ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾರ್ಯಾಚರಣೆ ಆರಂಭಿಸಲಿರುವ ಐಸಿಸಿಸಿ.  ಏನಿದು ಗೊತ್ತೆ..?

ಬೆಂಗಳೂರು, ಆಗಸ್ಟ್ 25, 2022(www.justkannada.in): ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಬಿಎಸ್‌ಸಿಎಲ್)ನ ಇಂಟಿಗ್ರೇಟೆಡ್ ಕಮ್ಯಾಂಡ್ ಅಂಡ್ ಕಂಟ್ರೋಲ್ ಸೆಂಟರ್ (ಐಸಿಸಿಸಿ) ಸೆಪ್ಟೆಂಬರ್ ಮೊದಲ ವಾರದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ತೆರೆದುಕೊಳ್ಳಲಿದೆ. ಈ ಕೇಂದ್ರ 14 ವಿವಿಧ ಸರ್ಕಾರಿ ಇಲಾಖೆಗಳ ಸೇವೆಗಳನ್ನು ಒಂದೇ ಕಡೆ ಕೂಡಿಸಿದೆ.

ಮಾರ್ಚ್ ತಿಂಗಳಲ್ಲಿ ಬಿಎಸ್‌ ಸಿಎಲ್‌ ನ ಅಧಿಕಾರಿಗಳು ಇನ್ನು ೧೦೦ ದಿನಗಳ ಒಳಗೆ ಐಸಿಸಿಸಿ ಸೇವೆಗಳನ್ನು ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದರು. ಆದರೆ ಬಹಳ ವಿಳಂಬವಾದ ನಂತರವಾದರೂ ಬಿಎಸ್‌ ಸಿಎಲ್ ಈ ವ್ಯವಸ್ಥೆ ಸೆಪ್ಟೆಂಬರ್ ತಿಂಗಳಲ್ಲಿ ಉದ್ಘಾಟನೆಯಾಗಲು ಸಿದ್ಧವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಐಸಿಸಿಸಿ ಬಹುಪಾಲು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಬಗೆಹರಿಸಲಿದೆ. ಪ್ರಸ್ತುತ ಬೆಂಗಳೂರು ಮಹಾನಗರದಲ್ಲಿ ನಾಗರಿಕರು ತಾವು ದೈನಂದಿನ ಜೀವನದಲ್ಲಿ ಎದುರಿಸುವ ಹಲವಾರು ನಾಗರಿಕ ಸೇವೆಗಳಲ್ಲಿನ ಲೋಪಗಳಿಗೆ ಸಂಬಂಧಪಟ್ಟಂತೆ ಯಾರಿಗೆ ದೂರು ಸಲ್ಲಿಸಬೇಕು ಎಂದು ತಿಳಿಯದೆ ಪರದಾಡುತ್ತಿರುತ್ತಾರೆ. ಪ್ರತಿಯೊಂದು ಇಲಾಖೆಗೂ ಪ್ರತ್ಯೇಕ ನಿಯಂತ್ರಣ ಕೊಠಡಿ ಹಾಗೂ ಸಂಪರ್ಕ ಸಂಖ್ಯೆ ಇದ್ದರೆ ಎಲ್ಲವನ್ನೂ ನೆನಪಿಟ್ಟುಕೊಳ್ಳುವುದು, ಸಂಪರ್ಕಿಸುವುದು, ದೂರು ನೀಡುವುದು ಪ್ರಯಾಸದ ಕೆಲಸವೇ ಅಲ್ಲವೇ? ಹಾಗಾಗಿ ಇಂತಹ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಐಸಿಸಿಸಿಯನ್ನು ಸ್ಥಾಪಿಸಲಾಗಿದೆ. ಈ ಕೇಂದ್ರ ೧೪ ವಿವಿಧ ಸರ್ಕಾರಿ ಇಲಾಖೆಗಳನ್ನು ಒಂದೇ ಕಡೆ ಒಟ್ಟುಗೂಡಿಸಿ, ನಾಗರಿಕರ ದೂರುಗಳನ್ನು ತತ್‌ಕ್ಷಣ ಆಲಿಸಿ, ಅತೀ ಶೀಘ್ರದಲ್ಲಿ ಪರಿಹಾರಗಳನ್ನು ಒದಗಿಸಲಿದೆ.

