ಮುಡಾ ಕೇಸ್ CBI ತನಿಖೆಗೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

ಬೆಂಗಳೂರು,ನವೆಂಬರ್,5,2024 (www.justkannada.in): ಮುಡಾ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸುವಂತೆ ಮನವಿ ಮಾಡಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 26ಕ್ಕೆ ಮುಂದೂಡಿಕೆ ಮಾಡಿದೆ.

ಮುಡಾ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸ್ನೇಹಮಯಿ  ಕೃಷ್ಣ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ನ್ಯಾ.ನಾಗಪ್ರಸನ್ನ ಅವರ ಪೀಠದಲ್ಲಿ  ಇಂದು ವಿಚಾರಣೆ  ನಡೆಯಿತು, ಸ್ನೇಹಮಯಿ ಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆಜಿ ರಾಘವನ್, ಪ್ರಕರಣವನ್ನ ಸಿಬಿಐ ತನಿಖೆಗೆ ಕೋರಿದ್ದೇವೆ ಎಂದರು.

ಈ ವೇಳೆ ಲೋಕಯುಕ್ತ ಪೊಲೀಸರು ತನಿಖೆ ಮಾಡುತ್ತಿಲ್ಲವೇ ಎಂದು ನ್ಯಾ ನಾಗಪ್ರಸನ್ನ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಾಘವನ್, ಸಾರ್ವಜನಿಕರ ನಂಬಿಕೆ ಉಳಿಯುವಂತೆ ತನಿಖೆ ಮಾಡಬೇಕಿದೆ ಎಂದರು.

ಈ ನಡುವೆ ರಾಜ್ಯ ಅಭಿಯೋಜಕ ಜಗದೀಶ್  2ವಾರ ಕಾಲಾವಕಾಶ  ಕೋರಿದ್ದು ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಹೈಕೋರ್ಟ್ ನ್ಯಾ. ನಾಗಪ್ರಸನ್ನ ನವೆಂಬರ್ 26ಕ್ಕೆ ಮುಂದೂಡಿದರು. ಹಾಗೆಯೇ ನವೆಂಬರ್ 25ರವರೆಗೆ ನಡೆದಿರುವ ತನಿಖೆ ವಿವರ ಒದಗಿಸಲು ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದರು.

Key words:  High Court, petition, CBI, probe, Muda case