ಮೈಸೂರು,ಸೆಪ್ಟಂಬರ್,9,2020(www.justkannada.in): ಸಚಿವ ಸಂಪುಟ ವಿಸ್ತರಣೆ ವೇಳೆ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಕುರಿತು ಮೈಸೂರಿನಲ್ಲಿ ಇಂದು ಮಾತನಾಡಿದ ಎಚ್ ವಿಶ್ವನಾಥ್ , ಸಂಪುಟ ವಿಸ್ತರಣೆ ಸಿಎಂ ಯಡಿಯೂರಪ್ಪಗೆ ಬಿಟ್ಟ ವಿಚಾರ. ಸಂಪುಟ ವಿಸ್ತರಣೆ ಚರ್ಚೆಯಲ್ಲಿ ನೆನ್ನೆ ಇದ್ದವರ ಹೆಸರು ನಾಳೆ ಇರೋದಿಲ್ಲ, ಕೊನೆಗೆ ಅಂತಿಮ ಪಟ್ಟಿಯೇ ಬೇರೆ ಇರುತ್ತದೆ. ಸಚಿವ ಸ್ಥಾನ ನೀಡುವುದಾಗಿ ಹೈಕಮಾಂಡ್ ಯಾರಿಗೂ ಭರವಸೆ ನೀಡಿರುವುದಿಲ್ಲ. ಆದರೆ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದರು.
ಡ್ರಗ್ಸ್ ವಿಚಾರದಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಹೆಸರು ಥಳಕು ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸಿದ್ದರಾಮಯ್ಯರ ಕಣ್ಣಿಗೆ ಜಮೀರ್ ಒಳ್ಳೆಯವರಂತೆ ಕಂಡರೆ ಪೊಲೀಸರಿಗೆ ಇನ್ನೊಂದು ರೀತಿ ಕಾಣುತ್ತಾರೆ. ಡ್ರಗ್ಸ್ ಇದು ನೆನ್ನೆಯ ಮೊನ್ನೆಯ ವಿಷಯವಲ್ಲ. ಹಿಂದಿನಿಂದಲೂ ಡ್ರಗ್ಸ್ ಸೇವನೆ ಎಲ್ಲಾ ಕಡೆಯೂ ಇದೆ. ಡ್ರಗ್ಸ್ ಮಾಫಿಯಾವನ್ನು ಹೆಡೆಮುರಿ ಕಟ್ಟುವುದಾಗಿ ಸಿಎಂ ಹೇಳಿದ್ದಾರೆ. ಪೊಲೀಸರಿಗೆ ತಿಳಿಯದಿರುವುದು ಏನೂ ಇಲ್ಲ. ಅವರು ಸರಿಯಾಗಿ ಕೆಲಸ ಮಾಡಿದರೆ ಎಲ್ಲವೂ ಸರಿಯಾಗಿರುತ್ತದೆ ಎಂದು ಅಸಮಾಧಾನ ಹೊರ ಹಾಕಿದರು.
ಈ ಬಾರಿ ಸರಳ ದಸರಾ ಆಚರಣೆಯೇ ಸೂಕ್ತ..
ಸರಳ ದಸರಾ ಆಚರಣೆ ಕುರಿತು ಪ್ರತಿಕ್ರಿಯಿಸಿದ ಎಂಎಲ್ಸಿ ವಿಶ್ವನಾಥ್, ಈ ಭಾರಿ ಸರಳ ದಸರಾ ಆಚರಣೆಯೇ ಸೂಕ್ತ. ಈ ಕುರಿತು ಈ ಹಿಂದೆಯೇ ಸರ್ಕಾರಕ್ಕೆ ಸಲಹೆ ನೀಡಿದ್ದೆ. ನನ್ನ ಅನುಭವ ಹಿನ್ನೆಲೆಯಲ್ಲಿ ಸರ್ಕಾರ ನನ್ನ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.
ಇನ್ನು ಈ ಬಾರಿಯ ದಸರಾ ಉದ್ಘಾಟನೆಯನ್ನು ಕೊರೋನಾ ವಾರಿಯರ್ಸ್ ಗಳಿಂದ ನೆರವೇರಿಸುವ ಸರ್ಕಾರದ ನಿರ್ಧಾರಕ್ಕೆ ಹೆಚ್.ವಿಶ್ವನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.
Key words: I am- confident – ministerial-post-mysore –MLC-H.Vishwanath.