ಬೆಂಗಳೂರು, ಜುಲೈ 09, 2023 (www.justkannada.in): ಶೈಕ್ಷಣಿಕ ರಂಗದಲ್ಲಿನ ಸವಾಲುಗಳನ್ನು ಮೆಟ್ಟಿ ನಿಂತು ಮಕ್ಕಳ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.
ಇಂದು ಬಿಟಿಎಂ ಕ್ಷೇತ್ರದ ಆಡುಗೋಡಿ ಕೆ.ಪಿ.ಎಸ್ ಶಾಲೆಗೆ ಭೇಟಿ ನೀಡಿ ಸಾಂಕೇತಿಕವಾಗಿ ನೋಟ್ ಬುಕ್ ವಿತರಿಸಿದ ಬಳಿಕ ಅವರು ಮಾತನಾಡಿದರು.
ಮಾತಿಗಿಂತ ಅನುಭವ ಮುಖ್ಯ. ಅನುಭವದೊಂದಿಗೆ ಇಲಾಖೆಯನ್ನು ಮುಂದುವರೆಸಿಕೊಂಡು ವಿಶ್ವಾಸವಿಟ್ಟುಕೊಂಡು ಹೋಗುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ ಅವರು ನನ್ನ ಮೇಲೆ ನಂಬಿಕೆಯಿಟ್ಟು ಜವಾಬ್ದಾರಿ ಕೊಟ್ಟಿದ್ದಾರೆ. ಅದನ್ನು ನಾನು ನನ್ನ ಶಕ್ತಿ ಮೀರಿ ಕೆಲಸವನ್ನು ಮಾಡುತ್ತೇನೆ. ಈ ಶಾಲೆಯ ಮಾಹಿತಿಯನ್ನು ನಾನು ತೆಗೆದುಕೊಂಡಿದ್ದೇನೆ. 2000 ರಲ್ಲಿ 192 ಮಕ್ಕಳಿದ್ದರು. ಈಗ 426 ಮಕ್ಕಳು ಇದ್ದಾರೆ. ಹೀಗಾಗಿ ನಾವು ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಬಹುದು ಎನ್ನುವ ಉದಾಹರಣೆಯನ್ನು ಕೊಟ್ಟಿದ್ದಾರೆ ಎಂದರು.
ನಗರಮಟ್ಟದಲ್ಲಿ ಶಾಲೆಗಳು ಸುಲಭವಾಗಿ ಸಿಗುತ್ತವೆ. ಇಲ್ಲಿನ ಮಕ್ಕಳಿಗೆ ಎಲ್ಲ ಅವಕಾಶಗಳು ಬಹಳ ದೊರೆಯುತ್ತವೆ. ಆದರೆ ಗ್ರಾಮೀಣ ಭಾಗದಲ್ಲಿ ಸಮಸ್ಯೆಗಳಿವೆ. ಗ್ರಾಮೀಣ ಭಾಗದಲ್ಲಿಯೂ ಕೂಡ ಸ್ಥಳೀಯವಾಗಿ ಸುಸಜ್ಜಿತ ಕಟ್ಟಡಗಳಲ್ಲಿ ಓದುತ್ತಿದ್ದಾರೆ. ಅದೇ ರೀತಿ ಗ್ರಾಮೀಣ ಮಟ್ಟದ ಮಕ್ಕಳಿಗೂ ಒದಗಿಸುವ ಸವಾಲು ಇದೆ. ನನ್ನ ಅವಧಿಯಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಆ ವ್ಯವಸ್ಥೆಯನ್ನು ನಾನು ಮಾಡುತ್ತೇನೆ. ನಮ್ಮ ಸರ್ಕಾರ ಎಲ್ಲ ಸವಾಲುಗಳನ್ನು ಎದುರಿಸಿ ಅಭಿವೃದ್ಧಿ ಮಾಡಲು ಬದ್ಧವಾಗಿದೆ ಎಂದರು.
