ನಾನು ನನ್ನ ಆತ್ಮೀಯ ಗೆಳೆಯನನ್ನು ಕಳೆದುಕೊಂಡೆ, ನಾವಿಬ್ಬರೂ ಕಾಬುಲ್‌ನಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಂತಹ ಪತ್ರಕರ್ತರಾಗಿದ್ದೆವು!
ತಾಲಿಬಾನ್ ಉಘ್ರರು ಅಫ್ಗಾನಿಸ್ತಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ನಂತರ, ಅಘ್ಪಾನ್‌ನ ಪತ್ರಕರ್ತ ಜರ್ಯರ ಹಸ್ಸಾನಿ ಕಾಬುಲ್‌ನಿಂದ ತಪ್ಪಿಸಿಕೊಂಡು ಪ್ಯಾರಿಸ್‌ಗೆ ಸ್ಥಳಾಂತರಗೊಂಡರು. ಕೆಲವು ವಾರಗಳ ನಂತರ, ತನ್ನ ಪತ್ರಕರ್ತ ಸ್ನೇಹಿತ ಅಲಿರೆಜಾ ಅಹ್ಮದಿ ತನ್ನಂತೆಯೇ ಅಫ್ಘಾನ್ ತೊರೆಯಲು ಪ್ರಯತ್ನಿಸುವಾಗ ಆತ ಎದುರಿಸಿದ ಕಷ್ಟವನ್ನು ಅತ್ಯಂತ ಆತಂಕದಿಂದ ಗಮನಿಸಿದರು.
ಕಾಬುಲ್ : ತಾಲಿಬಾನ್ ಉಘ್ರರು ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಎರಡು ವಾರಗಳೂ ಆಗಿರಲಿಲ್ಲ. ಕಾಬುಲ್‌ನ ವಿಮಾನನಿಲ್ದಾಣದ ಬಳಿ ಬಾಂಬ್ ಸ್ಫೋಟಗಳುಂಟಾದವು. ಇಡೀ ಅಫ್ಘಾನಿಸ್ತಾನದಲ್ಲಿ ಉದ್ಭವಿಸಿದಂತಹ ಅರಾಜಕತೆಯಿಂದಾಗಿ ಕಾಬುಲ್ ವಿಮಾನನಿಲ್ದಾಣದ ಬಳಿ ಸಾವಿರಾರು ಜನರು, ೧೯೯೦ರ ದಶಕದಲ್ಲಿ ನಡೆದಿದ್ದಂತಹ ತಾಲಿಬಾನ್ ಉಘ್ರರ ಕ್ರೂರ ಆಡಳಿತವನ್ನು ನೆನಪಿಸಿಕೊಂಡು ಹೆದರಿ ದೇಶ ತೊರೆದು ಹೋಗಲು ಜಮಾಯಿಸಿದ್ದರು. ವಿಮಾನ ನಿಲ್ದಾಣದ ಬಳಿ ನಡೆದಂತಹ ಸ್ಫೋಟಗಳಲ್ಲಿ ೧೭೦ಕ್ಕೂ ಮಂದಿ ಸಾವನ್ನಪ್ಪಿ, ೨೦೦ಕ್ಕೂ ಹೆಚ್ಚಿನ ಮಂದಿ ಗಾಯಗೊಂಡರು. ಅವರಲ್ಲಿ ಪತ್ರಕರ್ತ ಅಲಿರೆಜಾ ಅಹ್ಮದಿ, ೩೫, ಕೂಡ ಒಬ್ಬರು. ಇದು ಆತನ ಸ್ನೇಹಿತ ಹಾಗೂ ಪತ್ರಕರ್ತ ಜರ್ಯಘ ಹಸ್ಸಾನಿ ಹಂಚಿಕೊಂಡಿರುವ ಕತೆ:
“ನಾನು ಆಲಿರೆಜಾನನ್ನು ಕೊನೆಯ ಬಾರಿಗೆ ಮಾತನಾಡಿಸಿದ್ದು ಆಗಸ್ಟ್ ೨೫ರಂದು – ಅಂದರೆ, ಕಾಬುಲ್‌ನ ಹಮೀದ್ ಕರ್ಜಾಯ್ ಅಂತರರಾಷ್ಟಿಯ ವಿಮಾನ ನಿಲ್ದಾಣದ ಮುಂಭಾಗದಲ್ಲಿರುವ ಅಬ್ಬೆ ಪ್ರವೇಶದ್ವಾರದ ಬಳಿ ನಡೆದಂತಹ ಮಾರಣಾಂತಿಕ ಬಾಂಬ್ ಸ್ಫೋಟಗಳು ನಡೆದ ಹಿಂದಿನ ದಿನ ರಾತ್ರಿ. ನನ್ನ ಪರಮಾಪ್ತ ಸ್ನೇಹಿತ ಅಲಿರೆಜಾ ಕೂಡ ಅಲ್ಲಿಯೇ ಇದ್ದ. ಅದು ಆತ ಈ ಜಗತ್ತಿನ ಮೇಲೆ ಜೀವಿಸಿದ್ದಂತಹ ಕೊನೆಯ ಕ್ಷಣಗಳಾಗಿದ್ದವು.
