ಮೈಸೂರು,ಜೂನ್,16,2022(www.justkannada.in): ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಫಲಿತಾಂಶ ಇಂದು ಹೊರ ಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಗೆಲುವು ಸಾಧಿಸಿದ್ದಾರೆ. ಈ ಮಧ್ಯೆ ದಕ್ಷಿಣ ಪದವೀಧರ ಚುನಾವಣೆಯ ಮತ ಎಣಿಕೆಯನ್ನ ಐಎಎಸ್ ದಂಪತಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಮೈಸೂರು ಮಂಡ್ಯ, ಚಾಮರಾಜನಗರ, ಹಾಸನ ಸೇರಲಿದೆ. ಜೂನ್ 13 ರಂದು ವಿಧಾನ ಪರಿಷತ್ ನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದು ನಿನ್ನೆ ಮತ ಏಣಿಕೆ ಕಾರ್ಯ ಆರಂಭವಾಗಿತ್ತು. ಮೂರು ಕ್ಷೇತ್ರಗಳಲ್ಲೂ ನಿನ್ನೆಯೇ ಫಲಿತಾಂಶ ಹೊರಬಿದ್ದಿತ್ತು. ಆದರೆ ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ಇಂದು ಮುಕ್ತಾಯವಾಗಿದ್ದು, ಅಂತಿಮ ಫಲಿತಾಂಶ ಪ್ರಕಟವಾಗಿದೆ.
ಮತ ಎಣಿಕೆ ಕಾರ್ಯದ ಸಂಪೂರ್ಣ ಜವಾಬ್ದಾರಿ ನಿಭಾಯಿಸಿದ ಮೈಸೂರು ಡಿಸಿ ಬಗಾತಿ ಗೌತಮ್ ಮತ್ತು ಮಂಡ್ಯ ಡಿಸಿ ಅಶ್ವಥಿ ಸತತ 30 ಗಂಟೆಗಳ ಬ್ರೇಕ್ ಇಲ್ಲದೆ ಕರ್ತವ್ಯ ನಿರ್ವಹಿಸಿದರು. ಡಾ. ಬಗಾದಿ ಗೌತಮ್, ಅಶ್ವಥಿ ದಂಪತಿ ಅಕ್ಕ ಪಕ್ಕದ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದು, ಮತ ಎಣಿಕೆ ಪ್ರಾರಂಭದಿಂದಲೂ ಅಂತಿಮ ಫಲಿತಾಂಶ ನೀಡುವವರೆಗೂ ಉತ್ತಮ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಈ ಐಎಎಸ್ ದಂಪತಿಗೆ ಚುನಾವಣಾಧಿಕಾರಿ ಜಿಸಿ ಪ್ರಕಾಶ್ ಹಾಗೂ ಚಾಮರಾಜನಗರ ಡಿಸಿ ಚಾರುಲತಾ , ಹಾಸನ ಜಿಲ್ಲಾಧಿಕಾರಿ ಗಿರೀಶ್ ಸಾಥ್ ನೀಡಿದರು. ಮತ ಎಣಿಕೆಯಲ್ಲಿ ಯಾವುದೇ ಗೊಂದಲ ನಿರ್ಮಾಣವಾಗದಂತೆ ಈ ಅಧಿಕಾರಿಗಳು ಸಮಗ್ರವಾಗಿ ಕಾರ್ಯ ನಿರ್ವಹಣೆ ಮಾಡಿದರು. ಮುಖ್ಯ ಚುನಾವಣಾಧಿಕಾರಿ ಪ್ರಕಾಶ್ ಜೊತೆ ಕಾರ್ಯ ನಿರ್ವಹಿಸಿ ಶೀಘ್ರ ಫಲಿತಾಂಶ ನೀಡುವಲ್ಲಿ ಮೂವರು ಡಿಸಿಗಳು ಶ್ರಮಿಸಿದರು.
Key words: IAS -couple – successfully -vote counting- Southern-Graduate-Election