ಕನ್ನಡದಲ್ಲೇ ತೀರ್ಪು ನೀಡಿ ಇತಿಹಾಸ ಸೃಷ್ಠಿಸಿದ ನ್ಯಾ. ಕೃಷ್ಣ ಎಸ್.ದೀಕ್ಷಿತ್

ನ್ಯಾ.ಡಾ.ಕೃಷ್ಣ ಎನ್.ದೀಕ್ಷಿತ್.‌ ಚಿತ್ರಕೃಪೆ : ಇಂಟರ್‌ ನೆಟ್

ಬೆಂಗಳೂರು,ಡಿಸೆಂಬರ್,13,2024 (www.justkannada.in): ನವೆಂಬರ್ ಬಂತೆಂದರೆ‌ ಎಲ್ಲರೂ ಕನ್ನಡ ಕನ್ನಡ ಎನ್ನುತ್ತಾರೆ. ನವೆಂಬರ್ ಮುಗಿಯುತ್ತಿದ್ದಂತೆ ಬಹುತೇಕರ ಕನ್ನಡ ಪ್ರೇಮ ಕಡಿಮೆಯಾಗುತ್ತದೆ. ಕನ್ನಡ ಭಾಷೆಯನ್ನು ಉಳಿಸುವ ಬೆಳೆಸುವ ಘೋಷಣೆಗಳು ಮಾತುಗಳು‌‌ ಭಾಷಣಗಳು ಸರ್ವೇ ಸಾಮಾನ್ಯ. ಆದ್ರೆ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಸದ್ದಿಲ್ಲದೆ ಕನ್ನಡದ‌ ಸೇವೆಯನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕನ್ನಡದಲ್ಲೇ‌ ತೀರ್ಪು..!

ಹೌದು, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಕನ್ನಡ ಭಾಷೆಯಲ್ಲೇ ತೀರ್ಪು ಪ್ರಕಟಿಸಿದ್ದಾರೆ. ಈ ಹಿಂದೆ ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ತೀರ್ಪು ಪ್ರಕಟಿಸಿ ಇತಿಹಾಸ ಸೃಷ್ಟಿಸಿದ್ದರು.

ಕೃಷ್ಣ ಎಸ್.‌ ದೀಕ್ಷಿತ್‌ & ನ್ಯಾ.ಸಿ.ಎಂ.ಜೋಶಿ ಅವರ ವಿಭಾಗೀಯ ಪೀಠವು ತುಮಕೂರಿನ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿ Vs ಲಿಂಗಣ್ಣ ಮತ್ತು ಇತರರು ಸಲ್ಲಿಸಿದ್ದ ಮೂಲ ಮೇಲ್ಮನವಿಯನ್ನು ​​​​ ಪುರಸ್ಕರಿಸಿದೆ. ಈ ಪ್ರಕರಣದ ತೀರ್ಪನ್ನು ಕನ್ನಡದಲ್ಲೇ ನ್ಯಾಯಪೀಠ ಪ್ರಕಟಿಸಿದೆ.

ಇಂದು ತೀರ್ಪು ಪ್ರಕಟಿಸುವುದಕ್ಕೂ ಮುನ್ನ ನ್ಯಾ.ದೀಕ್ಷಿತ್, “ನಮ್ಮ ಎಲ್ಲ ತೀರ್ಪುಗಳನ್ನು ಇಂಗ್ಲಿಷ್‌ ನಲ್ಲಿ ನೀಡುತ್ತಿದ್ದೇವೆ. ಅದು ಜನಸಾಮಾನ್ಯರಿಗೆ ಅರ್ಥವಾಗುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಇಂಗ್ಲೆಂಡ್ ದೇಶದಲ್ಲಿ 1730ರವರೆಗೆ ನ್ಯಾಯಾಲಯಗಳ ಎಲ್ಲ ಪ್ರಕ್ರಿಯೆಗಳು ಮತ್ತು ತೀರ್ಪುಗಳು ಲ್ಯಾಟಿನ್ ಭಾಷೆಯಲ್ಲಿ ಇರುತ್ತಿತ್ತು. 1730ರಲ್ಲಿ ನ್ಯಾಯಾಂಗ ಪ್ರಕ್ರಿಯೆ ನಮ್ಮ ಭಾಷೆಯಲ್ಲಿಯೇ ಆಗಬೇಕು ಎಂದು ಶಾಸನ ಜಾರಿ ಮಾಡಿದರು. ಅಂದಿನಿಂದ ಇಲ್ಲಿಯವರೆಗೂ ಇಂಗ್ಲಿಷ್ ಭಾಷೆಯಲ್ಲಿಯೇ ನ್ಯಾಯಾಲಯದ ಪ್ರಕ್ರಿಯೆಗಳು ನಡೆಯುತ್ತಿವೆ” ಎಂದು ತಿಳಿಸಿದರು.