ನಾನು ಪ್ಯಾರಿಸ್‌ನಲ್ಲಿ ನನ್ನ ಹೋಟೆಲ್ ರೂಮಿನಲ್ಲಿ ಕುಳಿತಿದ್ದೆ – ಅಲ್ಲಿಂದಲೇ ತಾಲಿಬಾನ್ ಉಘ್ರರು ಅಫ್ಘಾನಿಸ್ತಾನದಲ್ಲಿ ನಡೆಸುತ್ತಿದ್ದಂತಹ ಹಿಂಸೆಯನ್ನು ಟಿವಿಯಲ್ಲಿ ಗಮನಿಸುತ್ತಿದ್ದೆ. ಅಲಿರೆಜಾ ಪಶ್ಚಿಮ ಕಾಬುಲ್‌ನಲ್ಲಿರುವ ಒಂದು ಖಾಸಗಿ ಪುರುಷರ ಡಾರ್ಮಿಟರಿಯ ಒಂದು ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ. ಆತನ ಕುಟುಂಬಸ್ಥರೆಲ್ಲರೂ ಹೆರಾತ್‌ನಲ್ಲಿದ್ದರು. ಹಾಗಾಗಿ ಆತ ಇಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ. ಕೇವಲ ಮೂರು ತಿಂಗಳ ಹಿಂದೆಯಷ್ಟೇ ಆತನ ನಿಶ್ಚಿತಾರ್ಥ ನಡೆದಿದ್ದು, ಹೊಸ ಜೀವನವನ್ನು ಆರಂಭಿಸುವ ಸಂತಸದಲ್ಲಿದ್ದ.
ನಾವಿಬ್ಬರೂ ಸಾವಿರಾರು ಮೈಲುಗಳ ದೂರದಲ್ಲಿದ್ದರೂ, ದೂರವಾಣಿ ಸಂಪರ್ಕದ ಮೂಲಕ ಹತ್ತಿರದಲ್ಲಿರುವಂತೆ ಭಾಸವಾಗುತಿತ್ತು. ಕಾಬುಲ್‌ನಲ್ಲಿದ್ದಾಗಲೂ ಸಹ ನಾವಿಬ್ಬರು ಗಂಭೀರವಾದ ವಿಷಯಗಳ ಜೊತೆಗೆ ತಮಾಷೆಯಾಗಿಯೂ ಹರಟೆ ಹೊಡೆಯುತ್ತಿದ್ದವು. ಅಫ್ಘಾನಿಸ್ತಾನದಲ್ಲಿ ಪತ್ರಕರ್ತನ ಕೆಲಸವನ್ನು ನಿರ್ವಹಿಸುವುದು ಬಹಳ ಸವಾಲುಗಳಿಂದ ಕೂಡಿರುತ್ತದೆ. ಆದರೆ ನಾವಿಬ್ಬರೂ ಕಿರುಕುಳಕ್ಕೆ ಒಳಗಾಗಿರುವಂತಹ ಹಜರಾ ಸಮುದಾಯಕ್ಕೆ ಸೇರಿದವರಾಗಿದ್ದು ಕಷ್ಟಗಳನ್ನು ಎದುರಿಸಿದ್ದೆವು. ಬಹಿರಂಗವಾಗಿ ಮಾತನಾಡುವ ನಮ್ಮ ಜೀವನ ಹಾಗೂ ವ್ಯಕ್ತಿತ್ವಗಳು ಮೊದಲಿನಿಂದಲೂ ಬೆದರಿಕೆಯಲ್ಲಿಯೇ ಇದ್ದವು. ಆದರೆ ನಮ್ಮಿಬ್ಬರ ಸ್ನೇಹ ಹಾಗೂ ಪರಸ್ಪರ ಬೆಂಬಲ ಕಷ್ಟದ ಸಮಯವನ್ನು ಎದುರಿಸುವಲ್ಲಿ ನೆರವಾಯಿತು.
ಅಲಿರೆಜಾ ಒಬ್ಬ ಸಮರ್ಪಿತ ಅಫ್ಘಾನ್ ಪತ್ರಕರ್ತನಾಗಿದ್ದ – ನಿಸ್ವಾರ್ಥ, ಪರಿಶ್ರಮ, ಪ್ರತಿಭೆ ಹಾಗೂ ಅಫ್ಘಾನ್‌ನ ಪ್ರಜೆಗಳ, ಅದರಲ್ಲಿಯೂ ವಿಶೇಷವಾಗಿ ಹಜರಾ ಸಮುದಾಯದವರ ಧ್ವನಿಯಾಗಿ ಕೆಲಸ ನಿರ್ವಹಿಸುತ್ತಿದ್ದ. ಇರಾನ್‌ನಲ್ಲಿ ಓರ್ವ ನಿರಾಶ್ರಿತನಾಗಿ ಬೆಳೆದಂತಹ ಆತ ತನ್ನ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿದ್ದ ಮತ್ತು ಓರ್ವ ಅಲ್ಪಸಂಖ್ಯಾತನಾಗಿ ತಾರತಮ್ಯತೆಯನ್ನು ಎದುರಿಸಿದ್ದ. ಆತ ತನ್ನ ಬಹುಪಾಲು ಬಾಲ್ಯವನ್ನು ತನ್ನ ಶಾಲಾ ದಿನಗಳನ್ನು ತೆಹ್ರಾನ್‌ನಲ್ಲಿ ಕಳೆದಿದ್ದ. ೨೦೦೧ರಲ್ಲಿ ಅಮೇರಿಕ ವಶಪಡಿಸಿಕೊಂಡ ನಂತರ ತಾಲಿಬಾನ್ ಉಘ್ರರ ಅಟ್ಟಹಾಸ ನಿಂತಿತ್ತು. ಆಗ ಅಲಿರೆಜಾ ಮತ್ತು ಆತನ ಕುಟುಂಬಸ್ಥರು ಹೊಸ ಜೀವನ ಕಟ್ಟಿಕೊಳ್ಳಲು ಅಫ್ಘಾನಿಸ್ತಾನಕ್ಕೆ ಬಂದು, ಹೆರಾತ್ ನಗರದಲ್ಲಿ ನೆಲೆಸಿದರು. ಅಲಿರೆಜಾ ಕೆಲವು ವರ್ಷಗಳ ನಂತರ, ೨೦೧೦ರಲ್ಲಿ ಕಾಬುಲ್ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಓದಲು ಕಾಬುಲ್‌ಗೆ ತೆರಳಿದ.
