ಬೆಳಗಾವಿ,ಆ,7,2019(www.justkannada.in): ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ಕೃಷ್ಣನದಿಯಲ್ಲಿ ದಿನೇ ದಿನೇ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು ಪ್ರವಾಹ ಸ್ಥಿತಿ ಉಂಟಾಗಿದೆ. ಈ ನಡುವೆ ಮಹಾಮಳೆಗೆ ಬೆಳಗಾವಿ ಜಿಲ್ಲೆ ನಲುಗಿಹೋಗಿದ್ದು ಜಿಲ್ಲೆಯ ಹಲವು ಗ್ರಾಮಗಳು ಜಲಾವೃತವಾಗಿ ಜನರು ಕಂಗಾಲಾಗಿದ್ದಾರೆ.
ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಸೇತುವೆಗಳು ಜಲಾವೃತವಾಗಿವೆ. ಹಾಗೆಯೇ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಖೊದನಾಪುರದಲ್ಲಿ 30ಕ್ಕೂ ಹೆಚ್ಚುಮನೆಗಳು ಜಲಾವೃತವಾಗಿದ್ದು ಕುಟುಂಬಗಳು ಬೀದಿಪಾಲಾಗಿದ್ದಾರೆ.
ಹಾಗೆಯೇ ಹಿರಣ್ಯಕೇಶಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಕೊಚರಿಯಲ್ಲಿದ್ದ 200ಕ್ಕೂ ಹೆಚ್ಚು ಗುಡಿಸಲುಗಳು ಜಲಾವೃತವಾಗಿವೆ. ಗುಡಿಸಲಿನಲ್ಲಿ ಅಲಮಾರಿ ಜನತೆ ವಾಸಿಸುತ್ತಿದ್ದರು ಎನ್ನಲಾಗಿದೆ. ಇನ್ನು ಬೆಳಗಾವಿಯ ಗೋಕಾಕ್ ತಾಲ್ಲೂಕಿನ ತಿಳಕನಾಳ ಗ್ರಾಮದಲ್ಲೂ ವರುಣನ ರುದ್ರನರ್ತನದಿಂದಾಗಿ 200ಕ್ಕೂ ಹೆಚ್ಚುಮನೆಗಳಿಗೆ ನೀರು ನುಗ್ಗಿದ್ದು ಜನರು ಅತಂತ್ರ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ. ಒಟ್ಟಾರೇ ಎಡೆಬಿಡದೆ ನಿರಂತರ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಬೆಳಗಾವಿ ಜಿಲ್ಲೆ ಸಿಲುಕಿ ತತ್ತರಿಸಿದೆ.
Key words: Heavy rain –Belgavi- District-water- many villages-houses