HMT ಅಧೀನದಲ್ಲಿರುವ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಕೊಡುವ ಪ್ರಶ್ನೆಯೇ ಇಲ್ಲ-ಕೇಂದ್ರ ಸಚಿವ ಹೆಚ್.ಡಿಕೆ

ಬೆಂಗಳೂರು,ಆಗಸ್ಟ್,13,2024 (www.justkannada.in):  ಕೇಂದ್ರ ಸರಕಾರಿ ಸ್ವಾಮ್ಯದ ಹೆಚ್‌ಎಂಟಿ ಕಾರ್ಖಾನೆಯ ಅಧೀನದಲ್ಲಿರುವ ಭೂಮಿಯನ್ನು ರಾಜ್ಯ ಸರಕಾರಕ್ಕೆ ವಾಪಸ್ಸು ನೀಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಲ್ಲಿ ಹೇಳಿದರು.

ಒಂದು ವೇಳೆ ರಾಜ್ಯ ಸರಕಾರ ದುರುದ್ದೇಶಪೂರಿತವಾಗಿ ಭೂಮಿ ವಿಷಯದಲ್ಲಿ ಕಿರುಕುಳ ನೀಡಿದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಬೆಂಗಳೂರಿನ ಹೆಚ್‌ಎಂಟಿ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದರು

ಹೆಚ್‌ಎಂಟಿಗೆ ಜಮೀನನ್ನು ಪುಕ್ಕಟೆ ಕೊಟ್ಟಿಲ್ಲ.  ಅರಣ್ಯ ಇಲಾಖೆ ಭೂಮಿಯನ್ನು ಅಕ್ರಮವಾಗಿ ವಿವಿಧ ಸರ್ಕಾರಿ ಸಂಸ್ಥೆ, ಇಲಾಖೆಗಳಿಗೆ ಮತ್ತು ಖಾಸಗಿಯವರಿಗೆ ಸಂಸ್ಥೆ ಮಾರಾಟ ಮಾಡಿದೆ ಎಂದು ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ನೀಡಿರುವ ಹೇಳಿಕೆಯನ್ನು ಹೆಚ್.ಡಿಕೆ ಸಾರಾಸಗಟಾಗಿ ತಳ್ಳಿಹಾಕಿದರು.

ಮೈಸೂರು ಮಹಾರಾಜರ ಕಾಲದಲ್ಲಿ ಜಗತ್ಪ್ರಸಿದ್ಧ ಎಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ಹೆಚ್‌ಎಂಟಿ ಕಾರ್ಖಾನೆಗೆ ಯಾವುದೇ ಜಮೀನನ್ನು ಉಚಿತವಾಗಿ, ಪುಕ್ಕಟೆಯಾಗಿ ನೀಡಿಲ್ಲ. ಬೇಕಿದ್ದರೆ ರಾಜ್ಯ ಅರಣ್ಯ ಸಚಿವರು ದಾಖಲೆಗಳನ್ನು ತೆಗೆದು ನೋಡಲಿ ಎಂದು ಸಲಹೆ ಮಾಡಿದರು ಕುಮಾರಸ್ವಾಮಿ ಅವರು.

ಜಮೀನು ವಾಪಸ್ ಪಡೆದು ಯಾವ ಬಿಲ್ಡರ್ ಗೆ ಧಾರೆ ಎರೆಯುತ್ತೀರಿ?

ಕಾರ್ಖಾನೆಯ ವಶದಲ್ಲಿರುವ ಜಮೀನು ತೆಗೆದುಕೊಂಡು ಏನು ಮಾಡುತ್ತೀರಿ ಸಚಿವರೇ? ಯಾವ ಬಿಲ್ಡರ್ ಗೆ ದಾನ ಮಾಡುತ್ತೀರಿ? ಹಿಂದೆ ಬೆಂಗಳೂರು ನಗರವನ್ನು ಸಿಂಗಾಪುರ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ನಿಮ್ಮ ಪಕ್ಷದ ನಾಯಕರು ಮಾಡಿದ್ದೇನು ಎಂಬುದನ್ನು ಸ್ವಲ್ಪ ತಿಳಿದುಕೊಂಡು ಮಾತನಾಡಿ ಎಂದು ಕೇಂದ್ರ ಸಚಿವ ಹೆಚ್.ಡಿಕೆ ಟಾಂಗ್ ಕೊಟ್ಟರು.