“ನ್ಯಾಯಾಲಯದ ತೀರ್ಪಿನ ಮೂಲ ವಿಷಯಗಳು ಸಾಮಾನ್ಯ ಜನರಿಗೆ ತಿಳಿಯಬೇಕು. ಆದ್ದರಿಂದ ಕನ್ನಡ ಭಾಷೆಯಲ್ಲಿ ತೀರ್ಪು ನೀಡಬೇಕಾದ ಅನಿವಾರ್ಯತೆ ಇದೆ. ನಿನ್ನೆ ಅಂದರೆ ಡಿ.11 ಭಾರತ ಭಾಷಾ ದಿವಸ. ಭಾಷೆಗಳಿಗೆ ಮಾನ್ಯತೆ ನೀಡುವ ದಿನ. ಆದ್ದರಿಂದ, ಡಿ.12 ಕನ್ನಡದಲ್ಲಿ ತೀರ್ಪು ನೀಡುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ತೀರ್ಪು ಪ್ರಕಟಿಸಿದ ಬಳಿಕ ಕನ್ನಡ‌ ಭಾಷೆಯ ಮಹತ್ವದ ಬಗ್ಗೆ ನ್ಯಾ.ದೀಕ್ಷಿತ್ ವಿಸ್ತೃತವಾಗಿ ತಿಳಿಸಿದರು. “ಕನ್ನಡದ ಅವಸಾನ ಆಗಬಾರದು ಎನ್ನುವುದಾದರೆ ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳಲ್ಲಿಯೂ ಕನ್ನಡದಲ್ಲಿ ವ್ಯವಹಾರ ನಡೆಯಬೇಕು” ಎಂಬ ಆಶಯ ವ್ಯಕ್ತಪಡಿಸಿದರು.

“ಎಲ್ಲರಿಗೂ ತಿಳಿಯಬೇಕೆನ್ನುವ ಉದ್ದೇಶದಿಂದ ಹಾಗೆ ಮಾಡಲಾಗಿದೆ. ಆದರೆ, ನಮ್ಮಲ್ಲಿ ಕೇಶವಾನಂದ ಭಾರತಿ ತೀರ್ಪು ನಮಗೇ ತಿಳಿಯುವುದಿಲ್ಲ. ವಕೀಲರಿಗೆ ಅದು ತಿಳಿಯಬಹುದು. ಆದೇಶದ ಸಕಾರಣಗಳನ್ನು ಒಳಗೊಂಡ ಭಾಗ ತಿಳಿಯಲಿ, ಬಿಡಲಿ. ಅಂತಿಮ ಭಾಗವನ್ನು ಕನ್ನಡದಲ್ಲಿ ನೀಡಬೇಕು. ಆಗ ದಾವೆದಾರರಿಗೆ ಅರ್ಥವಾಗುತ್ತದೆ ಎಂದು ತಿಳಿಸಿದರು.

