ಮೈಸೂರು, ಡಿಸೆಂಬರ್ 11, 2023 (www.justkannada.in): ದಸರಾ ಗಜಪಡೆಯ ಪ್ರಮುಖ ಆಕರ್ಷಣೆಯಾಗಿದ್ದ ಅರ್ಜುನ ಆನೆ ಸಾವಿಗೆ ನ್ಯಾಯ ನೀಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಮೈಸೂರು ಮೀಮ್ಸ್ ತಂಡದ ನೇತೃತ್ವದಲ್ಲಿ ನೂರಾರು ಮಂದಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.
ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಭಾನುವಾರ ಸಂಜೆ ನೂರಾರು ಯುವಕರು ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು. ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ ಬರೋಬ್ಬರಿ 8 ವರ್ಷ ಯಶಸ್ವಿಯಾಗಿ ಜಂಬೂಸವಾರಿ ಹೊತ್ತು ಸಾಗಿದ ಅರ್ಜುನನ ಸಾವು ಲಕ್ಷಾಂತರ ಜನರ ಮನಸ್ಸನ್ನು ಘಾಸಿಗೊಳಿಸಿದೆ. ತನ್ನ ಶಕ್ತಿ-ಸಾಮರ್ಥ್ಯ, ಗಾಂಭಿರ್ಯತೆಯಿಂದ ಮೈಸೂರಿಗರು ಮಾತ್ರವಲ್ಲದೇ ನಾಡಿನೆಲ್ಲೆಡೆಯಿಂದ ಪ್ರೀತಿ ಗಳಿಸಿದ್ದ ಅರ್ಜುನನ ಸಾವಿನ ಹಿಂದೆ ಸಾಕಷ್ಟು ಅನುಮಾನಗಳು ಹರಡಿವೆ. ಜತೆಗೆ ಕಾಡಾನೆಗಳ ಉಪಟಳ ತಪ್ಪಿಸಲು ಅರ್ಜುನನಿಂದ ಇನ್ನೂ ಸಾಕಷ್ಟು ಸೇವೆ ನಾಡಿಗೆ ಸಿಗುತ್ತಿತ್ತು. ಆದರೆ ಅರ್ಜುನ ಆನೆ ಹಠಾತ್ ಸಾವು ಎಲ್ಲರಲ್ಲೂ ಕಣ್ಣೀರು ತರಿಸಿದೆ ಎಂದು ಪ್ರತಿಭಟನಾನಿರತರು ಹೇಳಿದರು.
ದಸರಾ ಗಜಪಡೆ ಮಾಜಿ ಕ್ಯಾಪ್ಟನ್ ಅರ್ಜುನ ಆನೆ ಕೇವಲ ದಸರಾ ಹಬ್ಬಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅರಣ್ಯ ಇಲಾಖೆಗೆ ಹಾಗೂ ಕಾಡಿನ ಅಂಚಿನ ಪ್ರದೇಶಗಳಲ್ಲಿ ಹುಲಿ ಹಿಡಿಯುವ ಕಾರ್ಯಕ್ಕೆ ಹಾಗೂ ಕಾಡಾನೆಗಳ ಉಪಟಳವನ್ನು ತಪ್ಪಿಸಲು ಅರ್ಜುನನ್ನು ಬಳಸಿಕೊಳ್ಳಲಾಗುತ್ತಿತ್ತು. ಅರಣ್ಯ ಇಲಾಖೆ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದ ಅರ್ಜುನನ ಪ್ರಾಣಕ್ಕೆ ಅದೇ ಕೆಲಸ ಸಂಚಕಾರ ತಂದಿರುವುದು ವಿಪರ್ಯಾಸ. ಆದರೆ ಅರ್ಜುನನ ಸುರಕ್ಷತೆಯ ಬಗ್ಗೆ ನಿಗಾವಹಿಸದೆ ದಾರುಣ ಸಾವಿಗೆ ಕಾರಣವಾಗಿರುವುದು ಅಕ್ಷಮ್ಯ ಅಪರಾಧ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅರ್ಜುನ ಆನೆ ಸಾವಿಗೆ ಕಾರಣರಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ವಹಿಸಬೇಕು. ಆಗ ಮಾತ್ರ ಅರ್ಜುನ ಆನೆ ಅತ್ಮಕ್ಕೆ ಶಾಂತಿ ಸಿಗುವುದು. ಮುಂದೆ ಇಂತಹ ಘಟನೆಗಳು ಜರುಗದಂತೆ ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ಮೈಸೂರು ತಂಡದ ಸದಸ್ಯರು ಆಗ್ರಹಿಸಿದರು. ಮೈಸೂರು ಮೀಮ್ಸ್ ತಂಡದ ಮನೋರಂಜನ್, ರವಿ ಕೀರ್ತಿ, ಸುಮಂತ್, ಅರ್ಜುನ್ ಅಪ್ಪಯ್ಯ, ಅನುರಾಗ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.