ಐಸಿಸಿಸಿ ಎಂದರೇನು?

ಈ ಇಂಟಿಗ್ರೇಟೆಡ್ ಕಂಟ್ರೋಲ್ ಅಂಡ್ ಕಮ್ಯಾಂಡ್ ಸೆಂಟರ್, ವಿವಿಧ ಇಲಾಖೆಗಳು ಹಾಗೂ ವಿವಿಧ ಅಪ್ಲಿಕೇಷನ್‌ ಗಳಿಂದ ಮಾಹಿತಿಯನ್ನು ಸಂಯೋಜಿಸಿ, ಸಂಗ್ರಹಿಸಿ, ಬೆನ್ನೆಲುಬಾಗಿರುವ ಐಸಿಸಿ (ಮಾಹಿತಿ, ಹಾಗೂ ಸಂವಹನಾ ತಂತ್ರಜ್ಞಾನ) ಬಳಸಿಕೊಂಡು ನಗರದ ಉತ್ತಮ ಯೋಜನೆಗಾಗಿ ವಿಶ್ಲೇಷಿಸಿ ನಿರ್ಧಾರ ಬೆಂಬಲ ಒದಗಿಸುವ ವ್ಯವಸ್ಥೆಯಾಗಿದೆ. ಈ ತಂತ್ರಜ್ಞಾನ ಬೌದ್ಧಿಕ ಇಂಜಿನ್‌ ಗಳನ್ನು ಒಳಗೊಂಡಿದ್ದು, ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ಸಂಸ್ಕರಿಸಿ, ಸಿಂಕ್ರೊನೈಸ್‌ ಗೊಳಿಸಿ ಒಳನೋಟಗಳನ್ನು ನೀಡುತ್ತದೆ. ಈ ಒಳನೋಟಗಳು ನಗರದಾದ್ಯಂತ ನಡೆಯುವ ಘಟನೆಗಳ ನಿರ್ವಹಣೆಯಲ್ಲಿ ನೆರವಾಗುತ್ತದೆ ಹಾಗೂ ನಗರ ಅಭಿವೃದ್ಧಿಯ ಯೋಜನೆಯನ್ನು ಉತ್ತಮ ರೀತಿಯಲ್ಲಿ ರೂಪಿಸಲು ನೆರವಾಗುತ್ತದೆ.

“ಐಸಿಸಿಸಿ ವ್ಯವಸ್ಥೆಯನ್ನು ೧೪ ಸರ್ಕಾರಿ ಇಲಾಖೆಗಳ ಸೇವಾ ಹಂಚಿಕೆಗಾಗಿ ಏಕೀಕರಣಗೊಳಿಸಲಾಗಿದ್ದು, ಇದರಿಂದ ನಾಗರಿಕರ ದೈನಂದಿನ ಜೀವನದ ಮೇಲೆ ಪರಿಣಾಮ ಉಂಟಾಗಲಿದೆ. ಈ ಕೇಂದ್ರವನ್ನು ಸೆಪ್ಟೆಂಬರ್ ತಿಂಗಳಲ್ಲಿ ಉದ್ಘಾಟಿಸಲಾಗುತ್ತದೆ. ಬಿಬಿಎಂಪಿ ಅನೆಕ್ಸ್ ಕಟ್ಟಡದ ಆರನೇ ಮಹಡಿಯನ್ನು ಇದಕ್ಕಾಗಿ ಸಮರ್ಪಿಸಲಾಗಿದೆ. ನಿರ್ಮಾಣ ಕಾಮಗಾರಿಗಳು ಬಹುಪಾಲು ಪೂರ್ಣಗೊಂಡಿದೆ. ಸುಮಾರು ೩೦ ಆಪರೇಟರ್‌ ಗಳು ಈ ಕಮ್ಯಾಂಡ್ ಕೇಂದ್ರವನ್ನು ನಿರ್ವಹಿಸಲಿದ್ದಾರೆ. ಈ ಕೇಂದ್ರ, ವಿವಿಧ ನಾಗರಿಕ ಸೇವೆಗಳ ಹಂಚಿಕೆಯನ್ನು ಹೆಚ್ಚು ಸಮರ್ಥಗೊಳಿಸುವ ಮೂಲಕ ಹಾಗೂ ತುರ್ತು ಪರಿಸ್ಥಿತಿಗಳಿಗೆ ತತ್‌ಕ್ಷಣದಲ್ಲೇ ಪ್ರತಿಕ್ರಿಯೆ ನೀಡುವಲ್ಲಿ ನೆರವಾಗುವ ಮೂಲಕ, ನಗರದ ಜೀವಿಸುವ ಸ್ಥಿತಿಗತಿಗಳನ್ನು ಸುಧಾರಿಸುವಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಪಾತ್ರ ನಿರ್ವಹಿಸಲಿದೆ,” ಎಂದು ಬಿಎಸ್‌ ಸಿಎಲ್‌ ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ಅವರು ವಿವರಿಸಿದ್ದಾರೆ.

