ಬೆಂಗಳೂರು, ಜೂನ್ 17,2024 (www.justkannada.in): ಎಲ್ಲರಲ್ಲೂ ಮನುಷ್ಯತ್ವ ಬೆಳೆಯಲಿ. ಸಹಿಷ್ಣುತೆ, ಪ್ರೀತಿ ವಿಶ್ವಾಸ ಬೆಳೆಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಇಂದು ಬಕ್ರೀದ್ ಹಬ್ಬದ ಅಂಗವಾಗಿ ಚಾಮರಾಜಪೇಟೆಯಲ್ಲಿ ಇಂದು ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎಲ್ಲಾ ಮುಸಲ್ಮಾನ ಬಾಂಧವರಿಗೆ ಬಕ್ರೀದ್ ಶುಭಾಶಯಗಳನ್ನು ತಿಳಿಸಿದರು. ಎಲ್ಲರೂ ಇಂದು ಭಕ್ತಿಯಿಂದ ಪ್ರಾರ್ಥನೆಯಲ್ಲಿ ಭಾಗವಹಿಸಿ ಮನುಕುಲಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೀರಿ. ಎಲ್ಲರೂ ಸಾಮೂಹಿಕ ಪ್ರಾರ್ಥನೆ ಮಾಡಿದ್ದು, ಸಮಾಜದಲ್ಲಿ ನಾವೆಲ್ಲರೂ ಅಣ್ಣತಮ್ಮಂದಿರ ಹಾಗೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಬೇಕು ಎಂದರು.
ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
ಭಾರತ ಬಹುತ್ವದ ದೇಶ. ಎಲ್ಲಾ ಧರ್ಮ, ಜಾತಿ, ಭಾಷೆ, ಪ್ರಾಂತ್ರ್ಯದವರು ಒಟ್ಟಾಗಿ ಬಾಳಬೇಕು. ಮನುಷ್ಯತ್ವ ಬಹಳ ದೊಡ್ಡದು. ಎಲ್ಲರೂ ಪರಸ್ಪರ ಪ್ರೀತಿಸಬೇಕು. ಪ್ರತಿಯೊಬ್ಬರೂ ಸಹಿಷ್ಣುತೆಯನ್ನು ಪಾಲಿಸಬೇಕು. , ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಹಾಗೆ ಬೆಳೆದಾಗ ಮಾತ್ರ ರಾಷ್ಟ್ರ ಸಮಾಜ ಹಾಗೂ ಎಲ್ಲಾ ಧರ್ಮಗಳೂ ಎಳಿಗೆಯಾಗುತ್ತದೆ ಎಂದರು.
ಸರ್ವ ಧರ್ಮ ಸಮನ್ವಯ ದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಸರ್ಕಾರ
ನಮ್ಮ ಸರ್ಕಾರ ಸರ್ವ ಧರ್ಮ ಸಮನ್ವಯದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಸರ್ಕಾರ. ಸಂವಿಧಾನ ಹೇಳುವಂತೆ ನಡೆದುಕೊಳ್ಳುತ್ತೇವೆ. ಯಾವುದೇ ತಾರತಮ್ಯ ಮಾಡುವುದಿಲ್ಲ. ಕರ್ನಾಟಕದ ಏಳು ಕೋಟಿ ಜನರನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು. ಈ ಕೆಲಸವನ್ನು ತಾರತಮ್ಯವಿಲ್ಲದೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಅಲ್ಪಸಂಖ್ಯಾತರು, ಬಹುಸಂಖ್ಯಾತರಿಗೆ ಒಂದೇ ರೀತಿಯಲ್ಲಿ ರಕ್ಷಣೆ
ಅಲ್ಪಸಂಖ್ಯಾತರು ಕೂಡ ಯಾವುದೇ ಕಾರಣಕ್ಕೂ ಭಯ ಆತಂಕ ಪಡಬೇಕಾದ ಅಗತ್ಯವಿಲ್ಲ. ನಮ್ಮ ಸರ್ಕಾರದಲ್ಲಿ ಅಲ್ಪಸಂಖ್ಯಾತರು, ಬಹುಸಂಖ್ಯಾತರನ್ನು ಒಂದೇ ರೀತಿಯಲ್ಲಿ ರಕ್ಷಣೆ ಕೊಡುವ ಕೆಲಸ ಮಾಡುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ನಾಡಿನ ಅಭಿವೃದ್ಧಿಗೆ ಒಳ್ಳೆ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.
Key words: humanity, tolerance, everyone, CM Siddaramaiah