ಕೊಚ್ಚಿ:ಮೇ-3:(www.justkannada.in) ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವದ ಬಗ್ಗೆ ತೀವ್ರ ಚರ್ಚೆಗಳು, ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಕೇರಳ ಮೂಲದ ನಿವೃತ್ತ ನರ್ಸ್ ಒಬ್ಬರು ರಾಹುಲ್ ದೆಹಲಿಯ ಆಸ್ಪತ್ರೆಯೊಂದರಲ್ಲಿ ಹುಟ್ಟಿದ ಸಂದರ್ಭ ಹಾಗೂ ನವಜಾತಶಿಸುವನ್ನು ತಾವು ಎತ್ತಿಕೊಂಡಿದ್ದ ಕುರಿತು ತಮ್ಮ ಹಳೆ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
ನಿವೃತ್ತಿ ಬಳಿಕ ವಯನಾಡ್ ನಲ್ಲಿ ವಾಸವಾಗಿರುವ ರಾಜಮ್ಮ ವವತಿಲ್, 1970, ಜೂನ್ 19 ರಂದು ದಿಲ್ಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ರಾಹುಲ್ ಗಾಂಧಿ ಹುಟ್ಟಿದಾಗ ತಾವು ಅಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದುದಾಗಿ ಹೇಳಿದ್ದಾರೆ. ಅಲ್ಲದೇ ರಾಹುಲ್ ಅವರ ಪೌರತ್ವವನ್ನು ಯಾರೂ ಪ್ರಶ್ನಿಸಬಾರದು. ರಾಹುಲ್ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಜನಿಸಿದ್ದು, ತಾನು ಅಲ್ಲಿ ನರ್ಸ್ ಆಗಿದ್ದೆ. ನವಜಾತ ಶಿಶುವನ್ನು ನಾನು ಎತ್ತಿಕೊಂಡಿದ್ದೆ ಎಂದು ತಿಳಿಸಿದ್ದಾರೆ.
ಮಗು ಜನಿಸಿದಾಗ ಅದನ್ನು ನೋಡಿದ ಕೆಲವೇ ಮಂದಿಗಳಲ್ಲಿ ನಾನು ಒಬ್ಬಳಾಗಿದ್ದೆ ಮತ್ತು ಮಗುವನ್ನು ಎತ್ತಿಕೊಂಡ ಮೊದಲಿಗಳಲ್ಲಿ ನಾನೇ ಅದೃಷ್ಟವಂತೆ. ರಾಹುಲ್ ಜನ್ಮಕ್ಕೆ ನಾನು ಸಾಕ್ಷಿಯಾಗಿದ್ದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮೊಮ್ಮಗನನ್ನು ನೋಡಲು ನಾವು ರೋಮಾಂಚನಗೊಂಡಿದ್ದೆವು ಎಂದು ತಿಳಿಸಿದ್ದಾರೆ.
ಆ ಮುದ್ದಾದ ಮಗು 49 ವರ್ಷಗಳ ನಂತರ ಇದೀಗ ಕಾಂಗ್ರೆಸ್ ಅಧ್ಯಕ್ಷನಾಗಿ ಮತ್ತು ವಯನಾಡಿನಿಂದ ಸ್ಪರ್ಧಿಸುತ್ತಿದೆ ಎಂಬುದು ಸಂತಸದ ವಿಚಾರ. ಸೋನಿಯಾ ಗಾಂಧಿ ಅವರನ್ನು ಡೆಲಿವರಿಗಾಗಿ ಕರೆದುಕೊಂಡು ಬಂದಾಗ ಹೆರಿಗೆ ಕೊಠಡಿಯ ಹೊರಗೆ ರಾಹುಲ್ ಗಾಂಧಿ ತಂದೆ ರಾಜೀವ್ ಗಾಂಧಿ ಮತ್ತು ಚಿಕ್ಕಪ್ಪ ಸಂಜಯ್ ಗಾಂಧಿ ನಿಂತು ಕಾಯುತ್ತಿದ್ದರು ಎಂದು ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ರಾಹುಲ್ ಪೌರತ್ವವನ್ನು ಪ್ರಶ್ನಿಸಿ ದೂರು ನೀಡಿರುವುದು ನನಗೆ ದುಃಖ ತರಿಸಿದೆ. ರಾಹುಲ್ ಗಾಂಧಿ ಅವರು ಮೂಲತಃ ಭಾರತೀಯ ಪೌರತ್ವವನ್ನು ಹೊಂದಿದ್ದಾರೆ ಮತ್ತು ಸುಬ್ರಮಣಿಯನ್ ಅವರು ಸಲ್ಲಿಸಿರುವ ದೂರು ಆಧಾರರಹಿತ. ರಾಹುಲ್ ಗಾಂಧಿಯ ಜನ್ಮದ ಕುರಿತಾದ ಎಲ್ಲ ದಾಖಲೆಗಳು ಆಸ್ಪತ್ರೆಯಲ್ಲಿವೆ ಎಂದು ವವತಿಲ್ ಹೇಳಿದ್ದಾರೆ.
ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ನರ್ಸ್ ತರಬೇತಿಯನ್ನು ಮುಗಿಸಿದ್ದ ವವಾತಿಲ್ ಬಳಿಕ ಭಾರತೀಯ ಸೇನೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಿದ್ದಾರೆ. ಸ್ವಯಂ ನಿವೃತ್ತಿ ಪಡೆದ ನಂತರ 1987ರಲ್ಲಿ ಕೇರಳಕ್ಕೆ ಬಂದ ಅವರು ಸದ್ಯ ಸುಲ್ತಾನ್ ಭಾತರಿ ಬಳಿಯ ಕಲ್ಲೂರ್‌ನಲ್ಲಿ ವಾಸಿಸುತ್ತಿದ್ದಾರೆ.