ ಕುಮಾರ್ ದುಗರ್ ಅವರ ಅಭಿಪ್ರಾಯವಾಗಿದೆ.
ಸುದ್ದಿ ಮೂಲ: ಬೆಂಗಳೂರು ಮಿರರ್
Key words: Heart –touching- news-namma Metro- AED