ಬೆಂಗಳೂರು, ಜನವರಿ 17,2022 (www.justkannada.in): ‘ಡೊಲೊ-೬೫೦’ ಈ ಮಾತ್ರೆ ಯಾರಿಗೆ ತಾನೇ ಗೊತ್ತಿಲ್ಲ. ಈ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಂತೂ ಡೊಲೊ-೬೫೦ ಮಾತ್ರೆಗಳಿಗೆ ಎಲ್ಲಿಲ್ಲದ ಬೇಡಿಕೆ. ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ಬಹುಪಾಲು ಎಲ್ಲಾ ವೈದ್ಯರ ಚೀಟಿಗಳಲ್ಲೂ ಸಹ ಈ ಮಾತ್ರೆಗಳನ್ನು ತಪ್ಪದೇ ಬರೆಯಲಾಗಿರುತ್ತದೆ.
ವರದಿಯೊಂದರ ಪ್ರಕಾರ, ಬೆಂಗಳೂರು ಮೂಲದ ಮೈಕ್ರೊ ಲ್ಯಾಬ್ಸ್ ಲಿ. ತಯಾರಿಸುವ ಡೊಲೊ-೬೫೦, ಜನವರಿ ೨೦೨೦ರಿಂದ ಬೃಹತ್ ಪ್ರಮಾಣದ ಮಾರಾಟವನ್ನು ಕಂಡಿದೆ. ತನ್ನ ಹತ್ತಿರದ ಇತರೆ ಪ್ಯಾರಾಸಿಟಮಾಲ್ ಮಾತ್ರೆಗಳನ್ನು ತಯಾರಿಸುವ ಪ್ರತಿಸ್ಪರ್ಧಿ ಸಂಸ್ಥೆಗಳಾದ ಜಿಎಸ್‌ಕೆ ಫಾರ್ಮಾದ ‘ಕ್ಯಾಲ್ಪಾಲ್,’ ‘ಸುಮೊ ಎಲ್,’ ಹಾಗೂ ಇನ್ನಿತರೆ ಸುಮಾರು ೪೦ ಇತರೆ ಬ್ರ್ಯಾಂಡ್‌ಗಳ ಮೇಲೆ ಮೈಲುಗೈ ಸಾಧಿಸಿ ಬರೋಬ್ಬರಿ ದಾಖಲೆಯ ರೂ.೫೬೦ ಕೋಟಿ ಮಾರಾಟ ಕಂಡಿದೆ.
ಪ್ರಸ್ತುತ ಭಾರತ ಕೋವಿಡ್-೧೯ ಸಾಂಕ್ರಾಮಿಕದ ಮೂರನೇ ಅಲೆಗೆ ಸಾಕ್ಷಿಯಾಗಿದೆ. ದೇಶದಾದ್ಯಂತ ಪ್ರತಿ ದಿನದ ಸೋಂಕಿತರ ಸಂಖ್ಯೆ ೨ ಲಕ್ಷ ದಾಟಿದ್ದು, ಪ್ಯಾರಾಸಿಟಮಾಲ್ ಮಾತ್ರೆಗಳ ಬೇಡಿಕೆ ಏರುತ್ತಲೇ ಇದೆ.
ಡಿಸೆಂಬರ್ ೨೦೨೧ರಲ್ಲಿ ಡೊಲೊ-೬೫೦ ರೂ.೨೮.೯ ಕೋಟಿ ಮೊತ್ತದ ಮಾರಾಟವನ್ನು ಕಂಡಿದ್ದು, ಇದು ಕಳೆದ ವರ್ಷಕ್ಕಿಂತ ಶೇ.೬೦%ರಷ್ಟು ಹೆಚ್ಚಿನ ಪ್ರಮಾಣದ ಮಾರಾಟವಾಗಿದೆ. ಏಪ್ರಿಲ್ ಹಾಗೂ ಮೇ ೨೦೨೧ರಲ್ಲಿ ಸಾಂಕ್ರಾಮಿಕದ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ಈ ಮಾತ್ರೆಗಳ ಬೇಡಿಕೆ ಹಾಗೂ ಮಾರಾಟ ಅತೀ ಹೆಚ್ಚಾಗಿತ್ತು ಎನ್ನಲಾಗಿದೆ. ಅದೇ ತಿಂಗಳಲ್ಲಿ ತನ್ನ ಪ್ರತಿಸ್ಪರ್ಧಿ ಕಂಪನಿ ತಯಾರಿಸುವ ಕ್ಯಾಲ್ಪಾಲ್ (Calpol) ಮಾತ್ರೆಗಳ ಮಾರಾಟವೂ ಸಹ ರೂ.೨೮ ಕೋಟಿಗಳಷ್ಟು ವಹಿವಾಟನ್ನು ದಾಖಲಿಸಿದ್ದು, ಹಿಂದಿನ ವರ್ಷದ ಹೋಲಿಕೆಯಲ್ಲಿ ಶೇ.೫೬ರಷ್ಟು ಹೆಚ್ಚಳವನ್ನು ದಾಖಲಿಸಿದೆ.