ಒಂದು ಕಡೆ ರಾಜ್ಯಕ್ಕೆ ಕೇಂದ್ರ ಸರಕಾರ ಸಹಕಾರ ನೀಡುತ್ತಿಲ್ಲ ಎಂದು ಆರೋಪ ಮಾಡುತ್ತೀರಿ. ಇನ್ನೊಂದು ಕಡೆ ರಾಜ್ಯಕ್ಕೆ ಒಳ್ಳೆಯದು ಮಾಡಲು ಬರುವ ಕೇಂದ್ರ ಸಚಿವರಿಗೆ ಅಡ್ಡಿ ಮಾಡುತ್ತೀರಿ. ಜನತೆಯ ಆಶೀರ್ವಾದ ಹಾಗೂ ಭಗವಂತನ ಕೃಪೆಯಿಂದ ನಾನು ಕೇಂದ್ರದ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವನಾಗಿದ್ದೇನೆ. ಸಿಕ್ಕಿರುವ ಕಾಲಾವಕಾಶದಲ್ಲಿ ರಾಜ್ಯಕ್ಕೆ ಏನಾದರೂ ಒಳ್ಳೆಯದು ಮಾಡಬೇಕು ಎನ್ನುವುದು ನನ್ನ ಕಳಕಳಿ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಕೇಂದ್ರ ಸರಕಾರಕ್ಕೆ ಸಹಕಾರ ಕೊಡಿ

ನನಗೆ ಅಸಹಕಾರ ಕೊಟ್ಟರೆ ನಿಮಗೆ ಸಿಗುವ ಲಾಭ ಏನು? ಇಲ್ಲಿ ಕುಮಾರಸ್ವಾಮಿ ಮುಖ್ಯವಲ್ಲ. ರಾಜ್ಯಕ್ಕೆ ಒಳ್ಳೆಯದು ಆಗಬೇಕು. ಅದಕ್ಕಾಗಿ ನನಗೆ, ಕೇಂದ್ರ ಸರಕಾರಕ್ಕೆ ಸಹಕಾರ ಕೊಡಿ. ಇನ್ನಾದರೂ ಲೂಟಿ ಹೊಡೆಯುವುದು ನಿಲ್ಲಿಸಿ ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಿ. ಸಚಿವ ಈಶ್ವರ ಖಂಡ್ರೆ ಅವರ ಹೇಳಿಕೆಯನ್ನು ಪತ್ರಿಕೆಯಲ್ಲಿ ಓದಿ ನನ್ನ ಕಣ್ಣಲ್ಲಿ ನೀರು ಬಂತು. ಹೆಚ್‌ಎಂಟಿ ಯಂತಹ ಕಾರ್ಖಾನೆಗಳನ್ನು ಕಳೆದುಕೊಂಡು ಏನು ಸಾಧನೆ ಮಾಡುತ್ತೀರಿ? ಎಂದು ಹೆಚ್.ಡಿಕೆ ತೀಕ್ಷ್ಣವಾಗಿ ಪ್ರಶ್ನಿಸಿದರು.

