ಮಾಡದ ತಪ್ಪಿಗೆ ಸಾರಿಗೆ ಅಧಿಕಾರಿಗಳ ಬಡ್ತಿಗೆ ಕೊಕ್ಕೆ?

ಹುಬ್ಬಳ್ಳಿ:ಆ-24: ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ಮಾಡಿರುವ ತಪ್ಪಿಗೆ ನಾಲ್ಕು ಸಾರಿಗೆ ನಿಗಮಗಳ ಕಿರಿಯ ಅಧಿಕಾರಿಗಳು ಶಿಕ್ಷೆ ಅನುಭವಿಸುವಂತಾಗಿದೆ. ಇನ್ನೇನು ಪ್ರಮೋಷನ್‌ ಸಿಕ್ಕೇ ಬಿಟ್ಟಿತು ಎಂಬ ನಿರೀಕ್ಷೆಯಲ್ಲಿದ್ದ ವಿಭಾಗೀಯ ತಾಂತ್ರಿಕ ಶಿಲ್ಪಿ ಹಾಗೂ ಉಗ್ರಾಣಾಧಿಕಾರಿಗಳಿಗೆ ಅರ್ಹತೆ ಇದ್ದರೂ ಮಾಡದ ತಪ್ಪಿಗಾಗಿ ಬಡ್ತಿಗೆ ಕೊಕ್ಕೆ ಬಿದ್ದಿದೆ.

ಗುತ್ತಿಗೆಯಲ್ಲಿ ನಮೂದಿಸಿದ ಗುಣಮಟ್ಟದ ರೆಗ್ಜಿನ್‌ ಪೂರೈಕೆಯಾಗುತ್ತಿಲ್ಲ. ಅಧಿಕಾರಿಗಳು ಉದ್ದೇಶಪೂರ್ವಕ ವಾಗಿ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪದ ಮೇಲೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳ ಸುಮಾರು 70ಕ್ಕೂ ಹೆಚ್ಚು ವಿಭಾಗೀಯ ತಾಂತ್ರಿಕ ಶಿಲ್ಪಿ ಹಾಗೂ ಉಗ್ರಾಣಾಧಿಕಾರಿಗಳಿಗೆ ಸಾಮೂಹಿಕವಾಗಿ ಚಾರ್ಜ್‌ ಶೀಟ್‌ ನೀಡಲಾಯಿತು. ತನಿಖೆಯ ಕೊನೆಯಲ್ಲಿ ಈ ಪ್ರಕರಣದಲ್ಲಿ ವಿಭಾಗೀಯ ಮಟ್ಟದ ಅಧಿಕಾರಿಗಳದ್ದು ಯಾವ ತಪ್ಪಿಲ್ಲ ಎಂಬುದು ಸಾಬೀತಾದರೂ ಅವರ ಮೇಲಿನ ಪ್ರಕರಣವನ್ನು ರದ್ದು ಮಾಡದ ಹಿನ್ನೆಲೆಯಲ್ಲಿ ಬಡ್ತಿಗೆ ಅರ್ಹತೆಯಿರುವ ಅಧಿಕಾರಿಗಳು ಅತಂತ್ರ ಸ್ಥಿತಿ ಅನುಭವಿಸುತ್ತಿದ್ದಾರೆ.

ಏನಿದು ಪ್ರಕರಣ?: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜ್ಯದ ಎಲ್ಲಾ ಪ್ರಾದೇಶಿಕ ಹಾಗೂ ವಿಭಾಗೀಯ ಕಾರ್ಯಾಗಾರಗಳಿಗೆ ರೆಗ್ಜಿನ್‌ (ಬಸ್‌ಗಳ ಆಸನಗಳಿಗೆ ಬಳಸಲು) ಪೂರೈಸಲು 2018ರಲ್ಲಿ ಕೇಂದ್ರ ಖರೀದಿ ಸಮಿತಿ ಗುತ್ತಿಗೆ ಕರೆದು ಅತಿ ಕಡಿಮೆ ಬಿಡ್‌ ಮಾಡಿದ ಕಂಪನಿಗೆ ಗುತ್ತಿಗೆ ನೀಡಿತ್ತು. ಕಂಪನಿ ಪೂರೈಸುತ್ತಿರುವ ವಸ್ತು ಗುಣಮಟ್ಟದಿಂದ ಕೂಡಿಲ್ಲ ಎನ್ನುವ ದೂರುಗಳು ಬಂದಿವೆ ಎನ್ನುವ ಕಾರಣಕ್ಕೆ ಸಂಸ್ಥೆಯ ಭದ್ರತಾ ಮತ್ತು ಜಾಗೃತಾಧಿಕಾರಿಗಳಿಂದ ತನಿಖೆ ಮಾಡಿಸಲಾಗಿತ್ತು.

