ತಪ್ಪಿದರೆ ಲೆಕ್ಕಾಚಾರ ಸರ್ಕಾರಕ್ಕೆ ಸಂಚಕಾರ

ಬೆಂಗಳೂರು:ಮೇ-31: ಸಚಿವರು, ಶಾಸಕರು, ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದಲ್ಲಿನ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ಕಾಂಗ್ರೆಸ್, ಇದೀಗ ಸಂಪುಟ ಪುನಾರಚನೆ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಸಂಪುಟ ಪುನಾರಚನೆ ಮಾಡಿದರೆ ಯಾರನ್ನು ಕೈಬಿಡಬೇಕು ಮತ್ತು ಯಾರನ್ನು ಸೇರಿಸಿಕೊಳ್ಳಬೇಕೆಂಬುದನ್ನು ಹೈಕಮಾಂಡ್ ನಿರ್ಧಾರಕ್ಕೆ ಬಿಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದು, ಹೈಕಮಾಂಡ್ ಮುಂದೆ ರಾಜ್ಯ ಸರ್ಕಾರದ ಭವಿಷ್ಯ ನಿಂತಿದೆ.

ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ತಂಡ ಕಳೆದ 3 ದಿನಗಳಲ್ಲಿ ಹತ್ತಾರು ಸಭೆ ನಡೆಸಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆ ವಿಚಾರ ವಿನಿಮಯ ಮಾಡಿಕೊಳ್ಳಲಾಗಿದೆ. 20ಕ್ಕೂ ಅಧಿಕ ಕೈ ಶಾಸಕರನ್ನು ಬಿಜೆಪಿಗೆ ಮನವೊಲಿಸುವ ಪ್ರಯತ್ನ ಮಾಡಲಾಗಿದೆ. ಸಚಿವರೊಂದಿಗೆ ಸಭೆ ನಡೆಸಿ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವಂತೆ ಮುನ್ನೆಚ್ಚರಿಕೆ ನೀಡಿದೆ. ಇನ್ನೊಂದು ಮುಖ್ಯ ಸಂಗತಿ ಎಂದರೆ ಮೈತ್ರಿ ಸರ್ಕಾರಕ್ಕೆ ಮುಜುಗರ ಉಂಟಾಗುವುದನ್ನು ತಡೆಯಲು ಪಕ್ಷದ ಹಿರಿಯ ನಾಯಕರಿಗೆ ಸರ್ಕಾರದ ಅನಿವಾರ್ಯತೆ ಬಗ್ಗೆ ತಿಳಿಸಿಕೊಡಲಾಯಿತು. ಈ ಸಭೆಗೆ ಅಪೇಕ್ಷಿತರನೇಕರು ಕೈಕೊಟ್ಟಿದ್ದು ಪರಿಸ್ಥಿತಿ ಪೂರ್ಣ ನೆಟ್ಟಗಾಗುವಂತೆ ಕಾಣಿಸುತ್ತಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳುತ್ತಿತ್ತು.

ಯಾವಾಗ ಪುನಾರಚನೆ?

ಜೂನ್ ಮೊದಲ ವಾರದಲ್ಲೇ ಸಂಪುಟ ವಿಸ್ತರಣೆ ಆಗಬಹುದೆಂಬ ಊಹಾಪೋಹ ಹರಿದಾಡಿತ್ತು. ಆದರೆ, ಈ ಬಗ್ಗೆ ರಾಜ್ಯದ ಕೈ ನಾಯಕರಲ್ಲಿ ಸ್ಪಷ್ಟತೆ ಇಲ್ಲ. ಈ ಬೆಳವಣಿಗೆ ಬಗ್ಗೆ ದೆಹಲಿಯಲ್ಲಿ ಚರ್ಚೆ ನಡೆದು, ಸಂಪುಟದಿಂದ ಕೈಬಿಡುವ ನಾಯಕರಿಗೆ ಮನವರಿಕೆ ಮಾಡಿಕೊಡಬೇಕು ಮತ್ತು ಆಕಾಂಕ್ಷಿಗಳಲ್ಲಿ ‘ಅರ್ಹರನ್ನು’ ಹುಡುಕಬೇಕಾಗುತ್ತದೆ.

