ಬೆಂಗಳೂರು,ನ,26,2019(www.justkannada.in): ಹುಳಿಮಾವು ಕೆರೆ ಏರಿ ಒಡೆದು ಮನೆಗಳಿಗೆ ನೀರು ನುಗ್ಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮೇಯರ್ ಮತ್ತು ಆಯುಕ್ತರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದರು.
ಬೆಂಗಳೂರಿನ ಹುಳಿಮಾವು ಕೆರೆ ಏರಿ ಒಡೆದು ನೂರಾರು ಮನೆಗಳು ಜಲಾವೃತವಾಗಿ ಅನೇಕ ಜನರು ನಿರಾಶ್ರಿತರಾಗಿದ್ದರು. ನಿರಾಶ್ರಿತರಿಗಾಗಿ ಪರಿಹಾರ ಕೇಂದ್ರ ತೆರೆದು ಆಶ್ರಯ ನೀಡಲಾಗಿತ್ತು. ಇಂದು ಪರಿಹಾರ ಕೇಂದ್ರಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಯನ್ನ ಆಲಿಸಿದರು.
ನಂತರ ಒಡೆದ ಏರಿ ತುರ್ತು ಕಾಮಗಾರಿ ನಡೆಸಬೇಕು. ಸ್ಥಳದಲ್ಲಿಯೇ ಇದ್ದು ದುರಸ್ತಿ ಮಾಡಿಸಬೇಕು ಎಂದು ಬಿಬಿಎಂಪಿ ಮೇಯರ್ ಮತ್ತು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು. ಅಲ್ಲದೆ ಸಂತ್ರಸ್ತರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕು. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಬಳಿಕ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಹುಳಿಮಾವು ಕೆರೆ ಏರಿ ಒಡೆದು ಸುಮಾರು 319 ಬಡವರ ಮನೆಗಳು ಸೇರಿ ಒಟ್ಟು 630 ಮನೆಗಳು ಹಾನಿಯಾಗಿವೆ. ಮನೆ ಕಳೆದುಕೊಂಡ ನಿರಾಶ್ರಿತರ ಖಾತೆಗಳಿಗೆ ಇಂದು ಸಂಜೆಯೊಳಗೆ 50 ಸಾವಿರ ಪರಿಹಾರ ಹಣ ನೀಡಲಾಗುವುದು ಎಂದು ಘೋಷಿಸಿದರು.
ಬಳಿಕ ಕೆರೆ ಒಡೆದ ಪ್ರದೇಶಕ್ಕೆ ಭೇಟಿ ನೀಡಿದ ಸಿಎಂ, ಘಟನೆಗೆ ಕಾರಣ ಏನೆಂದು ತನಿಖೆ ಮಾಡಿ, ಅಗತ್ಯ ಕ್ರಮ ತೆಗೆದುಕೊಳ್ಳಲು ಆದೇಶಿಸಿದ್ದೇನೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲು ಹೇಳಿದ್ದೇನೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.
Key words: hulimavu-lake-break-Criminal action -against –offenders-CM BS Yeddyurappa