ಅರಣ್ಯ ಭೂಮಿಯನ್ನು ವಾಪಸ್ಸು ಪಡೆಯುವ ರಾಜ್ಯ ಅರಣ್ಯ ಸಚಿವರ ಹೇಳಿಕೆಯ ಬಗ್ಗೆ ಅತೀವ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿಕೆ,  ಯಾವ ಆಧಾರದ ಮೇಲೆ ಮರಳಿ ಅರಣ್ಯ ಇಲಾಖೆ ವಶಕ್ಕೆ ಭೂಮಿಯನ್ನು ಪಡೆಯುತ್ತೀರಿ? ಇದರ ಒಳ ಉದ್ದೇಶ ಏನು? ನಿಮಗೆ ಈ ಭೂಮಿಗಳ ದಾಖಲೆಗಳು, ಈ ಕಾರ್ಖಾನೆಯ ಸ್ಥಾಪನೆಯ ಇತಿಹಾಸ ಗೊತ್ತಿದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವ ಕಾರಣಕ್ಕೂ ಹೆಚ್‍ಎಂಟಿಗೆ ಸೇರಿದ ಜಮೀನನ್ನು ವಾಪಸ್ಸು ಕೊಡುವ ಪ್ರಶ್ನೆಯೇ ಇಲ್ಲ. ಅದು ಖರೀದಿ ಮಾಡಿರುವ ಜಮೀನಾಗಿದೆ. ಈ ವಿಚಾರದಲ್ಲಿ ರಾಜ್ಯ ಸರಕಾರ ಜನರನ್ನು ದಾರಿ ತಪ್ಪಿಸುತ್ತಿದೆ. ಅಂತಹ ನಡೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಹೆಚ್‍ಎಂಟಿಗೆ 599 ಎಕರೆ ಜಮೀನನ್ನು ಉಚಿತವಾಗಿ ಕೊಟ್ಟಿಲ್ಲ. ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದ ಕಡತವನ್ನು ಅರಣ್ಯ ಸಚಿವರು ಪರಿಶೀಲಿಸುವುದು ಒಳ್ಳೆಯದು ಎಂದ ಕೇಂದ್ರ ಸಚಿವರು; ರಾಜ್ಯ ಸರಕಾರ ಇದೇ ರೀತಿ ಕಂಪನಿಗೆ ಕಿರುಕುಳ ನೀಡಿದರೆ, ನಾವು ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ಕೊಟ್ಟರು.

1963ರಲ್ಲಿ 185 ಎಕರೆಗೆ 4.40 ಲಕ್ಷ ರೂ. ಹಾಗೂ 77 ಎಕರೆಗೆ 1.80 ಲಕ್ಷ ರೂ. 1965ರಲ್ಲಿ ಪಾವತಿಸಲಾಗಿದೆ. ಮೂರನೇ ಬಾರಿಗೆ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಾನು ಭಾರೀ ಕೈಗಾರಿಕೆ ಸಚಿವನಾಗಿ ಅಧಿಕಾರ ವಹಿಸಿಕೊಂಡೆ. ಬೆಂಗಳೂರು, ಹೈದರಾಬಾದ್, ಹರಿಯಾಣದ ಪಿಂಜಾರೋದಲ್ಲಿರುವ ಘಟಕಗಳಿಗೆ ಭೇಟಿ ನೀಡಿದ್ದೆ. ಹೆಚ್‍ಎಂಟಿಗೆ ಕಾಯಕಲ್ಪ ನೀಡುವುದಾಗಿ ಪ್ರಕಟಿಸಿದ ಬೆನ್ನಲ್ಲೇ ಅದರ ಷೇರು ಮೌಲ್ಯ ₹45 ಇದ್ದದ್ದು ₹95ಕ್ಕೆ ಏರಿಕೆಯಾಯಿತು. ನಾನು ಒಂದು ಸಂಸ್ಥೆಗೆ ಕಾಯಕಲ್ಪ ನೀಡಲು  ಪ್ರಯತ್ನಿಸುತ್ತಿದ್ದರೆ,ರಾಜ್ಯ ಸರಕಾರದಿಂದ ಅಸಹಕಾರ ಹಾಗೂ ಗೊಂದಲ ಮೂಡಿಸುವ ಕೆಲಸವಾಗುತ್ತಿದೆ ಎಂದು ಕಿಡಿಕಾರಿದರು.