ಮಕ್ಕಳಿಗೆ ಬ್ಯಾಗ್ ಹೊರೆ ಕಡಿಮೆ ಮಾಡಿ ಮಕ್ಕಳ ಜ್ಞಾನ ಉತ್ತೇಜನ ನೀಡಬೇಕಾಗಿದೆ. ಈ ಕ್ಷೇತ್ರದ ಶಾಸಕರು, ಸಚಿವರಾದ ರಾಮಲಿಂಗಾರೆಡ್ಡಿಯವರು ಹಿರಿಯರು, ನಿಮ್ಮ ಶಕ್ತಿ, ಅನುಭವ, ಸಹಕಾರವನ್ನು ನಮಗೆ ಕೊಡಿ ಎಂದರಲ್ಲದೇ, ಕ್ಷೇತ್ರದಲ್ಲಿನ ಶಾಲಾ ಅಭಿವೃದ್ಧಿ ಕಾರ್ಯಕ್ಕೆ ಹಿರಿಯ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.
*ಸಚಿವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕೃತಜ್ಞತೆ*
ನಮ್ಮ ಮಕ್ಕಳಿಗೆ ವಾರಕ್ಕೆ ಒಂದು ಬಾರಿ ಮೊಟ್ಟೆಯನ್ನು ಕೊಡಲಾಗುತ್ತಿತ್ತು. ಎಂಟನೇ ತರಗತಿಯವರೆಗೆ ಮೊಟ್ಟೆ ನೀಡಲಾಗುತ್ತಿತ್ತು. ಆದರೆ ಮಕ್ಕಳ ಆರೋಗ್ಯದ ಪೋಷಣೆಗಾಗಿ ಮುಖ್ಯಮಂತ್ರಿಗಳಿಗೆ ನಾವು ಮನವಿ ಮಾಡಿದ್ದೆ. ಮಕ್ಕಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ನಡೆದ ಬಜೆಟ್ ನಲ್ಲಿ ತೀರ್ಮಾನ ಮಾಡಿದ್ದಾರೆ. ಈಗ 10 ನೇ ತರಗತಿಯವರೆಗೆ ಮಕ್ಕಳಿಗೆ ವಾರದಲ್ಲಿ ಎರಡು ಮೊಟ್ಟೆ, ಬಾಳೆಹಣ್ಣು, ಚಕ್ಕಿ ನೀಡುವ ಘೋಷಣೆ ಮಾಡಿದ್ದಾರೆ. 5 ಲಕ್ಷ ಮಕ್ಕಳಿಗೆ ಇದರ ಲಾಭ ಸಿಗಲಿದೆ. ಮಕ್ಕಳ ಪೋಷಕರ ಪರವಾಗಿ, ರಾಜ್ಯದ ಮಕ್ಕಳ ಪರವಾಗಿ ನಾನು ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಬಾಲ್ಯದ ಶೈಕ್ಷಣಿಕ ದಿನಗಳನ್ನು ನೆನೆದ ಸಚಿವರು
ಮಕ್ಕಳು ಸಿಕ್ಕಿರುವ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನಾನು ಪ್ರತಿಭಾವಂತ ಮಕ್ಕಳ ಚಿಂತನೆಯನ್ನು ಕೇಳಿದೆ. ನಾನು ಮೊದಲ ವರ್ಷ ಪಿಯುಸಿಯಲ್ಲಿದ್ದಾಗ ರೈಲು ಅಪಘಾತವನ್ನು ನೋಡಿದ್ದೆ. ಆಗ ಹೇಗೆ ರೈಲು ಅಪಘಾತವನ್ನು ತಡೆಯಬೇಕು ಎನ್ನುವ ಪ್ರಯೋಗ ಮಾಡಿದ್ದೆ. ಅದು ಆರು ತಿಂಗಳು ಕಳೆದ ಬಳಿಕ ಅನುಷ್ಠಾನಕ್ಕೆ ಬಂದಿತ್ತು. ನನಗೆ ಕೋಪ ಬಂದಿತ್ತು. ನನ್ನ ವಿಚಾರವನ್ನು ನಕಲು ಮಾಡಿದ್ದಾರೆ ಎಂದುಕೊಂಡಿದ್ದೆ. ಅದು ಪತ್ರಿಕೆಯಲ್ಲಿ ಬಂದಿತ್ತು ಎಂದು ನೆನಪಿನ ಬುತ್ತಿಯನ್ನು ಮಕ್ಕಳ ಮುಂದೆ ತೆರೆದಿಟ್ಟರು.