ಮೈಸೂರು,ಆ,6,2020(www.justkannada.in): ಕಳೆದ ಎರಡು ಮೂರು ದಿನಗಳಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಅಲ್ಲದೆ ಕೇರಳದ ವೈನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗಳು ಅಪಾಯಮಟ್ಟ ಮೀರಿ ಹರಿಯುವ ಸೂಚನೆಗಳು ಕಾಣುತ್ತಿವೆ. ಹೀಗಾಗಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮೈಸೂರು ಜಿಲ್ಲಾಧಿಕಾರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸೂಚನೆ ನೀಡಿದ್ದಾರೆ.
ಈ ಸಂಬಂಧ ಡಿಸಿ ಅಭಿರಾಂ ಜೀ ಶಂಕರ್ ಅವರಿಗೆ ಸೂಚನೆ ನೀಡಿರುವ ಸಚಿವ ಎಸ್.ಟಿ ಸೋಮಶೇಖರ್,ಕೇರಳದ ವೈನಾಡು ಭಾಗದಲ್ಲಿ ಭಾರಿ ಮಳೆ ಹಿನ್ನೆಲೆ ಇದರಿಂದ ಮೈಸೂರು ಜಿಲ್ಲೆಯ ಜಲಾಶಯಗಳ ಒಳಹರಿವು ಸಹ ಹೆಚ್ಚಳಗೊಂಡಿದೆ. ಈಗಾಗಲೇ ಜಲಾಶಯಗಳಿಂದ ಅತಿ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳ ಸಹಿತ ಕೆಲವು ಕಡೆ ಪ್ರವಾಹ ಭೀತಿ ಎದುರಾಗಿದ್ದು, ನದಿ ಪಾತ್ರದ ನಾಗರಿಕರು, ಆಸ್ತಿಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು ಜಿಲ್ಲಾಧಿಕಾರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸೂಚನೆ ನೀಡಿದ್ದಾರೆ.
ಕೆಲವು ಕಡೆ ಸೇತುವೆಗಳು ನೀರಿನಿಂದ ಆವೃತವಾಗುವ ಸಾಧ್ಯತೆಗಳೂ ಇದೆ, ರಸ್ತೆ ಸಂಪರ್ಕಗಳು ಸಹ ಸಂಪೂರ್ಣ ಕಡಿತಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ತಂಡಗಳನ್ನು ರಚನೆ ಮಾಡಿ ಅಂತಹ ಸೂಕ್ಷ್ಮ ಪ್ರದೇಶಗಳತ್ತ ಗಮನ ಹರಿಸಬೇಕಿದೆ. ಸಾರ್ವಜನಿಕ ಸಮಸ್ಯೆಗಳಿಗೆ ತುರ್ತು ಸ್ಪಂದಿಸುವ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ನದಿ ದಂಡೆ ಪ್ರದೇಶಗಳಲ್ಲಿ ಬರುವ ಜನರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸಬೇಕು. ಇದಲ್ಲದೆ, ಜಲಾಶಯಗಳಿಗೆ ನೀರು ಬಿಡುವ ಮುಂಚಿತವಾಗಿ ನದಿಪಾತ್ರದ ನಾಗರಿಕರಿಗೆ ಮಾಹಿತಿ ನೀಡಿ ಬೇರೆಡೆ ಸ್ಥಳಾಂತರಗೊಳ್ಳಲು ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಹಾಗೆಯೇ ಅಗತ್ಯವಿದ್ದರೆ ಗಂಜಿ ಕೇಂದ್ರಗಳನ್ನು ತೆರೆಯುವ ಮೂಲಕ ಸಾರ್ವಜನಿಕರ ರಕ್ಷಣೆಗೆ ಧಾವಿಸಬೇಕು. ಇದೇ ವೇಳೆ ಕೋವಿಡ್ – 19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಲು ಕ್ರಮವಹಿಸಬೇಕು. ಜೊತೆಗೆ ಸೂಕ್ತ ವೈದ್ಯಕೀಯ ಸೇವೆಯನ್ನು ನೀಡಲು ಸಿದ್ಧಗೊಳಿಸಿಟ್ಟು ಕೊಳ್ಳಬೇಕು. ಅಲ್ಲದೆ, ಬೆಳೆ ನಾಶ, ಆಸ್ತಿ-ಪಾಸ್ತಿ ಹಾನಿ, ಜೀವಹಾನಿ, ಪ್ರವಾಹ ಸಂಬಂಧಿ ಅವಘಡಗಳಿಗೆ ಸಂಬಂಧಿಸಿದಂತೆ ತ್ವರಿತ ಪರಿಹಾರ ನೀಡಲು ಕ್ರಮವಹಿಸಬೇಕು. ಕಂದಾಯ ಮತ್ತು ನೀರಾವರಿ, ಜೊತೆಗೆ ಇನ್ನಿತರ ಅಗತ್ಯ ಸೇವೆಗಳ ಇಲಾಖೆಗಳ ಅಧಿಕಾರಿಗಳು 24×7 ಮಾದರಿಯಲ್ಲಿ ಕಾರ್ಯನಿರ್ವಹಣೆ ಮಾಡುವಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಡಳಿತಕ್ಕೆ ಸಚಿವ ಎಸ್.ಟಿ ಸೋಮಶೇಖರ್ ಸೂಚಿಸಿದ್ದಾರೆ.
Key words: Heavy rain –flood- Minister -ST Somashekhar –instruct- Mysore -DC