ಆತ ಕಳೆದ ೧೦ ವರ್ಷಗಳ ಕಾಲ ರಹಾಪ್ರೆಸ್, ಸದಯೇ ಅಫ್ಘಾನ್ ನ್ಯೂಸ್ ಏಜೆನ್ಸಿ, ಹಾಗೂ ಡೈಲಿ ರಹೆ ಮದನ್ಯತ್ ನ್ಯೂಸ್‌ಪೇಪರ್‌ಗಳು ಒಳಗೊಂಡಂತೆ ಹಲವಾರು ಸ್ಥಳೀಯ ಸುದ್ದಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಅನುಭವಗಳಿಸಿದ್ದ. ಇತ್ತೀಚೆಗೆ ಸರ್ಕಾರ-ಬೆಂಬಲಿತ ಸುದ್ದಿಪತ್ರಿಕೆ ಅಫ್ಘಾನಿಸ್ತಾನಮಾ ದಲ್ಲಿ ತನಿಖಾ ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದ. ಆತ ಬ್ರೇಕಿಂಗ್ ಸುದ್ದಿಗಳ ಜೊತೆಗೆ ಆಳವಾದ ವರದಿಗಾರಿಕೆಯನ್ನು ಮಾಡುತ್ತಿದ್ದ. ಕಾರ್ಯನೀತಿಗಳಿಂದ ಹಿಡಿದು ಆರ್ಥಿಕ ವ್ಯವಸ್ಥೆಯವರೆಗೆ ಅನೇಕ ತನಿಖಾ ವರದಿಗಳನ್ನು ಮಾಡಿದ್ದ.
ನಾವಿಬ್ಬರು ೨೦೧೪ರಲ್ಲಿ, ಅಫ್ಘಾನಿಸ್ತಾನದ ಅಧ್ಯಕ್ಷರ ಚುನಾವಣೆ ನಡೆಯುತ್ತಿದ್ದಾಗ, ವರದಿ ಮಾಡುತ್ತಿದ್ದಾಗ ಪರಸ್ಪರ ಭೇಟಿಯಾದೆವು. ನನಗೆ ಆಗ ಕೇವಲ ೨೩-ವರ್ಷ ವಯಸ್ಸು.
ಅಲಿರೆಜಾ ಓರ್ವ ಅತ್ಯಂತ ಬುದ್ಧಿವಂತ ವರದಿಗಾರ, ಬರಹಗಾರ ಹಾಗೂ ಛಾಯಾಚಿತ್ರಗಾಹಕನೂ ಆಗಿದ್ದ. ಆದರೆ, ಇತರೆ ಅನೇಕ ಅಫ್ಘಾನ್ ಪತ್ರಕರ್ತರಂತೆ, ತನ್ನ ವರದಿಗಳಲ್ಲಿ ತಾಲಿಬಾನಿಗಳನ್ನು “ಉಘ್ರರು” ಎಂದು ಉಲ್ಲೇಖಿಸುವ ಮೂಲಕ ಆತನೂ ಸಹ ವರದಿ ಮಾಡುವಾಗ ಸಾಕಷ್ಟು ಅಪಾಯವನ್ನು ಎದುರಿಸುತ್ತಿದ್ದ. ನಾವು ಅನೇಕ ಬಾರಿ ನಮಗೆ ಬಂದಂತಹ ಬೆದರಿಕೆಗಳ ಕುರಿತು ಪರಸ್ಪರ ಚರ್ಚಿಸುತ್ತಿದ್ದೆವು ಮತ್ತು ಹೇಗೆ ಸುರಕ್ಷಿತವಾಗಿರುವುದು ಎಂಬ ಕುರಿತು ಮಾತನಾಡಿಕೊಳ್ಳುತ್ತಿದ್ದೆವು.
ಅಲಿರೆಜಾ ತನ್ನ ಉತ್ತಮ ಉಪಾಯಗಳು ಹಾಗೂ ತನ್ನ ನಿಲುವುಗಳನ್ನು ವ್ಯಕ್ತಪಡಿಸುವ ವಿಶಿಷ್ಟವಾದ ರೀತಿಯಿಂದ ಸದಾ ನನ್ನನ್ನು ಪ್ರೇರೇಪಿಸುತ್ತಿದ್ದ. ಆತ ಮೊದಲಿನಿಂದಲೂ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಹಾಗೂ ಸಮಾನತೆಯ ಬಗ್ಗೆ ಮಾತನಾಡುತ್ತಾ ಅದನ್ನೇ ಪ್ರತಿಪಾದಿಸುತ್ತಿದ್ದ. ಆತನನ್ನು ಎಲ್ಲರೂ ಗಮನಿಸುವಂತೆ ಆಗುವುದು ಆತನಿಗೆ ಇಷ್ಟವಾಗಿತ್ತು, ನಿಶ್ಯಬ್ಧವಾಗಿರುವುದನ್ನಲ್ಲ. ನಾನು ನೋಡಿರುವಂತಹ ವ್ಯಕ್ತಿಗಳಲ್ಲಿ ಆತ ಅತ್ಯಂತ ನಿರ್ಭಯ ವ್ಯಕ್ತಿಯಾಗಿದ್ದ.
ನಮ್ಮ ಕೊನೆಯ ಸಂಭಾಷಣೆಯ ವೇಳೆ ಆತ ತಾನು ಅನುಭವಿಸುತ್ತಿದ್ದ ಅಪಾರ ಒತ್ತಡ ಹಾಗೂ ಖಿನ್ನತೆಯ ಭಾವನೆಗಳ ಕುರಿತು ಹೇಳಿಕೊಂಡಿದ್ದ; ನನಗೆ ನಿದ್ದೆ ಬರುತ್ತಿಲ್ಲ, ಎನ್ನುತ್ತಿದ್ದ. ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಳ್ಳುವವರೆಗೂ ಅನೇಕ ವರ್ಷಗಳವರೆಗೆ, ನನ್ನ ಅಂತಿಮ ನಿರ್ಗಮನದವರೆಗೆ ನಾನೂ ಸಹ ಅದೇ ರೀತಿ ಒತ್ತಡ, ಮೈಮನಸ್ಸುಗಳನ್ನು ದುರ್ಬಲಗೊಳಿಸುವ ದುಃಖ ಮತ್ತು ನಿದ್ರಾಹೀನತೆ ಸಮಸ್ಯೆಗಳನ್ನು ಎದುರಿಸಿದ್ದೆ. ನಮ್ಮ ದೂರವಾಣಿ ಸಂಭಾಷಣೆಗಳ ವೇಳೆ ಅಲಿರೆಜಾನನ್ನು ಅಫ್ಘಾನಿಸ್ತಾನದಿಂದ ಹೇಗೆ ಹೊರಗೆ ಕರೆದುಕೊಂಡು ಬರುವುದು ಎನ್ನುವ ಕುರಿತು ದೀರ್ಘವಾಗಿ ಚರ್ಚಿಸುತ್ತಿದ್ದೆವು. ಅದಕ್ಕಾಗಿ ಅನೇಕ ಮಾರ್ಗಗಳ ಕುರಿತು ಆಲೋಚಿಸುತ್ತಿದ್ದೆವು.
ಅಲಿರೆಜಾ ಯಾವುದೇ ವಿದೇಶಿ ಸುದ್ದಿ ಸಂಸ್ಥೆಗಳಿಗೆ ಕೆಲಸ ಮಾಡಿರಲಿಲ್ಲ. ಹಾಗಾಗಿ, ಆತನಿಗೆ ವೀಸಾ ಲಭಿಸಲಿಲ್ಲ. ಜೊತೆಗೆ ಆತನ ಹೆಸರನ್ನು ಸ್ಥಳಾಂತರಗೊಳ್ಳುವವರ ಪಟ್ಟಿಯಲ್ಲಿಯೂ ಸೇರಿಸಿರಲಿಲ್ಲ. ಆತನಿಗೆ ಆತ ಒಂಟಿ ಎನ್ನುವುದು ಗೊತಿತ್ತು. ಹಾಗಾಗಿ, ಆತ ತನ್ನ ಅದೃಷ್ಟವನ್ನು ಪರಿಶೀಲಿಸಲು ವಿಮಾನನಿಲ್ದಾಣಕ್ಕೆ ತೆರಳಿದ. ಆತ ಮತ್ತು ಆತನ ತಮ್ಮ ಮೊಜ್ತಬಾ ಯಾವುದೇ ದಾಖಲೆಗಳು ಇಲ್ಲದಿರುವಂತಹ ಜನರು ವಿಮಾನನಿಲ್ದಾಣಕ್ಕೆ ತೆರಳಿರುವುದು ಆತನ ಗಮನಕ್ಕೆ ಬಂದಿತ್ತು. ಮೊಜ್ತಬಾ, ೩೦, ಈ ಮೊದಲು ಒಮ್ಮೆ ಪ್ರಯತ್ನಿಸಿ ವಿಫಲನಾಗಿದ್ದ.
ಆಗಸ್ಟ್ ೨೫ರಂದು ನಾವು ಮುಂಜಾನೆಯವರೆಗೂ ಮಾತನಾಡುತ್ತಿದ್ದೆವು. ನಮ್ಮ ಸಂಭಾಷಣೆ ಮರುದಿನವೂ ಮುಂದುವರೆಯುತ್ತದೆ ಎಂದೇ ನಂಬಿದ್ದೆವು. ಆದರೆ ಅದು ನಮ್ಮ ಕೊನೆಯ ಸಂಭಾಷಣೆಯಾಯಿತು. ಗಡಿಯಾರವನ್ನು ಹಿಂದಕ್ಕೆ ತಿರುಗಿಸಿ ಮತ್ತೊಮ್ಮೆ ಆತನ ಧ್ವನಿಯನ್ನು ಆಲಿಸಬೇಕೆಂದು ಹಂಬಲಿಸುತ್ತಿದ್ದೇನೆ.
