ಮೈಸೂರು, ಮೇ 06 : ಹಂಪಿ ಎಕ್ಸ್‌ಪ್ರೆಸ್ ರೈಲು 7 ಗಂಟೆ ವಿಳಂಬವಾಗಿದ್ದರಿಂದ ಉತ್ತರ ಕರ್ನಾಟಕ ಭಾಗದ ನೂರಾರು ವಿದ್ಯಾರ್ಥಿಗಳು ‘ ನೀಟ್ ‘ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಜತೆಗೆ ಕೊನೆ ಹಂತದಲ್ಲಿ ಪರೀಕ್ಷಾ ಕೇಂದ್ರದ ಬದಲಾವಣೆ ಹಾಗೂ ಸೂಕ್ತ ಸಂವಹನ ಕೊರತೆಯಿಂದಲು ನೂರಾರು ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಗೊಂದಲಕ್ಕೀಡಾಗಿದ್ದಾರೆ. ಆದ್ದರಿಂದ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಬೇಕು ಎಂದು ಭಾರತೀಯ ವಿಜ್ಞಾನ ಕಾಂಗ್ರೆಸ್ ನ ಅಧ್ಯಕ್ಷ , ಮಾಜಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಪ್ರೊ.ಕೆ.ಎಸ್.ರಂಗಪ್ಪ ಹೇಳಿರುವುದಿಷ್ಟು…
ವರ್ಷದಲ್ಲಿ ಒಮ್ಮೆ ಮಾತ್ರ ವೈಧ್ಯಕೀಯ ಪ್ರವೇಶ ಪರೀಕ್ಷೆ `ನೀಟ್ ‘ ನಡೆಸಲಾಗುತ್ತದೆ. ಅದನ್ನೂ ಸಮರ್ಪಕವಾಗಿ ನಡೆಸುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವುದು ನಾಚಿಕೇಡು. ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿ ವಿದ್ಯಾರ್ಥಿಗಳಿಗೆ ಗೊಂದಲಕ್ಕೀಡು ಮಾಡಿದಕ್ಕೆ ‘ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ‘ ಹೊಣೆಯಾದರು ಘಟನೆಯ ನೈತಿಕತೆಯನ್ನು ಕೇಂದ್ರ ಸರಕಾರವೇ ಹೊರಬೇಕು ಎಂದು ಆಗ್ರಹಿಸಿದರು.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅಗತ್ಯವಾಗಿರುವ ರಾಷ್ಟ್ರೀಯ ಅರ್ಹತಾ–ಪ್ರವೇಶ ಪರೀಕ್ಷೆ (ನೀಟ್) ಭಾನುವಾರ ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಯಿತು. ಆದರೆ ಕೊನೆಯ ಹಂತದಲ್ಲಿ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿದ್ದು, ಜತೆಗೆ ರೈಲು ಸಂಚಾರದ ಮಾರ್ಗ ಬದಲಾವಣೆಯಿಂದ ಉಂಟಾದ ವಿಳಂಬದಿಂದ ನೂರಾರು ವಿದ್ಯಾರ್ಥಿಗಳು ‘ನೀಟ್’ ಪರೀಕ್ಷೆಯಿಂದ ವಂಚಿತರಾಗಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ,
ರೈಲ್ವೆ ಇಲಾಖೆಯ ಬೇಜಾವಾಬ್ದಾರಿ ತನದಿಂದ ನೀಟ್ ಪರೀಕ್ಷೆ ಕೈ ತಪ್ಪುವುದು ತಿಳಿಯುತ್ತಿದ್ದಂತೆ ರೈಲಿನಲ್ಲೇ ಪ್ರಯಾಣಿಸುತ್ತಿದ್ದ ಕೆಲ ವಿದ್ಯಾರ್ಥಿಗಳು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೇ ಟ್ವೀಟ್ ಮೂಲಕ ಅಳಲು ತೋಡಿಕೊಂಡು ಮರು ಪರೀಕ್ಷೆ ನಡೆಸುವಂತೆ ಮನವಿ ಮಾಡಿದ್ದಾರೆ. ಆದರೆ ಸಚಿವರು ಈ ಬಗ್ಗೆ ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ನೀಡದಿರುವುದು ವಿಪರ್ಯಾಸ.
ಈ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಿ ನಡೆದಿರುವ ಪ್ರಮಾಧ ಸರಿಪಡಿಸಬೇಕು ಎಂದು ಕೇಂದ್ರ ಸರಕಾರವನ್ನು ಪ್ರೊ.ಕೆ.ಎಸ್.ರಂಗಪ್ಪ ಆಗ್ರಹಿಸಿದ್ದಾರೆ.
–
Hundreds of students from North Karnataka districts have missed the #NEET Exam being held on sunday at Bengaluru due to a 7-hour delay of the Hampi Express. A last-minute change in the exam centres and lack of proper communication of the same has created confusion among students – prof.K.S.Rangappa, Chairman, ISC