ನಿಮ್ಮಿಂದ ಫ್ರೀ ವಿದ್ಯುತ್ ಯಾರು ಕೇಳಿದ್ರು..? ಹೈಕೋರ್ಟ್ ಗರಂ: ಸ್ಮಾರ್ಟ್ ಮೀಟರ್​ ಶುಲ್ಕಕ್ಕೆ ತಡೆ

ಬೆಂಗಳೂರು, ಏಪ್ರಿಲ್, 25,2025 (www.justkannada.in) : ಬೆಸ್ಕಾಂನ ಸ್ಮಾರ್ಟ್​ ಮೀಟರ್​​ ಅಳವಡಿಕೆ, ಭಾರಿ ಮೊತ್ತದ ಹೆಚ್ಚುವರಿ ದರ ನಿಗದಿ ಮಾಡಿರುವುದಕ್ಕೆ ಗರಂ ಆದ ಹೈಕೋರ್ಟ್ ಸ್ಮಾರ್ಟ್ ಮೀಟರ್ ಶುಲ್ಕಕ್ಕೆ ತಡೆ ನೀಡಿದೆ.

ವಿದ್ಯುತ್‌ ಬಳಕೆ ಸಂಬಂಧ ರಿಯಲ್ ಟೈಂನಲ್ಲಿ ವಿದ್ಯುತ್ ಬಳಕೆ ಬಗ್ಗೆ ನಿಖರ ಮಾಹಿತಿ ಒದಗಿಸುವ ಸ್ಮಾರ್ಟ್‌ ಮೀಟರ್‌ ಗಳಿಗೆ ಬೆಸ್ಕಾಂ ಭಾರಿ ಮೊತ್ತದ ಹೆಚ್ಚುವರಿ ದರ ನಿಗದಿ ಮಾಡಿರುವುದನ್ನ ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ  ವಿಚಾರಣೆ ನಡೆಸಿದ ಹೈಕೋರ್ಟ್‌  ನ್ಯಾಯಮೂರ್ತಿ ಎಂ.‌ನಾಗಪ್ರಸನ್ನ ಅವರಿದ್ದ  ಪೀಠ ಸ್ಮಾರ್ಟ್​ ಮೀಟರ್​​ ಶುಲ್ಕಕ್ಕೆ ತಡೆ ನೀಡಿದೆ.

2000 ರೂಪಾಯಿ ಇದ್ದ ಮೀಟರ್‌ ಗೆ ಈಗ 8910 ರೂ. ಕೊಡಬೇಕಿದೆ ಎಂದು ಬೆಸ್ಕಾಂ ಕ್ರಮ ಪ್ರಶ್ನಿಸಿ ಜಯಲಕ್ಷ್ಮೀ ಎನ್ನುವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.   ಈ ಅರ್ಜಿಯನ್ನ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.‌ನಾಗಪ್ರಸನ್ನ ಅವರಿದ್ದ ಪೀಠವು, ಬಡವರಿಂದ ಇಷ್ಟು ಹಣ ಕಿತ್ತುಕೊಂಡರೆ  ಅವರು ಎಲ್ಲಿಗೆ ಹೋಗಬೇಕು. ಎಲ್ಲರೂ ಸ್ಮಾರ್ಟ್ ಮೀಟರ್ ಹಾಕಬೇಕೆಂದರೆ ಬಡವರೇನು ಮಾಡಬೇಕು. ನಿಮ್ಮಿಂದ ಯಾರು ಫ್ರೀ ವಿದ್ಯುತ್ ಕೇಳಿದ್ದರು?  ಎಂದು ತರಾಟೆಗೆ ತೆಗೆದುಕೊಂಡಿತು.  ನಂತರ ಬೆಸ್ಕಾಂನ ಪ್ರೀಪೇಯ್ಡ್ ಮೀಟರ್ ಶುಲ್ಕ‌ಕ್ಕೆ ಮಧ್ಯಂತರ ತಡೆ ಆದೇಶ ಹೊರಡಿಸಿದೆ.

ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ,  ಬೇರೆ ರಾಜ್ಯಗಳಲ್ಲಿ 900 ರೂಪಾಯಿಗೆ ಪ್ರೀಪೇಯ್ಡ್ ಮೀಟರ್ ನೀಡಲಾಗುತ್ತಿದೆ. ಕೆಇಆರ್‌ಸಿ ಸ್ಮಾರ್ಟ್ ಮೀಟರ್ ಕಡ್ಡಾಯವಲ್ಲವೆಂದಿತ್ತು. ಆದರೆ ಬೆಸ್ಕಾಂ ಸುತ್ತೋಲೆ ಸ್ಮಾರ್ಟ್ ಮೀಟರ್ ಕಡ್ಡಾಯ ಎಂದಿದೆ ಎಂದು ವಾದಿಸಿದರು.

Ket words: free electricity, High Court, Stay, smart meter, charges