ಈ ಯೋಜನೆಯ ಸ್ಥಾಪನೆಗೆ ರೂ.೯೬ ಕೋಟಿ ವೆಚ್ಚವಾಗಿದೆ. ಐಸಿಸಿಸಿ ವ್ಯಾಪ್ತಿಯಡಿಗೆ ಬರುವ ಇಲಾಖೆಗಳ ಪೈಕಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯು ಎಸ್‌ಎಸ್‌ಬಿ), ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ), ಕರ್ನಾಟಕ ಅರಣ್ಯ ಇಲಾಖೆ (ಕೆಎಫ್‌ ಡಿ), ಬೆಂಗಳೂರು ಸಂಚಾರಿ ಪೋಲಿಸ್ (ಬಿಟಿಪಿ), ಬೆಂಗಳೂರು ನಗರ ಪೋಲಿಸ್ (ಬಿಸಿಪಿ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಹೆಚ್‌ಎಫ್‌ ಡಬ್ಲ್ಯು), ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)ಗಳು ಸೇರಿವೆ.

ಐಟಿ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಮಂಜುನಾಥ್ ದಲೇರ್ ಅವರು ಈ ಸಂಬಂಧ ಮಾತನಾಡಿ, ಈ ಹಿಂದೆ ನಾಗರಿಕರು ದೂರುಗಳನ್ನು ದಾಖಲಿಸಲು ನಿರ್ಧಿಷ್ಟ ಇಲಾಖೆಗೆ ಹೋಗಬೇಕಾಗಿತ್ತು, ಅಥವಾ ಆ ಇಲಾಖೆಗೆ ಸಂಬಂಧಪಟ್ಟ ಸಂಪರ್ಕವನ್ನು ಹುಡುಕಾಡಬೇಕಿತ್ತು. ಆದರೆ ಈಗ ಐಸಿಸಿಸಿ ನಾಗರಿಕರಿಗೆ ಇಲಾಖೆಗಳನ್ನು ಸುಲಭವಾಗಿ ಪತ್ತೆ ಹಚ್ಚಲು ನೆರವಾಗಲಿದೆ ಹಾಗೂ ಸಂಬಂಧಪಟ್ಟ ಇಲಾಖೆಯ ಪೋರ್ಟಲ್‌ ನಲ್ಲಿ ದೂರನ್ನು ವರದಿ ಮಾಡುವಲ್ಲಿ ನೆರವಾಗಲಿದೆ.

