ಮೈಸೂರು, ನವೆಂಬರ್, 24, 2019 (www.justkannada.in): ಹುಣಸೂರು ವಿಧಾನ ಸಭೆ ಉಪ ಚುನಾವಣೆ ದಿನದಿಂದ ದಿನಕ್ಕೆ ಕುತೂಹಲಕ್ಕೆ ಕಾರಣವಾಗಿದ್ದು, ಕುರುಬ ಸಮುದಾಯದ ನಡೆ ಕಾಂಗ್ರೆಸ್ ತಲೆ ನೋವಿಗೆ ಕಾರಣವಾಗಿದೆ.
ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಚ್. ವಿಶ್ವನಾಥ್ ಅವರಿಗೆ ಕುರುಬ ಮತ್ತು ದಲಿತ ಸಂಘಟನೆಗಳು ಬೆಂಬಲ ಘೋಷಿಸಿವೆ. ಇದು ಕಾಂಗ್ರೆಸ್ ನಾಯಕರನ್ನು ಚಿಂತೆಗೀಡು ಮಾಡಿದೆ.
ದಲಿತ ಮುಖಂಡರೆಲ್ಲ ಒಗ್ಗಟ್ಟಾಗಿ ವಿಶ್ವನಾಥ್ ಅವರಿಗೆ ಬೆಂಬಲ ಸೂಚಿಸಿವೆ, ತಮ್ಮ ಸಮುದಾಯದ ಬಗ್ಗೆ ಯಾವುದೇ ರೀತಿಯ ವದಂತಿ ಹಬ್ಬಿಸದೇ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ದಲಿತ ಮುಖಂಡ ನಿಂಗರಾಜ್ ಮಾಲಡಿ ಮಾತನಾಡಿ, ಸಮುದಾಯದವರೆಲ್ಲಾ ವಿಶ್ವನಾಥ್ ಅವರನ್ನು ಮರು ಆಯ್ಕೆ ಮಾಡಬೇಕೆಂದು ಹೇಳಿದ್ದಾರೆ.
ಹುಣಸೂರಿನಲ್ಲಿ ಹೆಚ್ಚು ಪ್ರಮಾಣದಲ್ಲಿ ದಲಿತರ ಮತಗಳಿವೆ, ಒಕ್ಕಲಿಗರ ನಂತರ ಅತಿ ಹೆಚ್ಚು ಸಂಖ್ಯೆಯಿರುವುದು ದಲಿತ ಸಮುದಾಯದ ಮತಗಳು, ನವೆಂಬರ್ 25 ರಂದು ದಲಿತ ಸಮುದಾಯಗಳು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ವಿಶ್ವನಾಥ್ ಅವರಿಗೆ ತಮ್ಮ ಬೆಂಬಲ ನೀಡುವುದಾಗಿ ನಿರ್ಣಯ ಕೈಗೊಂಡರು. ಇದು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಹುದೊಡ್ಡ ಹೊಡೆತ ನೀಡಿದೆ.