ಮೈಸೂರು,ಮಾರ್ಚ್,26,2024, (www.justkannada.in): ಮುಡಾ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಎಲ್.ನಾಗೇಂದ್ರ, ಯಾರೋ ಇಬ್ಬರು ಮೂವರು ಹೋದ್ರೆ ತಲೆ ಕೆಡಿಸಿಕೊಳ್ಳಲ್ಲ. ನಮ್ಮ ಪಕ್ಷಕ್ಕೆ ಸಾವಿರಾರು ಜನರು ಬರುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಶಾಸಕ ಎಲ್ ನಾಗೇಂದ್ರ, ಎಚ್.ವಿ ರಾಜೀವ್ ಅವರು ಪಕ್ಷ ತೊರೆಯುವುದರಿಂದ ನಮ್ಮ ಪಕ್ಷಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಈಗಾಗಲೇ ಅವರು ರಾಜಿನಾಮೆ ನೀಡಿದ್ದಾರೆ. ಅವರ ಮನವೊಲಿಸುವ ಪ್ರಯತ್ನ ಮಾಡಲ್ಲ. ಈಗಾಗಲೇ ಕಳೆದ ವಿಧಾನಸಭಾ ಚುನಾವಣೆಯಲ್ಲೇ ಅವರು ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಯಾರೋ ಇಬ್ಬರು ಮೂವರು ಹೋದರೆ ನಮ್ಮ ಪಕ್ಷಕ್ಕೆ ಸಾವಿರಾರು ಜನರು ಬರುತ್ತಾರೆ. ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳವುದಿಲ್ಲ. ಚುನಾವಣಾ ಸಂದರ್ಭದಲ್ಲಿ ಪಕ್ಷಾಂತರ ಪರ್ವ ಸಹಜ. ಆದರೆ ಇದರಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗಲ್ಲ ಎಂದು ಹೇಳಿದರು.
ಒಕ್ಕಲಿಗರಿಗೆ ಟಿಕೆಟ್ ಕೊಡಲು 41 ವರ್ಷ ಬೇಕಿತ್ತಾ.? ಕಾಂಗ್ರೆಸ್ ವಿರುದ್ದ ಕಿಡಿ.
ಮೈಸೂರು-ಕೊಡಗು ಕ್ಷೇತ್ರದಿಂದ ಎಂ.ಲಕ್ಷ್ಮಣ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಲ್ .ನಾಗೇಂದ್ರ, ಕಾಂಗ್ರೆಸ್ ಪಕ್ಷ ಒಕ್ಕಲಿಗ ವಿರೋಧಿ ಪಕ್ಷ. ಒಕ್ಕಲಿಗರಿಗೆ ಟಿಕೆಟ್ ಕೊಡಲು 41 ವರ್ಷ ಬೇಕಿತ್ತಾ.? 41 ವರ್ಷಗಳಿಂದ ಯಾರೊಬ್ಬ ಒಕ್ಕಲಿಗರು ಇರಲಿಲ್ವಾ.? ಹಾಳಾದ ಊರಿಗೆ ಉಳಿದವನೇ ಗೌಡ ಅಂತ ಲಕ್ಷ್ಮಣ್ ಗೆ ಟಿಕೆಟ್ ಕೊಟ್ಟಿದ್ದಾರೆ. ಇದಕ್ಕೂ ಮುಂಚೆ ಯಾಕೆ ಒಕ್ಕಲಿಗ ಸಮುದಾಯಕ್ಕೆ ಅವಕಾಶ ಕೊಟ್ಟಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾಳೆ ಮೈಸೂರಿಗೆ ಬಿವೈ ವಿಜಯೇಂದ್ರ.
ಇನ್ನು ನಾಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮೈಸೂರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ 8.30 ಕ್ಕೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಮಡಿಕೇರಿ ಪ್ರವಾಸ ಮಾಡಲಿದ್ದಾರೆ. ಸಂಜೆ ಮತ್ತೆ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಯದುವೀರ್ ಮತ್ತು ಬಿಜೆಪಿ ಮುಖಂಡರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಲಿದೆ ಮುಂದಿನ ಚುನಾವಣೆ ಎದುರಿಸಲು ರೂಪುರೇಷೆಗಳನ್ನು ತಯಾರಿಸುವ ಚರ್ಚೆ ನಡೆಯಲಿದೆ ಎಂದರು.
ಜೆಡಿಎಸ್ ಮತ್ತು ಬಿಜೆಪಿ ಒಟ್ಟಿಗೆ ಸೇರಿ ಚುನಾವಣೆ ಎದುರಿಸುತ್ತಿರುವುದರಿಂದ ನಮ್ಮ ಪಕ್ಷಕ್ಕೆ ಆನೆ ಬಲ ಬಂದಿದೆ. ನಾಳೆ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲು ನಾವು ಕೂಡ ರಾಜಕೀಯ ತಂತ್ರಗಾರಿಕೆಯನ್ನ ಮಾಡುತ್ತೇವೆ. ಇದೊಂದು ಕೋರ್ ಕಮಿಟಿ ಸಭೆ ರೀತಿ ಇರುತ್ತದೆ. ಲೋಕಸಭಾ ಚುನಾವಣೆ ಎದುರಿಸಲು ಎರಡು ಪಕ್ಷಗಳ ರಾಜ್ಯಾಧ್ಯಕ್ಷರು ಸೇರಿ ನಮಗೆ ಕೆಲವು ಮಾರ್ಗದರ್ಶನ ನೀಡಲಿದ್ದಾರೆ. ನಂತರ ಮೈಸೂರಿನಲ್ಲಿ ಕಾರ್ಯಕರ್ತರ ಸಮಾವೇಶವನ್ನ ಹಮ್ಮಿಕೊಳ್ಳಲಾಗುತ್ತದೆ ಎಂದು ಎಲ್ ನಾಗೇಂದ್ರ ಮಾಹಿತಿ ನೀಡಿದರು.
Key words: HV Rajiv, mysore,L.Nagendra