ಮುಂಬೈ, ಏಪ್ರಿಲ್ 28, 2020 (www.justkannada.in): ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಮನೆಗಳಿಗೆ ದಿನ ಪತ್ರಿಕೆ ಹಂಚುವುದಕ್ಕೆ ನಿರ್ಬಂಧ ವಿಧಿಸಿದ್ದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡಿರುವ ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠ, ಈ ಬಗ್ಗೆ ವಿಚಾರಣೆ ನಡೆಸಿತು. ಆರೋಗ್ಯ ತಜ್ಞರ ಅಭಿಪ್ರಾಯ ಪಡೆಯದೇ ನಿಮ್ಮಿಷ್ಟ ಬಂದಂತೆ ಹೇಗೆ ನಡೆದುಕೊಂಡಿರುವಿರಿ ಎಂದು ಪೀಠ ಪ್ರಶ್ನಿಸಿದೆ.
ಪತ್ರಿಕೆಯನ್ನು ಬೇಕಿದ್ದರೆ ಅಂಗಡಿಗೆ ಹೋಗಿ ಖರೀದಿಸಬಹುದು, ಆದರೆ ಮನೆ ಮನೆಗೆ ಹಂಚುವ ಹಾಗಿಲ್ಲ ಎಂದು ಸರ್ಕಾರ ಆದೇಶಿಸಿತ್ತು. ಈ ಬಗ್ಗೆ ನ್ಯಾಯಮೂರ್ತಿ ಪ್ರಸನ್ನ ಬಿ. ವರಲೆ ಅವರು ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಎಲ್ಲ ವಿವರಗಳನ್ನು ಹಾಗೂ ತಾವು ಕೇಳಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡುವ ಮೂಲಕ ಹೆಚ್ಚುವರಿಯಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಮೂರ್ತಿಗಳು ವಿಚಾರಣೆಯನ್ನು ಜೂನ್ 11ಕ್ಕೆ ಮುಂದೂಡಿದ್ದಾರೆ.