ಬೆಂಗಳೂರು,ಜುಲೈ,12,2022(www.justkannada.in): ಈದ್ಗಾ ಮೈದಾನ ವಿವಾದ ಹಿನ್ನೆಲೆ, ಚಾಮರಾಜಪೇಟೆ ನಾಗರಿಕರ ಒಕ್ಕೂಟವು ಮೈದಾನವನ್ನು ಆಟದ ಮೈದಾನವನ್ನಾಗಿ ಉಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ಚಾಮರಾಜಪೇಟೆ ಬಂದ್ ಗೆ ಕರೆ ನೀಡಿದೆ.
ಇಂದು ಬೆಳಿಗ್ಗೆ 6ರಿಂದ ಸಂಜೆ 5 ಗಂಟೆವರೆಗೆ ಬಂದ್ ಕರೆ ನೀಡಿದ್ದು, ಬಹುತೇಕ ಅಂಗಡಿ ಮುಂಗಟ್ಟುಗಳು ಕ್ಲೋಸ್ ಆಗಿವೆ.ಈದ್ಗಾ ಮೈದಾನ ವಿವಾದ ಸಂಬಂಧ ಮುಸ್ಲಿಮರು ಇದು ಈದ್ಗಾ ಮೈದಾನವೆಂದರೆ, ಹಿಂದೂಗಳು ಅದು ಆಟದ ಮೈದಾನ ಎಂದು ಹೇಳುತ್ತಿದ್ದಾರೆ.
ಚಾಮರಾಜಪೇಟೆ ಬಂದ್ಗೆ ಕರೆ ಕೊಟ್ಟ ಹಿನ್ನೆಲೆ ಇಂದು ಬೆಳಗ್ಗೆಯಿಂದಲೇ ಜನ ಸಂಚಾರ ವಿರಳವಾಗಿದ್ದು, ಅಗತ್ಯ ಸಾಮಾಗ್ರಿಗಳ ಖರೀದಿಗಷ್ಟೇ ಜನರು ಹೊರಬರುತ್ತಿದ್ದಾರೆ. ಅಲ್ಲದೆ ಬೆರಳೆಣಿಕೆಯಷ್ಟು ವಾಹನಗಳು ಮಾತ್ರ ರಸ್ತೆಗಿಳಿದಿವೆ. ಈ ಹಿಂದೆ ಮುಸ್ಲಿಂ ವ್ಯಾಪಾರಿಗಳು ಹೇಳಿದಂತೆ ಬಂದ್ ಗೆ ಬೆಂಬಲವನ್ನು ಸೂಚಿಸಿಲ್ಲ, ಮುಸ್ಲಿಂ ಅಂಗಡಿಗಳು ತೆರೆದಿವೆ. ಮೈದಾನ ಉಳಿಸಿ ಸಾರ್ವಜನಿಕರು ಮೈದಾನದ ಸುತ್ತ ರ್ಯಾಲಿ ನಡೆಸುತ್ತಿದ್ದಾರೆ.
ಬಂದ್ ವೇಳೆ ಆನಂದಪುರ ಏರಿಯಾದಲ್ಲಿ ಗಲಾಟೆ ನಡೆದಿದೆ. ಮುಸ್ಲಿಂ ಅಂಗಡಿಗಳನ್ನ ಮುಚ್ಚುವಂತೆ ಒಕ್ಕೂಟದ ಮಂದಿ ಒತ್ತಾಯಿಸಿದ್ದು ಈ ವೇಳೆ ಮಾತಿನ ಚಕಮಕಿ ನಡೆದಿದೆ. ಅಂಗಡಿಗಳನ್ನ ಬಲವಂತವಾಗಿ ಮುಚ್ಚಿಸಬೇಡಿ ಎಂದು ಪೊಲೀಸರು ಸೂಚನೆ ನೀಡಿದ್ದು, ಬಳಿಕ ಅಂಗಡಿಗಳನ್ನ ಕ್ಲೋಸ್ ಮಾಡಲಾಗಿದೆ.
ಈದ್ಗಾ ಮೈದಾನಕ್ಕಾಗಿ ಚಾಮರಾಜಪೇಟೆಯಲ್ಲಿ ಶಾಂತಿಯುತ ಬಂದ್ ನಡೆಯುತ್ತಿದ್ದು, ಮೈದಾನದ ಸುತ್ತಮುತ್ತ ಇರುವ ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆದಿಲ್ಲ. ಈ ನಡುವೆ ಹೋಟೆಲ್ ಗಳು ಸಂಪೂರ್ಣವಾಗಿ ಮುಚ್ಚಲಾಗಿದೆ.
Key words: Idga Maidana- Controversy-Chamarajpet- Bandh