ನಮ್ಮ ದೂರವಾಣಿ ಸಂಭಾಷಣೆ ಅಂತ್ಯಗೊಳ್ಳುತ್ತಿದ್ದಂತೆ ನನಗೆ ಆತನೊಂದಿಗೆ ಇದ್ದಿದ್ದರೆ ಚೆನ್ನಾಗಿರುತಿತ್ತು ಎಂದನಿಸಿತು. ಆದರೆ, ನಾಲ್ಕು ತಿಂಗಳ ಹಿಂದೆ ತಾಲಿಬಾನಿಗಳು ಮಿಲಿಟರಿ ಚಟುವಟಿಕೆಗಳನ್ನು ಆರಂಭಿಸಿದಾಗಿನಿಂದಲೂ ನನಗೆ ಅಫ್ಘಾನಿಸ್ತಾನವನ್ನು ತೊರೆಯಬೇಕಾಗಬಹುದು ಎಂದನಿಸುತಿತ್ತು. ಒಂದು ವರ್ಷದ ಮಗುವಿನ ತಂದೆಯಾಗಿ ನನಗೆ ನನ್ನ ಕುಟುಂಬಸ್ಥರನ್ನು ಸುರಕ್ಷಿತಗೊಳಿಸುವುದನ್ನು ಬಿಟ್ಟು ಬೇರೆ ಮಾರ್ಗವಿರಲಿಲ್ಲ.
ಅಮೇರಿಕಾದ ಸೇನೆ ಅಫ್ಘಾನಿಸ್ತಾನವನ್ನು ತೊರೆಯಲು ಆರಂಭಿಸಿದಾಗ ಎಲ್ಲರಿಗೂ ಆಶ್ಚರ್ಯವಾಯಿತು. ಅಶ್ರಫ್ ಘನಿ ಕಾಬುಲ್ ತೊರೆದು ತಾಲಿಬಾನಿಗಳಿಗೆ ಅಧಿಕಾರವನ್ನು ಹಸ್ತಾಂತರಿಸಿದಾಗ ನಾನು ಸಂಪೂರ್ಣವಾಗಿ ಕುಸಿದು ಹೋದೆ. ತಾಲಿಬಾನ್ ಉಘ್ರರು ಒಂದು ವೇಳೆ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಂಡರೆ ನನ್ನ ಜೀವಕ್ಕೆ ಅಪಾಯ ಎಂದು ನನಗೆ ಮೊದಲಿನಿಂದಲೂ ಅರಿವಿತ್ತು.
೨೦೧೫ರಲ್ಲಿ ನಾನು, ಉತ್ತರ ಅಘ್ಘಾನಿಸ್ತಾನದ ಕುಂದುಝ್ ನಗರದಲ್ಲಿ ನಡೆದಂತಹ ಹತ್ಯಾಕಾಂಡದ ಕುರಿತು ವಿಶೇಷ ಪ್ರಸಾರ ಮಾಡಿದ ೧ಟಿವಿ ತಂಡದ ಭಾಗವಾಗಿದ್ದೆ. ಆಗ ತಾಲಿಬಾನಿಗಳು ನಮ್ಮ ವರದಿಗಾರರ ತಂಡಕ್ಕೆ ಬೆದರಿಕೆಯ ಸೂಚನೆ ನೀಡಿದ್ದರು. ಆದರೆ ಅವರ ದೌರ್ಜನ್ಯಗಳ ವಿರುದ್ಧ ನಮ್ಮ ವರದಿಗಾರಿಕೆಯನ್ನು ನಾವು ನಿಲ್ಲಿಸಲಿಲ್ಲ. ಪತ್ರಕರ್ತರಾಗಿ ನಮಗೆ ಅಪಾಯ ಎದುರಾದರೂ ನಿಜವನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಮೈಗೂಡಿದೆ. ನಾನು ಕಳೆದ ಮೂರು ವರ್ಷಗಳಿಂದ ರೇಡಿಯೊ ಫ್ರಾನ್ಸ್ ಇಂಟರ್‌ನ್ಯಾಷನೇಲ್ ಎಂಬ ಹೆಸರಿನ ಫ್ರೆಂಚ್ ಮೀಡಿಯಾ ಸಂಸ್ಥೆಯ ಪರ್ಶಿಯನ್ ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ತಾಲಿಬಾನಿಗಳು ಕಾಬುಲ್ ಅನ್ನು ವಶಪಡಿಸಿಕೊಂಡ ಕೂಡಲೇ ಫ್ರಾನ್ಸ್ಗೆ ತೆರಳಲು ನಮ್ಮ ವೀಸಾಗಳನ್ನು ನೀಡಿದರು. ನಾನು ನನ್ನ ಪತ್ನಿ ಮತ್ತು ಮಗಳ ಜೊತೆ ಕಾಬುಲ್ ತೊರೆದು, ಫ್ರೆಂಚ್‌ನ ಒಂದು ಮಿಲಿಟರಿ ವಿಮಾನದಲ್ಲಿ ಪ್ಯಾರಿಸ್‌ಗೆ ಆಗಸ್ಟ್ ೧೯ರಂದು ತಲುಪಿದೆವು.