ಗುತ್ತಿಗೆ ಕರಾರಿನಲ್ಲಿ ನಮೂದಿಸಿದ ಪ್ರಕಾರ ರೆಗ್ಜಿನ್‌ ಗುಣಮಟ್ಟವಿಲ್ಲ. ಈ ವಿಚಾರವನ್ನು ಕೇಂದ್ರ ಖರೀದಿ ಸಮಿತಿ ಗಮನಕ್ಕೆ ತರುವ ನಿಟ್ಟಿನಲ್ಲಿ ಸಂಬಂಧಪಟ್ಟವರು ನಿರ್ಲಕ್ಷ್ಯ ತೋರಿದ್ದು, ಇದರಿಂದ ಸಂಸ್ಥೆಗೆ ಅರ್ಥಿಕ ನಷ್ಟ ವಾಗಿದೆ ಎಂದು ತನಿಖಾಧಿಕಾರಿಗಳು ವರದಿ ನೀಡಿದ್ದರು. ಇದರ ಆಧಾರ ಮೇಲೆ ರಾಜ್ಯದ ಎಲ್ಲ ಡಿಎಂಇ ಹಾಗೂ ಉಗ್ರಾಣಾಧಿಕಾರಿಗಳಿಗೆ ಚಾರ್ಜ್‌ ಶೀಟ್‌ ನೀಡಲಾಗಿತ್ತು.

ಈ ಪ್ರಕರಣ ಕುರಿತು ಇನ್ನಷ್ಟು ತನಿಖೆಗೊಳಪಡಿಸಿ ದಾಗ ಕೇಂದ್ರ ಖರೀದಿ ಸಮಿತಿಯ ಮಟ್ಟದಲ್ಲೇ ಎಡವಟ್ಟು ಆಗಿದೆ ಎಂದು ಸಮಿತಿಯಲ್ಲಿದ್ದ ಮೂವರು ಹಿರಿಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ವಿಭಾಗ ಮಟ್ಟದ ಅಧಿಕಾರಿಗಳದ್ದು ಯಾವುದೇ ತಪ್ಪಿಲ್ಲ ಎಂಬುದು ಸಾಬೀತಾದರೂ ಇವರಿಗೆ ನೀಡಿದ್ದ ಚಾರ್ಜ್‌ಶೀಟ್‌ ರದ್ದುಪಡಿಸದ ಹಿನ್ನೆಲೆಯಲ್ಲಿ ಬಡ್ತಿ ಪಡೆಯುವ ಹಂತದಲ್ಲಿದ್ದ ಅಧಿಕಾರಿಗಳು ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ.

ಪ್ರೇರಿತ ತನಿಖೆ!: ಕಿರಿಯ ಅಧಿಕಾರಿಗಳ ವಿರುದ್ಧ ನಡೆಸಿದ ತನಿಖೆ ಹಾಗೂ ಚಾರ್ಜ್‌ಶೀಟ್‌ ನೀಡಿರುವುದರ ಹಿಂದೆ ದೊಡ್ಡ ಮಟ್ಟದಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ ಎನ್ನುವ ವಿಚಾರ ಗೌಪ್ಯವಾಗಿ ಉಳಿದಿಲ್ಲ. ಈ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಅಧಿಕಾರಿಗಳು ಲಿಖೀತವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ ಬಡ್ತಿ ಸಂದರ್ಭ ಅಧಿಕಾರಿಗಳು ತಮ್ಮನ್ನು ಭೇಟಿಯಾಗಲಿ ಎನ್ನುವ ಕಾರಣಕ್ಕೆ ಹಿಂದಿನ ಸರಕಾರದ ಅವಧಿಯಲ್ಲಿ ಪ್ರಭಾವಿ ನಾಯಕರೊಬ್ಬರು ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಈ ಪ್ರಕರಣವನ್ನು ಜೀವಂತ ವಾಗಿರಿಸಿದ್ದಾರೆ ಎಂಬುದು ಅಧಿಕಾರಿಗಳ ಆರೋಪ.