ವಿಶೇಷವೆಂದರೆ, ತೀರ್ಪುಗಳನ್ನು ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಳಕೆ ಮಾಡಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಈಚೆಗೆ ಆರಂಭಿಸಲಾಗಿದೆ. ಇದರ ಭಾಗವಾಗಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಸಿ.ಎಂ.ಜೋಶಿ ನೇತೃತ್ವದಲ್ಲಿ ಕೃತಕ ಬುದ್ದಿಮತ್ತೆ ಬಳಕೆ ಮಾಡಿ ನ್ಯಾಯಾಂಗ ದಾಖಲೆಗಳನ್ನು ಅನುವಾದ ಮಾಡುವ ಸಲಹಾ ಸಮಿತಿಯನ್ನು 2023ರ ಫೆಬ್ರವರಿಯಲ್ಲಿ ರಚಿಸಲಾಗಿದೆ.

ಕನ್ನಡದಲ್ಲಿ ನೀಡಿದ ತೀರ್ಪಿನ ವಿವರ

ತುಮಕೂರಿನ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿರುವ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಪ್ರಕರಣದಲ್ಲಿ ವಿವರಿಸಲಾದ ಕಾರಣಗಳಿಂದಾಗಿ ಈ ಮೇಲ್ಮನವಿಯನ್ನು ಪುರಸ್ಕರಿಸಲಾಗಿದೆ. ಈ ಆದೇಶವನ್ನು ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ನ್ಯಾಯಪೀಠ ಪ್ರಕಟಿಸಿತು.

ಏಕ ಸದಸ್ಯ ನ್ಯಾಯಾಧೀಶರ ಪ್ರಶ್ನಿತ ತೀರ್ಪು ಮತ್ತು ಆದೇಶವನ್ನು ರದ್ದುಗೊಳಿಸಲಾಗಿದೆ. ಪ್ರತಿವಾದಿಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಲಾಗಿದೆ. ಪರಿಣಾಮವಾಗಿ ಟಿಒಎಸ್ ಸಂಖ್ಯೆ 1/2023ರಲ್ಲಿ ಮೇಲ್ಮನವಿದಾರರ ದಾವೆಯನ್ನು ಪುನರುಜ್ಜೀವನಗೊಳಿಸಲಾಗಿದೆ. ಅದನ್ನು ಕಾನೂನು ರೀತ್ಯಾ ವಿಚಾರಣೆ ಮತ್ತು ವಿಲೇವಾರಿ ಮಾಡಬೇಕಾಗುತ್ತದೆ. ಯಾರೂ ವೆಚ್ಚವನ್ನು ಭರಿಸುವಂತಿಲ್ಲ ಎಂದು ಕೋರ್ಟ್‌ ಆದೇಶದಲ್ಲಿ ತಿಳಿಸಲಾಗಿದೆ.

ಈ ಮೂಲಕ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮಹತ್ವದ ಹೆಜ್ಜೆ‌ ಇಟ್ಟಿದ್ದಾರೆ. ಹೀಗಾಗಲೇ ಅವರು ನೀಡಿರುವ ಕೆಲವು ತೀರ್ಪುಗಳು ನಮ್ಮ ಕಲೆ ಸಂಸ್ಕೃತಿಯನ್ನು ನೆನಪಿಸುವ ತೀರ್ಪುಗಳಾಗಿದ್ದು ಇದೀಗ ಕನ್ನಡದಲ್ಲೇ ತೀರ್ಪು ನೀಡಿರುವುದು ಅವರ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿದೆ. ಆಡು ಮುಟ್ಟದ ಸೊಪ್ಪಿಲ್ಲ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ರಿಗೆ ತಿಳಿಯದ ಯಾವುದೇ ವಿಚಾರಗಳಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಕನ್ನಡಂಬೆಯ ಹೆಮ್ಮೆಯ ಪುತ್ರ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ರಿಗೆ ಲಾಗೈಡ್ ಬಳಗದಿಂದ ಹೃದಯಪೂರ್ವಕ ಕೃತಜ್ಞತೆಗಳು.

Key words: Justice, Krishna S. Dixit, history, verdict in Kannada