2020ರಲ್ಲಿ ಡಿ ನೋಟಿಫಿಕೇಷನ್‍ ಗಾಗಿ ಸರಕಾರದಿಂದ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ. ಅದರ ಬಗ್ಗೆ ಈಗ ಅನುಮಾನ ಶುರುವಾಗಿದೆ ಎಂದ  ಹೆಚ್.ಡಿ ಕುಮಾರಸ್ವಾಮಿ,  ಹೆಚ್‍ಎಂಟಿ ಕಾರ್ಖಾನೆಯನ್ನು ಉಳಿಸುವ ಉದ್ದೇಶದಿಂದ ಪರಿಣಿತರ ಸಮಿತಿ ರಚನೆಗೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರಕಾರ 2016ರಲ್ಲೇ ನಷ್ಟದ ಉದ್ಯಮವೆಂದು ಮುಚ್ಚಲು ತೀರ್ಮಾನಿಸಿತ್ತು. ಆದರೆ ಪ್ರಧಾನಿಗಳು, ಹಣಕಾಸು ಸಚಿವರು ಹಾಗೂ ಬಂಡವಾಳ ವಾಪಸಾತಿ ಇಲಾಖೆಯ ಮನವೊಲಿಸಿ ಈ ಹೆಮ್ಮೆಯ ಕಾರ್ಖಾನೆಗೆ ಕಾಯಕಲ್ಪ ನೀಡುವ ಗುರಿ ನನ್ನದು. ಈ ಪ್ರಯತ್ನಕ್ಕೆ ರಾಜ್ಯ ಸರಕಾರ ಪ್ರಾಂಜಲ ಮನಸ್ಸಿನಿಂದ ಸಹಕಾರ ನೋಡಬೇಕು ಎಂದು ಕುಮಾರಸ್ವಾಮಿ ಅವರು ಕೋರಿದರು.

1999-2004 ರವರೆಗೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದವರು ಯಾರು?

ಹಿಂದೆ ಹೆಚ್‍ಎಂಟಿಗೆ ಸೇರಿದ 200 ಎಕರೆ ಜಮೀನನ್ನು ಮಾರಾಟ ಮಾಡಲು ಅನುಮತಿ ಕೊಟ್ಟರು ಯಾರು? 1999ರಿಂದ 2004 ರವರೆಗೆ ರಾಜ್ಯದಲ್ಲಿ ಯಾರು ಅಧಿಕಾರದಲ್ಲಿದ್ದರು? 2006ರಲ್ಲಿ ನಾನು ಮುಖ್ಯಮಂತ್ರಿಯಾದಾಗ ಹೆಚ್‍ಎಂಟಿಯ ಒಂದು ಅಂಗುಲ ಜಮೀನು ಮಾರಾಟ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಆದೇಶ ಮಾಡಿದ್ದೆ. ಅದಕ್ಕೆ ಭೂಮಿ ಉಳಿದುಕೊಂಡಿದೆ. ಆದರೆ, ಆಡಳಿತ ನಡೆಸಿದ ಸರಕಾರಗಳಲ್ಲಿ ಬಿಲ್ಡರ್ ಕೆಲಸ ಮಾಡುತ್ತಿದ್ದ ಕೆಲವರಿಗೆ ಈ ಕಾರ್ಖಾನೆಯ ಜಮೀನು ಮೇಲೆ ವಕ್ರದೃಷ್ಟಿ ಬಿದ್ದಿದೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರೆಸ್ಟೀಜ್ ಕಂಪನಿಯವರು 27 ಎಕರೆ ಭೂಮಿ ಖರೀದಿ ಮಾಡಿದ್ದು ಯಾವಾಗ? ಈಗಾಗಲೇ ಅಪಾರ್ಟ್ ಮೆಂಟ್ ಗಳನ್ನು ಕಟ್ತಾ ಇದಾರಲ್ಲಾ? ಅದೇನೋ ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರಲ್ಲಾ? ಪ್ರೆಸ್ಟೀಜ್ ಗೆ ಭೂಮಿ ಖರೀದಿ ಎನ್ ಓಸಿ ಕೊಡುತ್ತಾರೆ. ಆದರೆ, ನಮ್ಮ ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ  ಇಸ್ರೋ ಖರೀದಿ ಮಾಡಲು ಬಂದರೆ ಎನ್ ಓಸಿ ಕೊಡುವುದಿಲ್ಲ. ರಾಜ್ಯ ಸರಕಾರಕ್ಕೆ ಪ್ರೆಸ್ಟೀಜ್  ಮುಖ್ಯವಾ? ಅಥವಾ ಇಸ್ರೋ ಮುಖ್ಯವಾ? ಹೇಳಬೇಕಲ್ಲವೇ? ಎಂದು ಟಾಂಗ್ ಕೊಟ್ಟರು ಕೇಂದ್ರ ಸಚಿವರು.