ಪರೀಕ್ಷೆಗೆ ಮಾನದಂಡವಿಲ್ಲ: ರಾಜ್ಯದ ಯಾವ ವಿಭಾಗೀಯ ಕಾರ್ಯಾಗಾರ ಹಾಗೂ ಪ್ರಾದೇಶಿಕ ಕಾರ್ಯಾಗಾರಗಳಲ್ಲೂ ಗುಣಮಟ್ಟ ಪರೀಕ್ಷಿಸುವ ಯುಂತ್ರಗಳಾಗಲಿ ಹಾಗೆಯೇ ಮಾಪನಗಳಾಗಲಿ ಲಭ್ಯವಿಲ್ಲ. ಆದರೆ ತನಿಖಾಧಿಕಾರಿಗಳು ಯಾವ ಆಧಾರ ಮೇಲೆ ಗುಣಮಟ್ಟ ಪರೀಕ್ಷಿಸಿದ್ದಾರೆ? ಗುಣಮಟ್ಟ ಪರೀಕ್ಷಿಸುವ ತಾಂತ್ರಿಕ ನೈಪುಣ್ಯತೆ ಇವರಿಗಿದೆಯಾ? ಇವರ ವರದಿ ಆಧಾರದ ಮೇಲೆ ಚಾರ್ಜ್‌ಶೀಟ್‌ ನೀಡಿರುವುದು ಎಷ್ಟು ಸಮಂಜಸ? ತಾಂತ್ರಿಕ ಸಮಿತಿ ರಚಿಸಿ ತನಿಖೆ ಮಾಡಿ ವರದಿ ಸಲ್ಲಿಸಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಕನಿಷ್ಠ ಪಕ್ಷ ತನಿಖೆಯ ನಂತರ ತಾಂತ್ರಿಕ ಸಮಿತಿಗೆ ವರದಿ ಸಲ್ಲಿಸಿ ಚಾರ್ಜ್‌ಶೀಟ್‌ ನೀಡಬಹುದಿತ್ತು. ಚಾರ್ಜ್‌ಶೀಟ್‌ ನೀಡಿದ ನಂತರ ವಿಚಾರಣೆಯೂ ನಡೆಸದೆ ಪ್ರಕರಣ ಬಾಕಿ ಉಳಿಸಿಕೊಂಡಿರುವುದು ಮಾನಸಿಕ ಹಿಂಸೆ ನೀಡುವುದಕ್ಕಾಗಿದೆ ಎಂಬುದು ಅಧಿಕಾರಿಗಳ ಅಳಲು.

ಸಾರಿಗೆ ಸಂಸ್ಥೆಯಲ್ಲಿ ಬಡ್ತಿ ಪಡೆಯು ವುದು ಉದ್ಯೋಗ ಪಡೆದಷ್ಟೇ ಕಷ್ಟ. ಈವರೆಗಿನ ಸೇವಾವಧಿಯಲ್ಲಿ ಒಂದೇ ಒಂದು ಚಾರ್ಜ್‌ಶೀಟ್‌ ಪಡೆದಿಲ್ಲ. ಆದ ರೀಗ ಮಾಡದ ತಪ್ಪಿಗಾಗಿ ಶಿಕ್ಷೆ ಅನುಭವಿ ಸುವಂತಾಗಿದೆ. ಪ್ರಕರಣ ಕುರಿತು ಲಿಖೀತ ವಾಗಿ ಸಮರ್ಥನೆ ಮಾಡಿಕೊಂಡಿದ್ದರೂ ದಾಖಲಿಸಿದ್ದ ಆರೋಪ ರದ್ದುಪಡಿಸಿಲ್ಲ. ಇದರಿಂದ 10-12 ವರ್ಷ ಕಾದ ಬಳಿಕವೂ ಬಡ್ತಿಯಿಂದ ವಂಚಿತನಾಗುವ ಆತಂಕ ಎದುರಾಗಿದೆ.
-ಹೆಸರೇಳಲಿಚ್ಛಿಸದ ಅಧಿಕಾರಿ
ಕೃಪೆ:ಉದಯವಾಣಿ

ಮಾಡದ ತಪ್ಪಿಗೆ ಸಾರಿಗೆ ಅಧಿಕಾರಿಗಳ ಬಡ್ತಿಗೆ ಕೊಕ್ಕೆ?
hook-for-transport-officers-promotion-for-wrongdoing