ಮೈಸೂರು,ಫೆಬ್ರವರಿ,8,2022(www.justkannada.in): ವಿದ್ಯಾಸಂಸ್ಥೆಗಳಲ್ಲಿ ಸಮವಸ್ತ್ರ ಸೌಹಾರ್ಧತೆ ಹಾಗೂ ಸಮಾನತೆಗೆ ದಾರಿಯಾಗುವುದು ಎಂದು ಅಧ್ಯಾಪಕಿ ಹಾಗೂ ಕಲಾವಿದೆ ಡಾ. ಶ್ವೇತಾಮಡಪಾಡಿ ಪ್ರತಿಪಾದನೆ ಮಾಡಿದ್ದಾರೆ.
ರಾಜ್ಯದಲ್ಲಿನ ಹಿಜಾಬ್ ವಿವಾದ ಕುರಿತು ಪ್ರತಿಕ್ರಿಯಿಸಿರುವ ಡಾ. ಶ್ವೇತಾಮಡಪಾಡಿ, ಶೈಕ್ಷಣಿಕ ಸಂಸ್ಥೆಗಳನ್ನು ದೂರದಲ್ಲಿ ನಿಂತು ರಾಜಕಾರಣಿ, ವಿಚಾರವಾದಿ, ಧರ್ಮಪರ ಚಿಂತನೆಗೆ ಒಳಪಡಿಸುವುದರಿಂದ ಇಂತಹ ತೊಂದರೆಗಳು ಆಗುತ್ತವೆ. ಕಾಲೇಜಿನಲ್ಲಿ ಭವಿಷ್ಯದ ಕನಸು ಧ್ಯಾನಿಸಿ, ಜ್ಞಾನ ಸರಸ್ವತಿ ಆರಾಧಿಸಿ ಸಾಧನೆ ಮಾಡಬೇಕು. ಆದರೆ ಯುವ ಮನಸುಗಳು ಇಂದು ‘ವಸ್ತ್ರರಾಜಕಾರಣ’ದ ಗುಂಗಿನಲ್ಲಿ ಕಳೆದುಹೋಗುತ್ತಿದ್ದಾರೆ. ಮತೀಯ ಅಮಲು ಬಹಳ ಅಪಾಯಕಾರಿ ವಿಷವಿದ್ದಂತೆ. ಅದನ್ನು ನಾವು ಯುವ ಸಮುದಾಯಕ್ಕೆ ದಾಟಿಸುತ್ತಿರುವುದು ಭವಿಷ್ಯದಲ್ಲಿ ಎದುರಾಗಬಹುದಾದ ಅತೀ ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾವಿಲ್ಲಿ ವಿದ್ಯಾಸಂಸ್ಥೆಗಳನ್ನು ಶೈಕ್ಷಣಿಕ ಭಾಗವಾಗಿಯಷ್ಟೇ ಮುಖ್ಯ ಮಾಡಬೇಕು. ಮನೆಯಲ್ಲಿನ ಕಟ್ಟುಪಾಡುಗಳಿಂದ ಒಂದಷ್ಟು ದೂರ ಉಳಿದು ಹೊಸತನದ ಶಿಕ್ಷಣವನ್ನು ಕರಗತ ಮಾಡಿಕೊಳ್ಳಲು ಇರುವ ಜಾಗ ಶಾಲೆ. ಸ್ವಾತಂತ್ರದ ಅರ್ಥ, ಸೌಹಾರ್ಧತೆಯ ಸೌಂದರ್ಯ, ವಿದ್ಯೆಯ ಮಹತ್ವ ಎಲ್ಲವನ್ನೂ ಅರಿತು ಜ್ಞಾನದ ಹಸಿವನ್ನು ನೀಗಿಸಿಕೊಳ್ಳಬಹುದಾದ ಜಾಗ. ಅದನ್ನು ನಾವು ಪರಂಪರೆ, ಧರ್ಮ ಮತ್ತು ಅದರ ಹಕ್ಕಿನ ಕಾರಣ ನೀಡಿ ಹೊಸ ಬಗೆಯ ಧರ್ಮಸಂಕಟಕ್ಕೆ ತಳ್ಳಿರುವುದು ಅತ್ಯಂತ ಆತಂಕಕಾರಿ.
ಹಿಜಾಬ್ ಶಾಲಾ ಆವರಣದವರೆಗೆ ಬೇಕಾದರೆ ಇರಲಿ. ಆದರೆ ಅದು ತರಗತಿ ಒಳಗೆ ಬೇಡ. ಇದನ್ನ ಕೇವಲ ಸರ್ಕಾರಗಳು ಮಾಡುವುದಲ್ಲ. ಒಂದು ಸಮಾಜವಾಗಿ ನಾವೂ ಕೂಡ ಜವಾಬ್ದಾರಿಯಿಂದ ನಡೆದುಕೊಳ್ಳೊಣ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಹೆಸರಿನಲ್ಲಿ ಶಾಲೆ ವಾತಾವರಣ ಕೆಡಿಸುವುದು ಬೇಡ ಎಂದಿದ್ದಾರೆ ಡಾ. ಶ್ವೇತಾಮಡಪಾಡಿ.
Key words: hijab Controversy- Teacher –shwetha madapadi