ಮೈಸೂರು,ನವೆಂಬರ್,29,2024 (www.justkannada.in): ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗುತ್ತಿದ್ದು ಈ ಮಧ್ಯೆ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಆರು ಬಾರಿ ಜನ ನನ್ನನ್ನ ಗೆಲ್ಲಿಸಿದ್ದಾರೆ. ನಮ್ಮ ಕುಟುಂಬಕ್ಕೆ 140 ವರ್ಷಗಳ ಸುಧೀರ್ಘ ಚುನಾವಣಾ ರಾಜಕೀಯ ಇತಿಹಾಸವಿದೆ. ಕಳೆದ ಬಾರಿಯೇ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಸಿದ್ದರಾಮಯ್ಯ ಮೈಸೂರು ಭಾಗದವರು. ಬಹುಮತದ ಸರ್ಕಾರ ಬಂದಾಗ ಸಚಿವ ಸ್ಥಾನ ಕಷ್ಟಸಾಧ್ಯವಾಗಿತ್ತು. ಕಳೆದ ಬಾರಿ ಯಾವ ಕಾರಣಕ್ಕೆ ಕೈತಪ್ಪಿತ್ತು ಗೊತ್ತಿಲ್ಲ. ಲೋಕಸಭಾ ಚುನಾವಣಾ ಸಮಯದಿಂದ ಪುನಃ ಸಚಿವ ಸಂಪುಟ ವಿಸ್ತರಣೆ ಚರ್ಚೆ ಆಗುತ್ತಿದೆ. ಈಗ ಸಚಿವ ಸಂಪುಟ ಪುನಾರಾಚನೆ ಬಗ್ಗೆ ಚರ್ಚೆ ನಡೆಯುತ್ತಿದೆ. ನಾನು ಸಚಿವ ಸ್ಥಾನ ಕೊಡಿ ಎಂದು ಯಾರ ಬಳಿ ಕೇಳಿಲ್ಲ. ಪಕ್ಷದ ವರಿಷ್ಠರ ಮೇಲೆ ನನಗೆ ನಂಬಿಕೆ ಇದೆ. ಕಳೆದ ಬಾರಿ ಪಟ್ಟಿಯಲ್ಲಿ ನನ್ನ ಹೆಸರಿತ್ತು ಈ ಬಾರಿಯೂ ಇದೇ ಅನ್ನಿಸುತ್ತೆ ಎಂದರು.
ಸಚಿವ ಜಮೀರ್ ಅವರನ್ನ ತೆಗೆದು ನನಗೆ ಕೊಡ್ತಾರೆ ಅಂದುಕೊಂಡಿಲ್ಲ
ನನಗೆ ನಿಗಮ ಮಂಡಳಿ ಕೊಡಲು ಬಂದರು. ನಿಗಮ ಮಂಡಳಿ ಬೇಡ ಎಂದು ಈ ಹಿಂದೆ ಹೇಳಿದ್ದೆ. ಈ ಬಾರಿ ಕೆಲ ಸಚಿವರನ್ನು ಕೈ ಬಿಡುತ್ತಾರೆ ಅನ್ನುವ ಸುದ್ದಿ ಮಾಧ್ಯಮದಲ್ಲಿ ಬರುತ್ತಿದೆ ಇದೆ. ಸಚಿವ ಜಮೀರ್ ಅವರನ್ನ ತೆಗೆದು ನನಗೆ ಕೊಡ್ತಾರೆ ಅಂದುಕೊಂಡಿಲ್ಲ. ನನಗೆ ಅವಕಾಶ ಇದ್ದಾಗ ನನಗೆ ಸಿಕ್ಕೇ ಸಿಗುತ್ತೆ. ಅಲ್ಪ ಸಂಖ್ಯಾತ ಕೋಟದಲ್ಲಿ ಕೇವಲ ಎರಡು ಸ್ಥಾನ ನೀಡಿದ್ದಾರೆ. ಅಲ್ಪ ಸಂಖ್ಯಾತರಿಗೆ ಮೂರು ಸ್ಥಾನ ಕೊಡಿ ಎಂದು ಮನವಿಯಷ್ಟೆ. ನಾನು ಪಕ್ಷದಲ್ಲಿದ್ದೇನೆ, ಸಿದ್ದಾಂತ ಒಪ್ಪಿಕೊಂಡಿದ್ದೇನೆ. ಯಾರನ್ನೂ ತೆಗೆದು ನನಗೆ ಕೊಡಿ ಎಂದು ನಾನು ಕೇಳಲ್ಲ. ಈ ಬಾರಿ ಪುನಾರಚನೆ ಆದಾಗ ನನಗೆ ಸಚಿವ ಸ್ಥಾನ ಸಿಗುವ ಭರವಸೆ ಇದೆ . ನಾನು ಯಾವುದೇ ವ್ಯಕ್ತಿ ಪೂಜೆ ಮಾಡಲ್ಲ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸ್ತೇನೆ, ಇಲ್ಲವಾದರೆ ಜನರ ಸೇವೆ ಮಾಡುತ್ತೇನೆ ಎಂದರು.
