ಮನೆಗೆ ನುಗ್ಗಿ ದರೋಡೆ ಕೇಸ್: 6 ಆರೋಪಿಗಳಿಗೆ 7 ವರ್ಷ ಜೈಲುಶಿಕ್ಷೆ, ದಂಡ

ಮೈಸೂರು,ಫೆಬ್ರವರಿ,28,2025 (www.justkannada.in):  ಮಹಿಳೆಯ ಮನೆಗೆ ನುಗ್ಗಿ ಚಿನ್ನಾಭರಣ, ನಗದು ದೋಚಿದ್ದ ಆರು ಆರೋಪಿಗಳಿಗೆ 7ವರ್ಷಗಳ ಕಾಲ ಕಠಿಣ ಸಜೆ ಮತ್ತು ತಲಾ ರೂ.10,000 ರೂ. ದಂಡ ವಿಧಿಸಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಮೈಸೂರು ನಿವಾಸಿಗಳಾದ ಆರೋಪಿ-1 ಶಿವಕುಮಾರ್, ಆರೋಪಿ-2 ಹರೀಶ್ ಯಾದವ್, ಆರೋಪಿ-3 ಶರತ್ @ ಶರತ್ ಕುಮಾರ್, ಆರೋಪಿ-4 ಸುನಿಲ್ ಕುಮಾರ್, ಆರೋಪಿ-5 ಶಶಾಂಕ್.ಎಸ್ @ ತೇಜಸ್ @ ಆಫಿಸಿಯಲ್, ಆರೋಪಿ-6 ಕಾರ್ತಿಕ್ ಜೈಲು ಶಿಕ್ಷೆಗೆ ಗುರಿಯಾದವರು.

ಆರೋಪಿಗಳು  ದಿ:20-08-2020 ರಂದು ದರೋಡೆ ಮಾಡುವ ಉದ್ದೇಶದಿಂದ ಮೈಸೂರಿನ ಮಹದೇವಪುರದ ನಾಗರತ್ನಮ್ಮ ಅವರ ಮನೆಗೆ ನುಗ್ಗಿ ಚಾಕು ತೋರಿಸಿ ಬೆದರಿಸಿ ಮನೆಯ ಬೀರುವಿನಲ್ಲಿದ್ದ ಚಿನ್ನದ ಆಭರಣಗಳು, ರೂ.17,000  ನಗದು ಹಣ, 2 ಮೊಬೈಲ್‌ ಗಳನ್ನು ದೋಚಿದ್ದರು. ನಂತರ ಆಭರಣಗಳನ್ನು ಮಾರಾಟ ಮಾಡಿದ್ದು, ತನಿಖಾ ಕಾಲದಲ್ಲಿ 1 ಮತ್ತು 2ನೇ ಆರೋಪಿತರ ಹೇಳಿಕೆ ಮೇರೆಗೆ ಫಿರ್ಯಾದಿದಾರರ ಮನೆಯಿಂದ ಆರೋಪಿತರು ದರೋಡೆ ಮಾಡಿದ್ದ ಆಭರಣಗಳು ಮತ್ತು 2 ಮೊಬೈಲ್‌ಗಳು ಜಪ್ತಿ ಮಾಡಿರುವುದು ಪ್ರಕರಣದ ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿತರ ವಿರುದ್ಧ ವಿದ್ಯಾರಣ್ಯಪುರಂ ಆರಕ್ಷಕ ನಿರೀಕ್ಷಕ ಮಂಜುನಾಥ್.ಡಿ  ಅವರು ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ನ್ಯಾಯಾಧೀಶ ಎಂ.ರಮೇಶ ರವರು ಅಭಿಯೋಜನೆ ಪರ ಹಾಜರುಪಡಿಸಿದ ಸಾಕ್ಷಿಗಳನ್ನು ಮತ್ತು ದಾಖಲಾತಿಗಳನ್ನು ಪರಿಗಣಿಸಿ ಪ್ರಕರಣದಲ್ಲಿ ಆರೋಪಿತರು ಕಲಂ 395, 397 ಐಪಿಸಿ ರೀತ್ಯಾ ಅಪರಾಧ ಎಸಗಿರುವುದು ರುಜುವಾತಾಗಿರುವುದಾಗಿ ತೀರ್ಮಾನಿಸಿ 6 ಮಂದಿ ಆರೋಪಿಗಳಿಗೆ ಕಲಂ 395 ಐಪಿಸಿ ಅಡಿಯ ಅಪರಾಧಕ್ಕೆ 7 ವರ್ಷಗಳ ಕಠಿಣ ಸಜೆ ಮತ್ತು ತಲಾ ರೂ.10,000/- ದಂಡ ವಿಧಿಸಿದ್ದು ಮತ್ತು ಕಲಂ 397 ಐಪಿಸಿ ಅಡಿಯ ಅಪರಾಧಕ್ಕೆ 7 ವರ್ಷ ಸಾದಾ ಸಜೆ ಮತ್ತು ತಲಾ ರೂ.5,000/- ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದಲ್ಲಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಕೆ.ನಾಗರಾಜು ಅವರು ಸರ್ಕಾರದ ಪರ ವಾದ ಮಂಡಿಸಿದರು.

Key words: Home, Robbery case, 6 accused, sentenced, jail, mysore court