“ಗ್ರಾಹಕರ ದೂರಿನ ಸಂದೇಶವನ್ನು ಬಿಎಸ್‌ ಸಿಎಲ್ ಮೂಲಕ ಸಂಬಂಧಪಟ್ಟ ವಾರ್ಡ್ ಅನ್ನು ಅವಲಂಬಿಸಿ, ನಿರ್ಧಿಷ್ಟ ಇಲಾಖೆಯ ಇಂಜಿನಿಯರುಗಳಿಗೆ ತಲುಪಿಸಲಾಗುವುದು. ಒಂದು ವೇಳೆ ಆಗಲೂ ಸಮಸ್ಯೆ ಬಗೆಹರಿಯದಿದ್ದರೆ, ಬಿಎಸ್‌ ಸಿಎಲ್ ಈ ದೂರನ್ನು ಸಂಬಂಧಪಟ್ಟ ಇಲಾಖೆಯ ಆಯುಕ್ತರು ಅಥವಾ ವ್ಯವಸ್ಥಾಪಕ ನಿರ್ದೇಶಕರಂತಹ ಉನ್ನತ ಮಟ್ಟದ ಅಧಿಕಾರಿಗಳಿಗೆ ತಲುಪಿಸುತ್ತದೆ. ಅವರು ತತ್‌ಕ್ಷಣವೇ ಆ ದೂರನ್ನು ಪರಿಗಣಿಸಿ ಸೂಕ್ತ ಪರಿಹಾರವನ್ನು ಸೂಚಿಸುತ್ತಾರೆ. ನಾವು ಪ್ರಸ್ತುತ ಇಲಾಖೆಗಳಿಂದ ಒಂದು ದೂರನ್ನು ಬಗೆಹರಿಸಲು ಎಷ್ಟು ಸಮಯ ಬೇಕಾಗುತ್ತದೆ ಎಂದು ನಿರ್ಧಿಷ್ಟವಾಗಿ ತಿಳಿದುಕೊಳ್ಳಲು ಎಸ್‌ ಓಪಿಗಳಿಗಾಗಿ ಕಾಯುತ್ತಿದ್ದೇವೆ. ಒಂದು ವೇಳೆ ನಿಗಧಿತ ಸಮಯವನ್ನು ಮೀರಿದರೆ, ಆ ಸಮಸ್ಯೆ/ದೂರನ್ನು ಹಿರಿಯ ಅಧಿಕಾರಿಗಳಿಗೆ ತಲುಪಿಸಲಾಗುವುದು,” ಎಂದು ವಿವರಿಸಿದರು.

ಐಸಿಸಿಸಿ ಉದ್ದೇಶಗಳು

೧. ಬೆಂಗಳೂರಿನ ನಾಗರಿಕರಿಗೆ ಸೇವೆಗಳನ್ನು ಒದಗಿಸುತ್ತಿರುವ ಭಾಗೀದಾರರ ನಡುವಿನ ಸಂಯೋಜನೆ ವೃದ್ಧಿ

೨. ನಾಗರಿಕ ಒಳಗೊಳ್ಳುವಿಕೆಗೆ ಸಾಮಾನ್ಯ ವೇದಿಕೆ ಕಲ್ಪಿಸುವುದು; ಸಮಗ್ರ ಕುಂದುಕೊರತೆ ಬಗೆಹರಿಸುವ/ ನಿರ್ವಹಣೆ ವ್ಯವಸ್ಥೆ

೩. ನಗರದ ತುರ್ತು ಪರಿಸ್ಥಿತಿಗಳ ಸುಧಾರಿತ ದೃಶ್ಯೀಕರಣ.

೪. ಪರಿಣಾಮಕಾರಿ ತುರ್ತು ಪ್ರತಿಕ್ರಿಯೆ

೫. ನಾಗರಿಕರು, ಆಸ್ತಿಗಳ ಭದ್ರತೆ, ಸುರಕ್ಷತೆ ವೃದ್ಧಿ

೬. ನಗರದ ಚಲನೆ ಸುಧಾರಣೆ

೭. ಸಮೃದ್ಧ ದತ್ತಾಂಶ, ಮಾಹಿತಿಯನ್ನು ಲಭ್ಯಗೊಳಿಸುವ ಮೂಲಕ ಬೌದ್ಧಿಕ ನಿರ್ಧಾರಗಳಿಗೆ ಬೆಂಬಲ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: ICCC – begin – September-first week