ಕಾಡುಗೋಡಿ ಪ್ಲಾಂಟೇಷನ್  711  ಎಕರೆ ಇದೆ. ಅದನ್ನು ಕಾನ್ ಕಾರ್ಡ್ ಪ್ರೈ ಲಿ. ಖರೀದಿ ಮಾಡಿದೆ. ಈಗ ಆ ಭೂಮಿಯಲ್ಲಿ ರಾಜ್ಯ ಸರಕಾರ ನಿವೇಶನಗಳನ್ನು ಮಾಡಿ ಹಂಚಲು ಹೊರಟಿದೆ. ಆಗ ಅದು ಅರಣ್ಯ ಭೂಮಿ, ಅದನ್ನು ವಶಪಡಿಸಿಕೊಳ್ಳಬೇಕು ಅನಿಸಲಿಲ್ಲವಾ‌? ಖಂಡ್ರೆ ಅವರೇ… ಕುಮಾರಸ್ವಾಮಿ ಮೇಲಿನ ದ್ವೇಷಕ್ಕೆ ರಾಜ್ಯವನ್ನು ಹಾಳು ಮಾಡಿಕೊಳ್ಳಬೇಡಿ. ನೀವು ಲೂಟಿ ಮಾಡಿದ್ದು ಸಾಕು. ಕುಮಾರಸ್ವಾಮಿ ಮಾಡ್ತಿರುವ ಕೆಲಸಕ್ಕೆ ಸಹಕಾರ ಕೊಡಿ ಎಂದು ಅವರು ಒತ್ತಾಯ ಮಾಡಿದರು.

ಹೆಚ್‍ಎಂಟಿ ಕಾರ್ಖಾನೆಯಲ್ಲಿ 15ರಿಂದ 20 ಸಾವಿರ ಜನ ಕೆಲಸ ಮಾಡುತ್ತಿದ್ದರು. ಗಡಿಯಾರ ಹಾಗೂ ಟ್ರ್ಯಾಕ್ಟರ್ ಘಟಕವೊಂದಿತ್ತು. 1970ರಲ್ಲಿ ₹270 ಕೋಟಿ ಲಾಭ ಗಳಿಸಿತ್ತು. ಆ ಹಣದಿಂದ ಹೈದರಾಬಾದ್, ಉತ್ತರಕಾಂಡ, ಕೇರಳ, ಅಜ್ಮೀರ್ ಮೊದಲಾದೆಡೆ ಶಾಖೆಗಳು ಪ್ರಾರಂಭವಾದವು. ಇವೆಲ್ಲಾ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟಿವೆ ಎಂದರು ಹೇಳಿದರು.

ಕುದುರೆಮುಖ ಕಂಪನಿ ಯೋಜನೆಗೂ ಅಡ್ಡಿ

ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ ಕಾಯಕಲ್ಪ ನೀಡಲು ದೇವದಾರಿ ಗಣಿಗಾರಿಕೆ ಯೋಜನೆಗೆ ಆರ್ಥಿಕ ನೆರವು ನೀಡುವ ಕಡತಕ್ಕೆ ಸಹಿ ಹಾಕಿದೆ. ಆ ಕಡತವನ್ನು ಹಣಕಾಸು ಇಲಾಖೆಗೆ ಕಳಿಸುವುದಕ್ಕೆ ಮಾತ್ರ ನಾನು ಒಪ್ಪಿಗೆ ಕೊಟ್ಟೆ. ಆದರೆ, ಕುಮಾರಸ್ವಾಮಿ ಗಣಿಗಾರಿಕೆ ಯೋಜನೆಗೆ ಒಪ್ಪಿಗೆ ಕೊಟ್ಟು ಅರಣ್ಯ ನಾಶಕ್ಕೆ ಕಾರಣ ಆಗುತ್ತಿದ್ದಾರೆ ಎಂದು ರಾಜ್ಯ ಮತ್ತು ಇನ್ನೂ ಕೆಲವರು ವ್ಯವಸ್ಥಿತ ಅಪಪ್ರಚಾರ ನಡೆಸಿದರು.

