ಅ.3 ರಿಂದ ದಸರಾ ಮಹೋತ್ಸವ: ಈ ಬಾರಿ 21 ದಿನ ದೀಪಾಲಂಕಾರ.

ಬೆಂಗಳೂರು ಆಗಸ್ಟ್,12,2024 (www.justkannada.in):  ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಕ್ಟೋಬರ್ 3ರಿಂದ ಪ್ರಾರಂಭವಾಗಲಿದ್ದು ಅಂದು ದಸರಾಗೆ ಚಾಲನೆ ಸಿಗಲಿದೆ. ಈ ಬಾರಿ 21 ದಿನಗಳ ಕಾಲ ದೀಪಾಲಂಕಾರವಿರಲಿದೆ. ಹಾಗೆಯೇ ವಿಜೃಂಭಣೆಯಿಂದ ದಸರಾ ಆಚರಣೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ದಸರಾ ಮಹೋತ್ಸವ ಸಂಬಂಧ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಹೈ ಪವರ್ ಕಮಿಟಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.  ದಸರಾ ಮಹೋತ್ಸವ ಜನರ ಉತ್ಸವ ಆಗಬೇಕು. ಕಳೆದ ವರ್ಷ ಕೊರೋನಾ-ಬರಗಾಲ ಕಾರಣಕ್ಕೆ ಹೆಚ್ಚು ವಿಜೃಂಭಣೆಯಿಂದ ಮಾಡಲಿಲ್ಲ. ಈ ಬಾರಿ ಟ್ಯಾಬ್ಲೋಗಳು ಹೆಚ್ಚು ಆಕರ್ಷಕ ಮತ್ತು ಅರ್ಥಪೂರ್ಣವಾಗಿರಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ‌ ಅವಕಾಶ ನೀಡಬೇಕು. ನಮ್ಮ ಕಲಾವಿದರು ಹೆಚ್ಚು ಸಮರ್ಥರಿದ್ದಾರೆ. ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆ, ಆಹಾರ, ವಸ್ತು ಪ್ರದರ್ಶನ, ಕುಸ್ತಿ ಪ್ರದರ್ಶನ, ದೀಪಾಂಲಕಾರ ಸೇರಿ ಪ್ರತಿಯೊಂದೂ ಆಕರ್ಷಣೀಯ ಮತ್ತು ಅರ್ಥಪೂರ್ಣ ಆಗಿರಬೇಕು ಎಂದು ಸೂಚಿಸಿದರು.

ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಸಾರ್ಥಕ‌ ಕೆಲಸಗಳ ಪ್ರದರ್ಶನ ಮತ್ತು ತಿಳಿವಳಿಕೆ ಮೂಡಿಸಬೇಕು. ಟ್ಯಾಬ್ಲೋಗಳಲ್ಲಿ ಹೊಸತನ ಇರಲಿ.  ವಿಜೃಂಭಣೆಯ ನಾಡಹಬ್ಬಕ್ಕೆ ಅಗತ್ಯವಿದ್ದಷ್ಟು ಹಣವನ್ನು ನೀಡುತ್ತೇವೆ. ದೀಪಾಲಂಕಾರ ಈ ಬಾರಿ 21 ದಿನ ಇರಲಿ.  ಯುವ ದಸರಾ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲೆ, ಪ್ರತಿಭೆ ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಎಂದರು.

ಗೋಲ್ಡ್ ಕಾರ್ಡ್ ಗಳನ್ನು ಮುಂಚಿತವಾಗಿ ಮಾಡಿ. ಪಾರ್ಕಿಂಗ್, ಟ್ರಾಫಿಕ್, ಬಂದೋಬಸ್ತ್ ಕಡೆಗೆ ಪೊಲೀಸ್ ಇಲಾಖೆ ಹೆಚ್ಚಿನ ಗಮನ ಕೊಡಬೇಕು. ಕರ್ನಾಟಕ ಸಂಭ್ರಮ 50 ನವೆಂಬರ್ ವರೆಗೂ ನಡೆಯಲಿದೆ. ದಸರಾದಲ್ಲಿ ಇದನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಿ ಎಂದು ಸೂಚಿಸಿದರು.

ಏರ್ ಶೋಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಲಾಗುವುದು. ಸ್ವಲ್ಪ ಹೆಚ್ಚಿನ ಸಮಯ ಏರ್ ನಡೆಸಲೂ ವಿನಂತಿಸಲಾಗುವುದು. ಅಧಿಕಾರಿಗಳು ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು. ಮಾಮೂಲು ಹಳೆ ಪದ್ಧತಿಗಳಲ್ಲೇ ಮಾಡುವುದಕ್ಕಿಂತ upgrade (ಉನ್ನತೀಕರಿಸಿ) ಮಾಡಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ದಸರಾ ಉದ್ಘಾಟನೆ ಯಾರಿಂದ ಮಾಡಿಸಬೇಕು ಎನ್ನುವ ತೀರ್ಮಾನವನ್ನು ಮುಖ್ಯಮಂತ್ರಿಗಳಿಗೆ ಒಪ್ಪಿಸಿ ಸಭೆ ನಿರ್ಧರಿಸಿತು.

Key words: High level dasara committee, meeting, CM, Siddaramaiah