ಮೈಸೂರು, ಜುಲೈ 24, 2021 (www.justkannada.in): ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣ ನೀರು ಹೊರಬಿಡುವ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ಪ್ರವಾಹದ ಭೀತಿ ಸಷ್ಟಿಯಾಗಿದೆ.
ಕೇರಳದ ವೈನಾಡು ಪ್ರಾಂತ್ಯದಲ್ಲಿ ಮಳೆ ಹೆಚ್ಚಾಗಿರುವುದರಿಂದ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದಿಂದ ೩೦ ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಮುಂಭಾಗದಲ್ಲಿರುವ ಸೇತುವೆ ನೀರಿನಲ್ಲಿ ಮುಳುಗಿದೆ.
ಕಪಿಲಾ ನದಿ ತೀರದ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ಸ್ನಾನಘಟ್ಟ ಶುಕ್ರವಾರ ಸಂಪೂರ್ಣ ಮುಳುಗಡೆಯಾಗಿದ್ದರೆ, ಹದಿನಾರು ಕಾಲು ಮಂಟಪದ ಮೇಲ್ಭಾಗದವರೆಗೂ ನೀರು ಆವರಿಸಿದೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನತೆಗೆ ಸ್ಥಳಾಂತರಗೊಳ್ಳುವಂತೆ ತಹಸೀಲ್ದಾರ್ ಸೂಚನೆ ನೀಡಿದ್ದಾರೆ.