ಆಗಿನಿಂದಲೇ ನನ್ನ ಇತರೆ ಸಹೋದ್ಯೋಗಿಗಳಿಂದ ಅಫ್ಘಾನಿಸ್ತಾನದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಸಂದೇಶಗಳು ಬರಲಾರಂಭಿಸಿತು. ನಮ್ಮ ಪೈಕಿ ಕೆಲವರು ಅಫ್ಘಾನ್ ತೊರೆಯಲು ಆರಂಭಿಸುತ್ತಿದ್ದAತೆ ಉಳಿದ ಅನೇಕರು ತಮ್ಮ ಸಾಮಾನು ಸರಂಜಾಮುಗಳನ್ನು ಪ್ಯಾಕ್ ಮಾಡಿಕೊಂಡು ಮುಂದೆ ಏನು ಮಾಡಬೇಕು ಎಂಬುದನ್ನೂ ಯೋಚಿಸದೆ ದೇಶ ತೊರೆಯುವುದು ಹೇಗೆ ಎಂದು ಎದುರುನೋಡಲಾರಂಭಿಸಿದ್ದರು. ಅದೊಂದು ರೀತಿಯ ಚೈನ್ ರಿಯಾಕ್ಷನ್ ತರಹ ಇತ್ತು. ಹೊಸ ಸರ್ಕಾರದ ಅಡಿ ಅಫ್ಘಾನಿಸ್ತಾನ ಹಿಂದಿನಂತೆ ಇರುವುದಿಲ್ಲ ಎಂಬುದು ಎಲ್ಲರಿಗೂ ಚೆನ್ನಾಗಿ ಅರಿವಿತ್ತು.
ನಾನು ಸ್ಫೋಟಗಳ ಕುರಿತ ಸುದ್ದಿ ಮೊದಲು ಕೇಳಿದಾಗ ನನ್ನ ಮೆದುಳು ಬ್ಲಾಂಕ್ ಆಯಿತು, ತುಂಬಾ ಗಾಬರಿಯಾಯಿತು. ಆ ಸ್ಫೋಟಗಳು ಸಂಭವಿಸುವುದಕ್ಕೆ ಮುಂಚೆ ಆ ಸ್ಥಳದಲ್ಲಿ ಸಾವಿರಾರು ಜನರು ನೆರೆದಿದ್ದು ತುಂಬಾ ಗೊಂದಲಮಯ ವಾತಾವರಣ ಇರುವುದು ಅರಿವಾಗಿತ್ತು. ಅನೇಕರ ಬಳಿ ಯಾವುದೇ ರೀತಿಯ ದಾಖಲಾತಿಗಳಿರಲಿಲ್ಲ. ಸಾವಿರಾರು ಜನರು ವಿಮಾನನಿಲ್ದಾಣದ ಉದ್ದಗಲಕ್ಕೂ ತಪ್ಪಿಸಿಕೊಂಡು ಹೋಗಲು ನೆರೆದಿದ್ದರು. ಕೆಲವೇ ಸೆಕೆಂಡುಗಳಲ್ಲಿ ಎಷ್ಟು ದಾರುಣ ನಡೆಯಿತು ಎಂದು ನೆನಪಿಸಿಕೊಂಡರೆ ದುಃಖವಾಗುತ್ತದೆ. ಕಾಬುಲ್‌ನಲ್ಲಿ ನನ್ನ ಇನ್ನು ಅನೇಕ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿದ್ದಾರೆ. ಆದರೆ ಅವರೆಲ್ಲರೂ ಎಲ್ಲಿದ್ದಾರೆ, ಸುರಕ್ಷಿತವಾಗಿದ್ದಾರೋ ಇಲ್ಲವೋ ಒಂದೂ ಗೊತ್ತಿಲ್ಲ. ಆಗಸ್ಟ್ ೨೭ರ ಮಧ್ಯಾಹ್ನದಂದು ನಾನು ಎಂದಿಗೂ ಕೇಳಲು ಇಷ್ಟಪಡದೇ ಇರುವಂತಹ ಕರೆ ಬಂತು. ನಮ್ಮ ಸಾಮಾನ್ಯ ಸ್ನೇಹಿತನೊಬ್ಬ ದೂರವಾಣಿ ಕರೆ ಮಾಡಿ ಅಲಿರೆಜಾ ಮತ್ತು ಮೊಜ್ತಬಾ ಇಬ್ಬರೂ ಹಿಂದಿನ ದಿನವೇ ವಿಮಾನನಿಲ್ದಾಣಕ್ಕೆ ತೆರಳಿದ್ದು, ಸ್ಫೋಟ ಸಂಭವಿಸಿದ ನಂತರ ಅವರೊಂದಿಗೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ ಎಂದು ತಿಳಿಸಿದ. ನನಗೆ ಸಿಡಿಲು ಬಡಿದಂತಾಯಿತು. ಸರಿಯಾಗಿ ಉಸಿರಾಡಲೂ ಸಹ ಆಗಲಿಲ್ಲ. ಇಡೀ ಪ್ರಪಂಚವೇ ಕತ್ತಲಾದಂತೆ ಭಾಸವಾಯಿತು. ಕೂಡಲೇ ಚೇತರಿಸಿಕೊಂಡು ನಮ್ಮಿಬ್ಬರಿಗೂ ತಿಳಿದಿರುವಂತಹ ಓರ್ವ ಪತ್ರಕರ್ತ ಸ್ನೇಹಿತನೊಬ್ಬನಿಗೆ ಕರೆ ಮಾಡಿ, ಕಾಬುಲ್‌ನಲ್ಲಿರುವ ಹತ್ತಿರದ ಆಸ್ಪತ್ರೆಗಳಲ್ಲಿ ಅಲಿರೆಜಾ ಬಗ್ಗೆ ಫೇಸ್‌ಬುಕ್‌ನಲ್ಲಿ ಹುಡುಕುವಂತೆ ಕೋರಿದೆ. ಜೊತೆಗೆ ದೇವರಿಗೆ ಪ್ರಾರ್ಥನೆ ಮಾಡಲಾರಂಭಿಸಿದೆ. ಯಾವುದೇ ಕಾರಣಕ್ಕೂ ಆತನಿಗೆ ಏನೂ ಆಗದೇ ಇರಲಿ, ಸುರಕ್ಷಿತವಾಗಿ, ಜೀವಂತವಾಗಿರುವ ಕುರಿತು ಮಾಹಿತಿ ಲಭಿಸಲು ಎಂದು ಪ್ರಾರ್ಥಿಸಿದೆ.