ರಾಹುಲ್ ಮುಂದೆ ಸಿಎಂ ಪೀಠಿಕೆ

ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ದೆಹಲಿಗೆ ತೆರಳಿದ್ದ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದರು. ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೇ ಪಕ್ಷದ ಜವಾಬ್ದಾರಿಯಿಂದ ವಿಮುಖರಾಗದಂತೆ ಇದೇ ವೇಳೆ ಒತ್ತಾಯಿಸಿದರು. ಇದರೊಟ್ಟಿಗೆ ಕರ್ನಾಟಕದಲ್ಲಿ ಮೈತ್ರಿ ಸರ್ಕಾರವನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಆಗಬೇಕಾದ ತೀರ್ವನಗಳ ಬಗ್ಗೆ ಸೂಚ್ಯವಾಗಿ ತಿಳಿಸಿದರೆಂದು ತಿಳಿದುಬಂದಿದೆ. ಕೆ.ಸಿ.ವೇಣುಗೋಪಾಲ್ ಅವರು ದೆಹಲಿಗೆ ಆಗಮಿಸಿದ ಕೂಡಲೇ ಚರ್ಚೆ ನಡೆಸಿ, ಎಲ್ಲ ಗೊಂದಲ ಪರಿಹರಿಸೋಣ ಎಂದು ರಾಹುಲ್ ಭರವಸೆ ನೀಡಿದರೆನ್ನಲಾಗಿದೆ. ರಾಹುಲ್ ಭೇಟಿ ವೇಳೆ ಸಚಿವರಾದ ಸಾ.ರಾ.ಮಹೇಶ್, ಬಂಡೆಪ್ಪ ಖಾಶೆಂಪುರ ಸಿಎಂ ಜತೆಗಿದ್ದರು.

ಯಾರು ಇನ್? ಯಾರು ಔಟ್?

ಸರ್ಕಾರ ಉಳಿಸಿಕೊಳ್ಳಬೇಕೆಂದರೆ ಅಸಮಾಧಾನಿತರ ಪೈಕಿ ಕೆಲವರಿಗಾದರೂ ಅವಕಾಶ ಕೊಡಲೇಬೇಕೆಂಬುದು ಎರಡೂ ಪಕ್ಷದ ನಾಯಕರಿಗೆ ಸ್ಪಷ್ಟವಾಗಿದೆ. ಕಾಂಗ್ರೆಸ್ ಪಾಲಿಗೆ ಒಂದು ಸ್ಥಾನ ತುಂಬಿಕೊಳ್ಳಲು ಅವಕಾಶವಿದ್ದು, ಕನಿಷ್ಠ 3-4 ಮಂದಿ ಸಚಿವರು ಸ್ಥಾನಬಿಟ್ಟುಕೊಡಲೇಬೇಕಾಗುತ್ತದೆ. ಯಾರನ್ನು ಕೈಬಿಡಲಾಗುತ್ತದೆ, ಯಾರಿಗೆ ಅವಕಾಶ ಸಿಗಲಿದೆ ಎಂಬ ಬಿರುಸಿನ ಚರ್ಚೆ ಕಾಂಗ್ರೆಸ್​ನಲ್ಲಿ ಶುರುವಾಗಿದೆ.

ಹಿಟ್​ ಲಿಸ್ಟ್

ಎನ್.ಎಚ್.ಶಿವಶಂಕರ ರೆಡ್ಡಿ, ಪುಟ್ಟರಂಗ ಶೆಟ್ಟಿ, ಪಿ.ಟಿ.ಪರಮೇಶ್ವರ ನಾಯ್್ಕ ಶಿವಾನಂದ ಪಾಟೀಲ್, ರಾಜಶೇಖರ್ ಪಾಟೀಲ್, ರಹೀಂಖಾನ್, ಆರ್.ಬಿ.ತಿಮ್ಮಾಪುರ್, ವೆಂಕಟರಮಣಪ್ಪ, ತುಕಾರಾಂ ಪೈಕಿ ಯಾರನ್ನು ಸಂಪುಟದಿಂದ ಕೈ ಬಿಡಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸಬೇಕಿದೆ.

ಚುನಾವಣೆ ಸೋಲಿನ ಪರಾಮರ್ಶೆ

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದಿಂದ ಕುಗ್ಗಿಹೋಗಿರುವ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಹಿರಿಯ ಮುಖಂಡರ ಅಭಿಪ್ರಾಯ ಕಲೆಹಾಕಲಾಗಿದೆ. ಗುರುವಾರ ಖಾಸಗಿ ಹೋಟೆಲ್​ನಲ್ಲಿ ನಡೆದ ಸಭೆಯಲ್ಲಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಡಿಸಿಎಂ ಡಾ. ಜಿ. ಪರಮೇಶ್ವರ ಮತ್ತಿತರರು ಪಾಲ್ಗೊಂಡು ಹಿರಿಯ ಮುಖಂಡರ ಮಾತುಗಳನ್ನು ಆಲಿಸಿದರು. ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ಮೈತ್ರಿ ವೈಫಲ್ಯವೋ, ಸಂಘಟನೆ ಲೋಪವೋ ಎನ್ನುವುದನ್ನು ಅರಿಯುವ ಸಲುವಾಗಿ ಮಾಹಿತಿ ಪಡೆದುಕೊಂಡರು. ಎಸ್.ಆರ್. ಪಾಟೀಲ್, ಬಸವರಾಜ ರಾಯರೆಡ್ಡಿ, ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್, ಟಿ.ಬಿ. ಜಯಚಂದ್ರ, ಮೋಟಮ್ಮ, ಅಮರೇಗೌಡ ಬಯ್ಯಾಪೂರ, ಶರಣಬಸಪ್ಪ ದರ್ಶನಾಪುರ, ಕಾಗೋಡು ತಿಮ್ಮಪ್ಪ, ಧ್ರುವ ನಾರಾಯಣ, ಬಿ.ಎಲ್. ಶಂಕರ್, ಡಾ. ಎಚ್.ಸಿ. ಮಹದೇವಪ್ಪ ಸೇರಿ 30ಕ್ಕೂ ಹೆಚ್ಚು ಮುಖಂಡರು ಭಾಗವಹಿಸಿದ್ದರು.

ಅಡ್ಡಿ ನೂರೆಂಟು

ಜಾತಿ, ಧರ್ಮ, ಪ್ರಾಂತ, ಜಿಲ್ಲಾ ಪ್ರಾತಿನಿಧ್ಯವನ್ನು ಗಮನಿಸಿದರೆ ಹಾಲಿ ಸಚಿವ ಸಂಪುಟದಲ್ಲಿರುವ ಸದಸ್ಯರಿಂದ ರಾಜೀನಾಮೆ ಪಡೆಯುವುದು ಪಕ್ಷಕ್ಕೆ ಅಷ್ಟು ಸುಲಭದ ಕೆಲಸವಲ್ಲ. ಪಕ್ಷ ನಿಷ್ಠರನ್ನು ಮನವೊಲಿಸಿದರೆ ಪ್ರಾತಿನಿಧ್ಯಗಳು ತಪ್ಪಿಹೋಗುತ್ತದೆ.

ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ ಸಂಪುಟದ ಗಂಭೀರತೆಗೆ ಅನಿವಾರ್ಯ.
ಸರ್ಕಾರ ರಚನೆಗೊಂಡ ಬಳಿಕ ಸಂಪುಟಕ್ಕೆ ಸೇರಿಸಿಕೊಂಡಿಲ್ಲ ಎಂದು ಸಿಟ್ಟಿಗೆದ್ದಿದ್ದ ಎಂ.ಬಿ.ಪಾಟೀಲ್ ಬಳಿಕ ಒತ್ತಡ ತಂದು ಸಚಿವ ಸ್ಥಾನ ಪಡೆದುಕೊಂಡವರು.
ಪಕ್ಷಕ್ಕೆ ಕೆ.ಜೆ.ಜಾರ್ಜ್ ಕೊಡುಗೆ ದೊಡ್ಡದು, ಅವರೇ ರಾಜೀನಾಮೆ ಕೊಡುತ್ತೇನೆಂದರೂ ಪಕ್ಷ ಒಪ್ಪಿಕೊಳ್ಳುವುದು ಅನುಮಾನ.
ಸರ್ಕಾರ ಉಳಿಸಿಕೊಳ್ಳಲು ತಾವು ರಾಜೀನಾಮೆಗೆ ಸಿದ್ಧ ಎಂದಿದ್ದ ಕೃಷ್ಣಬೈರೇಗೌಡ ಅದೇ ಮನಸ್ಥಿತಿಯಲ್ಲಿ ಈಗಿಲ್ಲ.
.ಟಿ.ಖಾದರ್ ದಕ್ಷಿಣ ಕನ್ನಡ ಪ್ರತಿನಿಧಿಸುತ್ತಿರುವ ಏಕೈಕ ಶಾಸಕ. ಅವರಿಂದ ರಾಜೀನಾಮೆ ಪಡೆದರೆ ಪಕ್ಷದ ಹಿಡಿತ ಇನ್ನಷ್ಟು ತಪ್ಪಲಿದೆ.
ವಿಧಾನ ಪರಿಷತ್ ಪ್ರತಿನಿಧಿಯಾಗಿ ಜಯಮಾಲಾ ಏಕೈಕ ಮಹಿಳಾ ಸಚಿವೆಯಾಗಿದ್ದಾರೆ. ಒಂದು ವೇಳೆ ಮಹಿಳೆಯೊಬ್ಬರಿಗೆ ಅಥವಾ ಪರಿಷತ್​ನ ಸದಸ್ಯರಿಗೆ ