ಮೈಸೂರು,ಡಿ,2,2019(www.justkannada.in): ಡಿಸೆಂಬರ್ 5ರಂದು ನಡೆಯಲಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಂತಿಮ ಸಿದ್ದತೆಗಳನ್ನು ಮಾಡಲಾಗಿದೆ. ನಾಳೆ ಸಂಜೆ 6ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭೀರಾಮ್ ಜೀ ಶಂಕರ್ ಮಾಹಿತಿ ನೀಡಿದರು.
ಇಂದು ಸುದ್ದಿಗೋಷ್ಟಿ ನಡೆಸಿ ಹುಣಸೂರು ವಿಧಾನಸಭಾ ಉಪಚುನಾವಣೆ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ನಂತರ ಕ್ಷೇತ್ರಕ್ಕೆ ಸಂಬಂಧ ಪಟ್ಟ ರಾಜಕೀಯ ನಾಯಕರು ಕ್ಷೇತ್ರ ತೊರೆಯಬೇಕು. ಕ್ಷೇತ್ರಕ್ಕೆ ಸಂಬಂಧಪಡದವರು ಹುಣಸೂರು ವ್ಯಾಪ್ತಿಯಲ್ಲಿ ವಾಸ್ತವ್ಯ ಮಾಡುವಂತಿಲ್ಲ. ನಾಳೆ ಸಂಜೆ 6ಗಂಟೆಯಿಂದ ಡಿಸೆಂಬರ್ 5ರ ಮಧ್ಯರಾತ್ರಿವರೆಗೆ ಅನ್ವಯವಾಗುವಂತೆ ಹುಣಸೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ. ಡಿಸೆಂಬರ್ 5ರಂದು ಹುಣಸೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ. ನಾಳೆ ಸಂಜೆ 6ಗಂಟೆಯಿಂದ ಡಿಸೆಂಬರ್ 5ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಹಾಗೆಯೇ ಚುನಾವಣಾ ವೀಕ್ಷಕರಾಗಿ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕರಾಗಿ ಅಮರ್ ಖುಷ್ವ ಹಾಗೂ ವೆಚ್ಚ ವೀಕ್ಷಕರಾಗಿ ಉಪಿಂದರ್ ಬಿರ್ ಸಿಂಗ್ ನೇಮಕವಾಗಿದ್ದಾರೆ. ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 274 ಮತಗಟ್ಟೆಗಳ ಸ್ಥಾಪನೆ ಮಾಡಲಾಗುತ್ತದೆ. ಕ್ಷೇತ್ರದಲ್ಲಿ ಒಟ್ಟು 2,27,974 ಮತದಾರರಿದ್ದು, ಈ ಪೈಕಿ 1,14,580 ಪುರುಷ ಮತದಾರರು. 1,13,388 ಮಹಿಳಾ ಮತದಾರರು. ಇತರೆ 6 ಮತದಾರರಿದ್ದಾರೆ. ಒಟ್ಟಾರೆ ಮತದಾರರ ಪೈಕಿ 2,235 ಮಂದಿ ವಿಶೇಷ ಚೇತನ ಮತದಾರರಿದ್ದಾರೆ. ಡಿಸೆಂಬರ್ 5 ರಂದು ಬೆಳಿಗ್ಗೆ 7ಗಂಟೆಯಿಂದ ಸಂಜೆ 6ರವರಗೆ ಮತದಾನ ನಡೆಯಲಿದೆ. ಮತದಾನಾಧಿಕಾರಿಗಳನ್ನು ಮತಗಟ್ಟೆಗಳಿಗೆ ಕರೆದೊಯ್ಯಲು 45 ಕೆ.ಎಸ್.ಆರ್.ಟಿ.ಸಿ ಬಸ್ 3 ಮ್ಯಾಕ್ಸಿಕ್ಯಾಬ್ ಹಾಗು 1 ಜೀಪ್ ನ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿ ಅಭೀರಾಮ್ ಜೀ ಶಂಕರ್ ಮಾಹಿತಿ ನೀಡಿದರು.
ಡಿಸೆಂಬರ್ 9 ರಂದು ಹುಣಸೂರಿನ ಡಿ. ದೇವರಾಜು ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು ಅಂದು ಸಹ ಹುಣಸೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ 3 ಸುತ್ತಿನ ಭದ್ರತೆ ಒದಗಿಸಲಾಗುತ್ತಿದೆ ಎಂದು ಅಭೀರಾಮ್ ಜೀ ಶಂಕರ್ ತಿಳಿಸಿದರು.
ಹಾಗೆಯೇ ಹುಣಸೂರು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ, ಸೂಕ್ತ ದಾಖಲೆಗಳಿಲ್ಲದೇ ಕೊಂಡೊಯ್ಯುತ್ತಿದ್ದ 2,07,25,300 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪೈಕಿ ಅಗತ್ಯ ದಾಖಲಾತಿಗಳನ್ನು ಒದಗಿಸಿದ ನಂತರ 2,06,35,300 ರೂಪಾಯಿಗಳನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಲಾಗಿದೆ. ಉಳಿಕೆ 90 ಸಾವಿರಕ್ಕೆ ಯಾವುದೇ ದಾಖಲೆ ನೀಡಿಲ್ಲ. 7,24,798 ರೂಪಾಯಿ ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ. 98,82,000 ರೂಪಾಯಿ ಮೌಲ್ಯದ ಪಾಂಪ್ಲೆಂಟ್ಸ್, ಪಾತ್ರೆ, ಸೀರೆ, ದ್ವಿಚಕ್ರ ಮತ್ತು 4 ಚಕ್ರದ ವಾಹನ ಮತ್ತು 4 ಟ್ಯಾಂಕರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದರು.
ಉಪಚುನಾವಣೆಗೆ ಬಿಗಿ ಪೊಲೀಸ್ ಬಂದೋಬಸ್ತ್…
ಉಪಚುನಾವಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ, ಸಿ.ಎ.ಪಿ.ಎಫ್ ಪಡೆ ನಿಯೋಜಿಸಲಾಗಿದ್ದು. ಪ್ರತಿ ಮತಗಟ್ಟೆಗೂ ಅಗತ್ಯ ಪೊಲೀಸ್ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಮತ ಎಣಿಕಾ ಕೇಂದ್ರಕ್ಕೆ 3ಸುತ್ತಿನ ಭದ್ರತೆ ನೀಡಲಾಗಿದೆ. ಸಿ.ಎ.ಪಿ.ಎಫ್ ತುಕಡಿಯಿಂದ 1ನೇ ಹಂತದ ಭದ್ರತೆ, ಸಶಸ್ತ್ರ ಮೀಸಲು ಪಡೆಯಿಂದ ಎರಡನೇ ಹಂತದ ಭದ್ರತೆ ಹಾಗೂ ಸ್ಥಳೀಯ ಪೊಲೀಸ್ ಭದ್ರತೆಯಿಂದ 3ನೇ ಹಂತದ ಭದ್ರತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮಾಹಿತಿ ನೀಡಿದರು.
Key words: hunsur- by-election- Mysore DC -Abhiram G Shankar- Preparation