ಅಲಿರೆಜಾ ಅಗಲಿದೆ ಒಂದು ದಿನ ಹಿಂದೆ (ಆಗಸ್ಟ್ ೨೫, ಬೆಳಿಗ್ಗೆ ೫:೪೮ಕ್ಕೆ), ತನ್ನ ೬೦ ಪುಸ್ತಕಗಳನ್ನು ೫೦ ಅಫ್ಘಾನಿಗಳಿಗೆ ಮಾರಾಟ ಮಾಡಿರುವುದಾಗಿ ನನಗೆ ಸಂದೇಶ ಕಳುಹಿಸಿದ (೧ ಡಾಲರ್‌ಗಿಂತಲೂ ಕಡಿಮೆ ದರ). ನನ್ನ ಸ್ನೇಹಿತ ಆತನನ್ನು ಹೀಗೇಕೆ ಮಾಡಿದೆ ಎಂದು ಪ್ರಶ್ನಿಸಿದಾಗ ಆತ, “ನಾನು ಸ್ಥಳಾಂತರಗೊಳ್ಳುತ್ತಿದ್ದೇನೆ,” ಅದಕ್ಕಾಗಿ ಹೀಗೆ ಮಾಡಿದೆ, ಎಂದು ಉತ್ತರಿಸಿದ. ಆತನ ಸಂಬಂಧಿಯೊಬ್ಬರು ಕೆಲವು ಗಂಟೆಗಳ ಸೂಕ್ಷ್ಮವಾದ ಹುಡುಕಾಟ ನಡೆಸಿದ ನಂತರ ಜಮ್‌ಹುರಿಯಾತ್ ಆಸ್ಪತ್ರೆಯಲ್ಲಿ ನನ್ನ ಸ್ನೇಹಿತನ ಮೃತದೇಹ ಪತ್ತೆಯಾಯಿತಂತೆ. ಆತನನ್ನು ಗುರುತು ಹಿಡಿಯುವುದೇ ಕಷ್ಟವಾಯಿತಂತೆ. ಆದರೆ ಆತನ ಸಂಬಂಧಿ ಆತನನ್ನು ಗುರುತಿಸಿದ್ದಾರೆ. ಜೊತೆಗೆ ಆತನ ಷರ್ಟಿನ ಜೇಬಿನಿಂದ ಆತನ ಗುರುತಿನ ಚೀಟಿಯೂ ಲಭಿಸಿದೆ. ಮೊಜ್ತಬಾ ಈಗಲೂ ನಾಪತ್ತೆಯಾಗಿದ್ದಾನೆ.
ನಾನು ಅಲಿರೆಜಾನ ಮೃತವಾರ್ತೆ ಕೇಳಿದ ನಂತರ ನನಗೆ ಭೂಮಿಯೇ ಕುಸಿದಂತಾಯಿತು. ನನಗೆ ದುಃಖ ಉಮ್ಮಳಿಸಿ ಬಂದು ತಡೆದುಕೊಳ್ಳಲು ಆಗಲೇ ಇಲ್ಲ. ಆತನ ಕೊನೆಯ ಕ್ಷಣಗಳು ಎಷ್ಟು ಭಯಾನಕವಾಗಿದ್ದವು ಎಂದು ಯೋಚಿಸಿದರೇ ನನಗೆ ದೇಹವೆಲ್ಲಾ ಕಂಪಿಸುತ್ತದೆ. ನಮ್ಮಿಬ್ಬರ ಏಳು ವರ್ಷಗಳ ಸ್ನೇಹ ಮತ್ತು ಗಳಿಗೆಗಳು ನನ್ನ ಕಣ್ಣ ಮುಂದೆ ಹಾದು ಹೋದವು.