ಅತೀ ಹೆಚ್ಚಿನ ಸಂಖ್ಯೆಯ ವೈದ್ಯರು ಡೊಲೊ-೬೫೦ ಮಾತ್ರೆಗಳನ್ನು ಶಿಫಾರಸ್ಸು ಮಾಡುತ್ತಾರೆ. ಆದ್ದರಿಂದ ಇದರ ಮಾರಾಟ ಪ್ರಮಾಣ ಮುಗಿಲು ಮುಟ್ಟಿದೆ. “ಡೊಲೊ-೬೫೦ ಪ್ಯಾರಾಸಿಟಮಾಲ್ ನ ಒಂದು ಬ್ರ್ಯಾಂಡ್ ಆಗಿದ್ದು, ಜ್ವರಕ್ಕೆ ಅತೀ ಸೂಕ್ತವಾಗಿರುವಂತ ಗುಳಿಗೆಳಾಗಿವೆ. ಇದೇ ರೀತಿಯ ಇತರೆ ಮಾತ್ರೆಗಳಾದ ‘ಕ್ರೋಸಿನ್,’ ‘ಕ್ಯಾಲ್ಪಾಲ್,’ ‘ಪ್ಯಾಸಿಮಾ,’ ಇತ್ಯಾದಿಗಳಿಗಿಂತ ಇದೇನೂ ಭಿನ್ನವಲ್ಲ. ಆದರೆ ಇತರೆ ಬ್ರ್ಯಾಂಡ್ ಗಳ ಪ್ಯಾರಾಸಿಟಮಾಲ್ ಮಾತ್ರೆಗಳ ಹೋಲಿಕೆಯಲ್ಲಿ, ಹೃದಯ ಸಂಬಂಧಿತ ಖಾಯಿಲೆಗಳಿರುವವರು, ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವವರು ಹಾಗೂ ಮಧುಮೇಹಿಗಳೂ ಸೇರಿದಂತೆ ಬಹುತೇಕ ಎಲ್ಲಾ ವಯೋಮಾನದವರಿಗೂ ಸಹ ಡೊಲೊ-೬೫೦ ತೆಗೆದುಕೊಡರೆ ಸುರಕ್ಷಿತ ಎಂದು ಭಾವಿಸುತ್ತಾರೆ,” ಎನ್ನುವುದು ದೆಹಲಿಯ ಫೋರ್ಟಿಸ್ ಸಿ-ಡಿಒಸಿ ಆಸ್ಪತ್ರೆಯ ರಿತೇಶ್ ಗುಪ್ತಾ ಅವರ ಅಭಿಪ್ರಾಯವಾಗಿದೆ.
ನಕಲು ಪ್ರತಿಗಳೆಂದರೆ ಜೆರಾಕ್ಸ್ ಅಥವಾ ಮಿನರಲ್ ವಾಟರ್‌ನಲ್ಲಿ ಬಿಸ್ಲೇರಿ ಬ್ರ್ಯಾಂಡ್‌ಗಳಿದ್ದಂತೆ ಪ್ಯಾರಾಸಿಟಮಾಲ್ ಎಂದರೆ ಡೊಲೊ-೬೫೦ ಎನ್ನುವಷ್ಟರ ಮಟ್ಟಿಗೆ ಈ ಮಾತ್ರೆಗಳು ಮನೆಮಾತಾಗಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಈ ಹೊಸ ವರ್ಷದಲ್ಲಿಯೂ ಸಹ ಸಾಂಕ್ರಾಮಿದಕ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರುತ್ತಿದೆ. ಈ ಹಿನ್ನೆಲೆಯಲ್ಲಿ, ಅದರಲ್ಲೂ ಭಾರತದಲ್ಲಿ ಡೊಲೊ-೬೫೦ ಜನರ ಅತ್ಯಂತ ನೆಚ್ಚಿನ “ಖಾದ್ಯ”ದಂತಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಮಾತ್ರೆಯ ಕುರಿತು ಅನೇಕ ವಿನೋದಭರಿತ ಸಂದೇಶಗಳೂ ಟ್ರೋಲ್ ಆಗುತ್ತಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: High demand – Dolo-650 -manufactured – India