ಸ್ವ ಪಕ್ಷದ ಸಚಿವರು,ಶಾಸಕರಿಗೆ ಟಾಂಗ್ ಕೊಟ್ಟ ತನ್ವೀರ್ ಸೇಠ್
ಶಾಸಕ ಸಿ.ಪಿ.ಯೋಗೇಶ್ವರ್ ಜೆಡಿಎಸ್ ನಿರ್ನಾಮ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ನಮ್ಮ ಒಬ್ಬ ಸಚಿವರು ದೇವೇಗೌಡರ ಕುಟುಂಬ ಖರೀದಿ ಮಾಡ್ತೀನಿ ಅಂದಿದ್ರು. ಶಾಸಕ ಸಿ.ಪಿ.ಯೋಗೇಶ್ವರ್ ಜೆಡಿಎಸ್ ನಿರ್ನಾಮ ಮಾಡ್ತೀವಿ ಅಂದ್ರು. ಆದರೆ ಕಾಂಗ್ರೆಸ್ ಪಕ್ಷಕ್ಕೆ ನಿರ್ನಾಮ ಮಾಡುವ ದರಿದ್ರ ಬಂದಿಲ್ಲ. ಯಾರ್ಯಾರು, ಎಲ್ಲೆಲ್ಲಿ ಇದ್ದಾರೆ ಅವರು ಅಲ್ಲಲ್ಲೇ ಅವರ ಕೆಲಸ ಮಾಡಲಿ ಎಂದು ಸ್ವ ಪಕ್ಷದ ಸಚಿವರು,ಶಾಸಕರಿಗೆ ಟಾಂಗ್ ಕೊಟ್ಟರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್, ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊಡ್ಡದು. ಅದನ್ನು ನಿಭಾಯಿಸುವ ಸಮಯ, ಶಕ್ತಿ ನನಗಿಲ್ಲ. ಡಿ.ಕೆ.ಶಿವಕುಮಾರ್ ಬಿಟ್ಟರೆ ಬೇರೆಯವರು ಅದಕ್ಕೆ ಅರ್ಹರಲ್ಲ. ಅವರ ಶ್ರಮ ಕಾರ್ಯ ಅತಿ ಹೆಚ್ಚಿನದು. ನಾನಂತು ಕಾರ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ನನಗೆ ಸಚಿವ ಸ್ಥಾನ ಕೊಟ್ಟರಷ್ಟೇ ನಿಭಾಯಿಸುತ್ತೇನೆ ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಚುನಾವಣಾ ರಾಜಕಾರಣದಲ್ಲಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆಸೆ ಆಯಸ್ಸಿಗಿಂತ ಹೆಚ್ಚಿನದು. ಸಿಎಂ ಬದಲಾವಣೆ ವರಿಷ್ಠರು ತೆಗೆದುಕೊಳ್ಳುವ ವಿಚಾರ. ಪಕ್ಷದ, ರಾಜ್ಯದ ಬೆಳವಣಿಗೆಗೆ ವರಿಷ್ಠರು ಏನು ತೀರ್ಮಾನ ಮಾಡ್ತಾರೋ ಆ ತೀರ್ಮಾನಕ್ಕೆ ಬದ್ಧ. ಬದಲಾವಣೆ ವಿಚಾರ ಬಂದಾಗ ನಾವು ಎಲ್ಲದ್ದಕ್ಕೂ ಸಿದ್ಧರಿರಬೇಕು. ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ. ಅವರನ್ನ ಕಿತ್ತಾಕಿ ಅಂತಲೂ ನಾನು ಹೇಳಲ್ಲ ಎಂದರು.
ಐದು ವರ್ಷ ಸಿಎಂ ಆಗಿ ಮುಂದುವರಿಯುವ ವಿಚಾರ, ಲೋಕಸಭಾ ಚುನಾವಣಾ ಸಮಯ ಸಾಕಷ್ಟು ಚರ್ಚೆ ಆಗಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ವಿತ್ತ ಸಚಿವರಾಗ್ತಾರೆ ಅಂತ ಚರ್ಚೆಯಿತ್ತು. ಆದರೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿಲ್ಲ . ಹಾಗಾಗಿ ಸಿಎಂ ಆಗಿ ರಾಜ್ಯದಲ್ಲಿ ಮುಂದುವರಿದಿದ್ದಾರೆ. ಸದ್ಯ ಹೈಕಮಾಂಡ್ ಏನೇ ತೀರ್ಮಾನ ತೆಗೆದುಕೊಂಡರೂ ನಾನು ಬದ್ಧ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.
Key words: I am, aspirant, ministerial post – MLA Tanveer Sait