ಬೆಂಗಳೂರು,ಫೆಬ್ರವರಿ,3,2022(www.justkannada.in): ಹಿಜಾಬ್ ಮತ್ತು ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಶಾಲೆ ಕಾಂಪೌಂಡ್ ಒಳಗೆ ಹಿಜಾಬ್, ಕೇಸರಿ ಧರಿಸುವಂತಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಶಾಲಾ ಮ್ಯಾನೇಜ್ ಮೆಂಟ್ ಹೇಳುವಂತೆ ಕೇಳಬೇಕು. ಸಮವಸ್ತ್ರ ಕಡ್ಡಾಯ ಅಂತಾ ಹೀಗಾಗಲೇ ಹೇಳಿದ್ದಾರೆ ಸಮವಸ್ತ್ರದ ಬಗ್ಗೆ ಹೀಗಾಗಲೇ ಶಿಕ್ಷಣ ಸಚಿವರು ಹೇಳಿದ್ದಾರೆ. ಶಾಲೆ ಒಳಗೆ ಹಿಜಾಬ್ ಧರಿಸುವಂತಿಲ್ಲ ಹಸಿರು ಶಾಲು, ಕೇಸರಿ ಶಾಲು ಕೂಡ ಧರಿಸುವಂತಿಲ್ಲ ಎಂದು ಹೇಳಿದರು.
ಸರ್ಕಾರದ ಆದೇಶವಿದ್ದರೂ ಕಾಲೇಜಿಗೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ಮತ್ತು ಪ್ರಾಂಶುಪಾಲರ ನಡುವೆ ವಾಗ್ವಾದ ಉಂಟಾದ ಘಟನೆ ಕುಂದಾಪುರ ಸರ್ಕಾರಿ ಕಾಲೇಜಿನಲ್ಲಿ ನಡೆಯಿತು. ಹಿಜಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ತರಗತಿಗೆ ತೆರಳದಂತೆ ಪ್ರಾಂಶುಪಾಲರು ಕಾಲೇಜಿನ ಗೇಟ್ ಬಳಿ ತಡೆದರು. ಬಳಿಕ ಹಿಜಾಬ್ ಕಳಚಿ ಕ್ಲಾಸ್ ಗೆ ಬರುವಂತೆ ಸೂಚಿಸಿದರು.
ಈ ವೇಳೆ ಗೇಟ್ ಬಳಿ ಪ್ರಾಂಶುಪಾಲರ ಜೊತೆ ವಾಗ್ವಾದಕ್ಕಿಳಿದ ವಿದ್ಯಾರ್ಥಿನಿಯರು ಸರ್ಕಾರದ ಆದೇಶದಲ್ಲಿ ಕುಂದಾಪುರ ಕಾಲೇಜು ಉಲ್ಲೇಖವಿಲ್ಲ ಎಂದು ವಾದಿಸಿದರು. ಆದರೆ, ಸರಕಾರ ಇಡೀ ರಾಜ್ಯಕ್ಕೆ ಸುತ್ತೋಲೆ ಹೊರಡಿಸಿದೆ ಎಂದು ಪ್ರಾಂಶುಪಾಲರು ಉತ್ತರಿಸಿದರು.
Key words: Hijab-udupi- Home Minister -Araga Jnanendra.