ಹೈಕೋರ್ಟ್ ಆದೇಶವನ್ನೇ ನಕಲಿ ಮಾಡಿ ಲಕ್ಷಾಂತರ ರೂ. ವಂಚನೆ: ಆರೋಪಿಗಳು ಅರೆಸ್ಟ್

ಬೆಂಗಳೂರು, ಮಾರ್ಚ್ 6,2025 (www.justkannada.in):  ಕರ್ನಾಟಕ ಹೈಕೋರ್ಟ್  ಆದೇಶವನ್ನೇ ನಕಲಿ ಮಾಡಿ ಲಕ್ಷಾಂತರ ರೂ ಹಣ ವಂಚನೆ ಮಾಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕುಣಿಗಲ್ ಮೂಲದ ವಿಜೇತ್, ಲೋಹಿತ್  ಬಂಧಿತ ಆರೋಪಿಗಳು. ಆರೋಪಿಗಳು ಹೈಕೋರ್ಟ್ ನೀಡುವ ಆದೇಶದ ಪ್ರತಿಯನ್ನೇ ಹೋಲುವ ನಕಲಿ ಆದೇಶ ಪ್ರತಿ ತಯಾರಿಸುತ್ತಿದ್ದರು. ಅದನ್ನು ಬಳಸಿಕೊಂಡು ಅನೇಕರನ್ನು ವಂಚಿಸಿದ್ದರು ಎನ್ನಲಾಗಿದೆ. ಆರೋಪಿ ವಿಜೇತ್, ಜಾರಿ ನಿರ್ದೇಶನಾಲಯ (ಇಡಿ) ಹಣ ಮುಟ್ಟುಗೋಲು ಹಾಕಿಕೊಂಡ ಪ್ರಕರಣವೊಂದಕ್ಕೆ ಸಂಬಂಧಿಸಿದ್ದು ಎಂಬ ನಂಬಿಕೆ ಬರುವ ರೀತಿಯಲ್ಲಿ ಹೈಕೋರ್ಟ್ ಆದೇಶವನ್ನೇ ಹೋಲುವಂತೆ ನಕಲಿ ಆದೇಶ ಪ್ರತಿ ತಯಾರಿಸಿದ್ದನು.

ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ. ಆದರೆ, ಹೈಕೋರ್ಟ್​ ಈ ತಮ್ಮ ಪರ ತೀರ್ಪು ನೀಡಿದ್ದು, ಸೀಜ್ ಮಾಡಿದ ಹಣವನ್ನು ಜಾರಿ ನಿರ್ದೇಶನಾಲಯ ನಮಗೆ ನೀಡಬೇಕಿದೆ. ಆ ಹಣವನ್ನು ಬಿಡಿಸಿಕೊಳ್ಳಲು ಸ್ವಲ್ಪ ಹಣ ಬೇಕಾಗಿದೆ. ಮೊತ್ತ ಕೈಸೇರಿದ ಕೂಡಲೇ ಹಿಂದಿರುಗಿಸುವುದಾಗಿ ಆರೋಪಿಗಳು ಜನರನ್ನು ವಂಚಿಸುತ್ತಿದ್ದರು. ಹೈಕೋರ್ಟ್ ಆದೇಶವನ್ನೇ ಹೋಲುವ ನಕಲಿ ಪ್ರತಿ ತಯಾರಿಸಿ ಜನರಲ್ಲಿ ನಂಬಿಕೆ ಬರುವಂತೆ ಮಾಡಿ ಹಣ ಪೀಕುತ್ತಿದ್ದರು ಎನ್ನಲಾಗಿದೆ. ಆರೋಪಿಗಳು ಇದನ್ನು ನಂಬಿ ಹಣ ಕೊಟ್ಟ ಮೂವರಿಗೆ ವಂಚನೆ ಮಾಡಿದ್ದರು. ಸುಮಾರು 70 ಲಕ್ಷ ರೂಪಾಯಿಗೂ ಹೆಚ್ಚಿನ ಹಣ ಪಡೆದು ವಂಚಿಸಿದ್ದರು ಎಂದು ಹೇಳಲಾಗುತ್ತಿದೆ.

Key words: High Court, fake order, Fraud, Arrest, accused