ಅಲಿರೆಜಾನಿಗೆ ಭಯೋತ್ಪಾದಕರ ದಾಳಿಯ ಬಗ್ಗೆ ಮೊದಲಿನಿಂದಲೂ ಆತಂಕವಿತ್ತು. ‘ನಾನು ಉಘ್ರರ ಕೈಗೆ ಸಿಲುಕಿ ನರಳಿ ಸಾಯುವುದಕ್ಕಿಂತ ಒಮ್ಮೆಗೆ ಬಾಂಬ್ ಸ್ಫೋಟದಲ್ಲಿ ಸತ್ತರೆ ಒಳ್ಳೆಯದು ಎಂದು ಹೇಳಿದ್ದ.’ ಅಲ್ಲಿ ಮೃತಪಟ್ಟ ೧೭೦ಕ್ಕೂ ಹೆಚ್ಚಿನ ಸಂಖ್ಯೆಯ ಜನರಲ್ಲಿ ಆತನೂ ಒಬ್ಬನಾಗಿದ್ದ. ಐಎಸ್‌ಕೆಪಿ ಜವಾಬ್ದಾರಿ ವಹಿಸಿಕೊಂಡಿರುವ ಆ ಮಾರಣಾಂತಿಕ ದಾಳಿಯಲ್ಲಿ ಇನ್ನೂ ಅನೇಕರು ಗಾಯಗೊಂಡಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಈಗಾಗಲೇ ಪ್ರಕ್ಷಬ್ಧವಾಗಿರುವ ದೇಶದಲ್ಲಿ ಇದೊಂದು ದೊಡ್ಡ ದುರಂತ. ಅಲಿರೆಜಾನ ಅಕಾಲಿಕ ಮೃತ್ಯು ಅಫ್ಘಾನ್ ಪತ್ರಿಕೋದ್ಯಮ ಸಮುದಾಯಕ್ಕೆ ಒಂದು ತೀವ್ರ ಆಘಾತಕಾರಿ ಸುದ್ದಿಯಾಗಿದೆ. ಪತ್ರಕರ್ತರಾಗಿ ನಿಜ ಹೇಳುವುದು ನಮ್ಮ ಧರ್ಮ, ಅಫ್ಘಾನ್‌ನ ಪತ್ರಕರ್ತರಾಗಿ ನಾವು ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ಇನ್ನಿತರೆ ತಪ್ಪುಗಳನ್ನು ಜನರಿಗೆ ತಲುಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ. ಅದಕ್ಕಾಗಿ ನಾವು ನಮ್ಮ ಪ್ರಾಣವನ್ನೇ ಬಲಿ ನೀಡಬೇಕಾಗಿದೆ. ಕಳೆದ ಐದು ವರ್ಷಗಳಲ್ಲಿ ಅಫ್ಘಾನ್‌ನ ೨೭ ಸ್ಥಳೀಯ ಪತ್ರಕರ್ತರು ನೇರ ಗುಂಡು ಅಥವಾ ದಾಳಿಗಳಲ್ಲಿ ಬಲಿಯಾಗಿದ್ದಾರೆ.
ದೇಶದಾದ್ಯಂತ ಇರುವ ಪತ್ರಕರ್ತರನ್ನು ಗುರಿಯಾಗಿಸಲಾಗುತ್ತಿದೆ, ಥಳಿಸಲಾಗುತ್ತಿದೆ, ಸಾಯಿಸಲಾಗುತ್ತಿದೆ. ಪತ್ರಕರ್ತರ ಕುಟುಂಬಸ್ಥರನ್ನೂ ಸಹ ಕ್ರೂರವಾಗಿ ಕೊಲ್ಲಲಾಗುತ್ತಿದೆ. ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿರುವ ಭವಿಷ್ಯ ಸಂಪೂರ್ಣ ಕತ್ತಲಿನಲ್ಲಿ ತುಂಬಿದೆ. ಇನ್ನು ಮುಂದೆ ಅಫ್ಘಾನ್‌ನ ಪತ್ರಕರ್ತರಿಗೆ ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯವಿರುವುದಿಲ್ಲ. ಆದರೆ ನಮ್ಮ ಜನರು ನಮ್ಮ ಕೆಲಸವನ್ನು ಬೆಂಬಲಿಸುವುದನ್ನು ಮುಂದುವರೆಸುತ್ತಾರೆ.
ಕಳೆದ ಕೆಲವು ದಿನಗಳಿಂದ ಟ್ವಿಟ್ಟರ್ ಹಾಗೂ ಫೇಸ್‌ಬುಕ್ ಒಳಗೊಂಡಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಫ್ಘಾನಿಸ್ತಾನದ ಪತ್ರಿಕೋದ್ಯಮಕ್ಕೆ ಅಲಿರೆಜಾನ ಕೊಡುಗೆಗಳ ಕುರಿತು ಅಸಂಖ್ಯಾತ ಪೋಸ್ಟ್ಗಳು ಹರಿದಾಡುತ್ತಿವೆ. ಆತ ತನ್ನ ನಮ್ರತೆ, ಪ್ರಾಮಾಣೀಕತೆ ಹಾಗೂ ಸಮರ್ಪಿತ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದ. ಆತನನ್ನು ಆತನ ಸ್ನೇಹಿತರು, ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳು ತುಂಬಾ ಪ್ರೀತಿಸುತ್ತಿದ್ದರು. ನನಗೆ ವೈಯಕ್ತಿಕವಾಗಿ ತುಂಬಲಾರದ ನಷ್ಟವುಂಟಾಗಿದೆ. ಆತ ಸದಾ ನನ್ನ ಅತ್ಯುತ್ತಮ ಗೆಳೆಯನಾಗಿ ನೆನಪಿನಲ್ಲಿ ಉಳಿದಿರುತ್ತಾನೆ.
ಸುದ್ದಿ ಮೂಲ: ಅಲ್ ಜಝೀರಾ
ಕನ್ನಡಕ್ಕೆ : ಕಿಶೋರ್ ಕುಮಾರ್.
key words : i-lost-my-best-friend-we-were-both-journalists-fleeing-kabul