ಈ ಬಗ್ಗೆ ರಾಜ್ಯ ಸರಕಾರದಿಂದಲೇ ಗೊಂದಲ ಮೂಡಿಸುವ ಪ್ರಯತ್ನ ನಡೆಯಿತು. ₹1,738 ಕೋಟಿಗೆ ಆರ್ಥಿಕ ಗ್ಯಾರಂಟಿ ಕೊಡುವ ಕಡತಕ್ಕೆ ನಾನು ಸಹಿ ಹಾಕಿದ್ದು. ಕುದುರೆಮುಖ ಕಂಪನಿಯಲ್ಲಿ ಸಾವಿರಾರು ಉದ್ಯೋಗಿಗಳಿದ್ದು, ತೊಂದರೆಗೆ ಸಿಲುಕಲಿದ್ದಾರೆ. ಹಾಗಾದರೆ, ರಾಜ್ಯ ಅಭಿವೃದ್ಧಿ ಆಗುವುದು ಹೇಗೆ? ರಾಜ್ಯ ಸರಕಾರವೇ ಅಡ್ಡಿ ಉಂಟು ಮಾಡಿದರೆ ಹೇಗೆ? ಇದು ಯಾವ ರೀತಿಯ ನಡೆ ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಬಳ್ಳಾರಿಯ ಸಂಡೂರಿನಲ್ಲಿ ಗಣಿಗಾರಿಕೆ ನಡೆಸಲು ಸಿದ್ದರಾಮಯ್ಯನವರೇ ಸಿಎಂ ಆಗಿದ್ದ ವೇಳೆಯೇ ದೇವದಾರಿ ಗಣಿಗಾರಿಕೆ ಯೋಜನೆಗೆ ಒಪ್ಪಿಗೆ ನೀಡಿದ್ದರು. ಅವರೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಅದಕ್ಕೆ ಕೇಂದ್ರದ ಪರಿಸರ ಇಲಾಖೆಯ ಅನುಮತಿಯೂ ಸಿಕ್ಕಿದೆ. ಇದೆಲ್ಲ ಆದ  ಮೇಲೆಯೇ ನಾನು ನಾನು ಹಣಕಾಸು ಗ್ಯಾರಂಟಿ ಕಡತಕ್ಕೆ ಸಹಿ ಹಾಕಿದೆ.

ಅರಣ್ಯೀಕರಣಕ್ಕೆ ₹190 ಕೋಟಿ ಹಾಗೂ ₹500 ಕೋಟಿಗಳನ್ನು ರಾಜ್ಯ ಸರಕಾರಕ್ಕೆ ಕುದುರೆಮುಖ ಕಂಪನಿ ಪಾವತಿಸಿದೆ. ಅನುಮತಿ ಕೊಡಲು ಆಗದಿದ್ದರೆ ಸರಕಾರ ಹಣ ಕಟ್ಟಿಸಿಕೊಂಡಿದ್ದು ಯಾಕೆ? ಅನುಮತಿ ಕೊಟ್ಟಿದ್ದೂ ಅವರೇ, ಈಗ ಗೊಂದಲ ಮೂಡಿಸುತ್ತಿರುವುದು ಕೂಡ ಅವರೇ. ಇದು ರಾಜ್ಯ ಸರಕಾರದ ಇಬ್ಬಗೆಯ ನೀತಿ ಅಲ್ಲವೇ? ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ಶಿವಮೊಗ್ಗದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಕಾಯಕಲ್ಪ ನೀಡಿ ಅದಕ್ಕೆ ಮರುಜೀವ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ಇದಕ್ಕೆ ಪ್ರಧಾನಿಗಳು, ಹಣಕಾಸು ಸಚಿವರ ಒಪ್ಪಿಗೆ ಬೇಕಿದೆ. ಈ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಹತ್ತು ಸಾವಿರ ಕೋಟಿ ಹಣ ಬೇಕು. ಈಗಾಗಲೇ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ನಾನೇನು ಸುಮ್ಮನೆ ಕೂತಿಲ್ಲ. ಉದ್ಯೋಗ ಸೃಷ್ಟಿ ಆಗಬೇಕು ಎನ್ನುವುದು ನನ್ನ ಉದ್ದೇಶ ಎಂದು ಕೇಂದ್ರ ಸಚಿವ ಹೆಚ್.ಡಿಕೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್‍ಎಂಟಿ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ, ಪ್ರಧಾನ ವ್ಯವಸ್ಥಾಪಕ ಎಂ.ಆರ್.ವಿ ರಾಜ ಉಪಸ್ಥಿತರಿದ್ದರು.

Key words: HMT, land, state government, Union Minister, HDK