ಡೆಹ್ರಾಡೂನ್:ಮೇ-19:(www.justkannada.in) ನಾನು ದೇವರಲ್ಲಿ ನನಗಾಗಿ ಏನನ್ನೂ ಪ್ರಾರ್ಥಿಸಿಲ್ಲ. ದೇಶಕ್ಕಾಗಿ, ದೇಶದ ಜನರ ಒಳಿತಿಗಾಗಿ ಪ್ರಾರ್ಥನೆ ಮಾಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರಖಾಂಡದ ಕೇದಾರಾನಥ ಹಾಗೂ ಬದರಿನಾಥ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ನಿನ್ನೆ ಕೇದಾರನಾಥ್ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿನ ಅಭಿವೃದ್ಧಿಕಾರ್ಯಗಳ ಪರಿಶೀನೆ ನಡೆಸಿದ್ದರು. ಬಳಿಕ ಅಲ್ಲಿಂದ ಮಳೆಯಲ್ಲೇ ನಡೆದು ಸುಮಾರು ಎರಡು ಕಿ.ಮೀ ದೂರವಿರುವ ಗುಹಾಲಯಕ್ಕೆ ತೆರಳಿ ಗವಿಯೊಳಗೆ ಧ್ಯಾನಸ್ಥರಾಗಿ ಕುಳಿತಿದ್ದರು. ಶನಿವಾರ ಮಧ್ಯಾಹ್ನ 2.45 ರಿಂದ ಧ್ಯಾನಸ್ಥರಾಗಿರುವ ಮೋದಿ ಇಂದು ಬೆಳಗ್ಗೆ 10.45ಕ್ಕೆ ಮುಗಿಸಿದ್ದಾರೆ. ಬರೋಬ್ಬರಿ 20 ಗಂಟೆ ಕಾಲ ಸುದೀರ್ಘ ಧ್ಯಾನ ಮಾಡಿದ ಪ್ರಧಾನಿ ಮೋದಿ ಇಂದು ಧ್ಯಾನದಿಂದ ಹೊರಬಂದಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿ, ಪ್ರಾರ್ಥನೆ ಹಾಗೂ ಧ್ಯಾನ ಮಾಡುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಈ ಸಂದರ್ಭದಲ್ಲಿ ನಾನು ದೇವರಲ್ಲಿ ಏನನ್ನೂ ಬೇಡಿಕೊಂಡಿಲ್ಲ. ಚುನಾವಣೆ ಗೆಲುವಿನ ಬಗ್ಗೆಯೂ ಕೇಳಿಲ್ಲ ಎಂದರು.
ಇಲ್ಲಿನ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಟ್ಟು ಕೆಲಸ ಪ್ರಾರಂಭಿಸಲಾಗಿದೆ. ಕೇದಾರನಾಥ್ದಲ್ಲಿ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ವಿಡಿಯೋ ಮೂಲಕವೇ ಮೇಲ್ವಿಚಾರಣೆ ಮಾಡಲಾಗುವುದು. ನಮ್ಮ ದೇಶದ ಜನರು ಸಿಂಗಾಪುರ, ಮತ್ತಿತರ ವಿದೇಶೀ ಸ್ಥಳಗಳಿಗೆ ಹೋಗುವ ಬದಲು ನಮ್ಮದೇ ದೇಶದ ಕೇದಾರನಾಥ್ದಂಥ ಪವಿತ್ರ, ಸುಂದರ ಕ್ಷೇತ್ರಗಳಿಗೆ ಆಗಮಿಸಬೇಕು ಎಂದು ಕರೆ ನೀಡಿದರು.