ಮೈಸೂರು,ಫೆಬ್ರವರಿ.5,2022(www.justkannada.in): ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ.
ಅವರಿಗೊಂದು ದೇಶ, ಇವರಿಗೊಂದು ದೇಶ ಎಂದು ಎತ್ತಿಕೊಡೊಕೆ ದೇಶ ನಿಮ್ಮ ತಾತನದಾ?. ಭಾರತ ನಮ್ಮದು, ನಾವು ಇಲ್ಲೇ ಹುಟ್ಟಿದ್ದೇವೆ, ಇಲ್ಲೇ ಸಾಯುತ್ತೇವೆ. ಈ ದೇಶ ಬಿಟ್ಟು ಬೇರೆ ದೇಶಕ್ಕೆ ಹೋಗಿ ಎಂದು ಹೇಳುವುದಕ್ಕೆ ನೀವು ಯಾರು?. ಬೇರೆ ದೇಶಕ್ಕೆ ಹೋಗಿ ಎಂದು ವೀಸಾ ಕೊಡೋಕೆ ನೀವು ಯಾರು.? ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಶಾಸಕ ತನ್ವೀರ್ ಸೇಠ್ ಕಿಡಿಕಾರಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಎಲ್ಲವನ್ನೂ ಕೇವಲ ಓಟ್ ಬ್ಯಾಂಕ್ ದೃಷ್ಟಿಯಿಂದ ನೋಡಬೇಡಿ. ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ವಿಚಾರಗಳ ಬಗ್ಗೆ ಮಾತನಾಡಿ. ಈ ದೇಶ ಮಾನವೀಯ ಧರ್ಮದ ಆಧಾರದ ಮೇಲೆ ಕಟ್ಟಲಾಗಿದೆ. ಅದನ್ನ ಉಳಿಸಿಕೊಳ್ಳಬೇಕು. ನೀವು ಹಿಜಾಬ್ ಬೇಡ ಎಂದರೆ, ನಾವು ಕುಂಕುಮ ಬೇಡ, ಹೂ ಬೇಡ ಎಂದು ಕೇಳಿದರೆ ಪರಿಸ್ಥಿತಿ ಏನಾಗುತ್ತದೆ?.ಇದನ್ನು ಯೋಚನೆ ಮಾಡಿ. ಮಕ್ಕಳಲ್ಲಿ ವಿಷ ತುಂಬುವ ಕೆಲಸ ಮಾಡಬೇಡಿ ಎಂದು ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಸಮವಸ್ತ್ರ ಕಡ್ಡಾಯವಿಲ್ಲ. ಕಡ್ಡಾಯ ಮಾಡಿದರೆ, ಕ್ರಮ ಎಂಬ ನಿಯಮವೇ ಇದೆ. ಆದರೂ ಈ ವಿಚಾರ ಈಗ ವಿವಾದವಾಗುತ್ತಿದೆ. ರಾಜಕೀಯ ದುರುದ್ದೇಶದಿಂದ ಈ ಸೂಕ್ಷ್ಮ ವಿಚಾರವನ್ನು ವಿವಾದ ಮಾಡಲಾಗುತ್ತಿದೆ. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎಂಬಂತ ವರ್ತನೆಗಳು ಈಗ ಸಾಗಿವೆ. ಸರ್ಕಾರ ತಕ್ಷಣ ಈ ವಿಚಾರದ ಬಗ್ಗೆ ಚರ್ಚೆಗೆ ಸಮಿತಿ ರಚಿಸಬೇಕು. ಸಮಿತಿಯಲ್ಲಿ ಈ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಿ ತೀರ್ಮಾನವಾಗಲಿ ಎಂದು ತನ್ವೀರ್ ಸೇಠ್ ಆಗ್ರಹಿಸಿದರು.
Key words: hijab-mysore-MLA-Tanveer sait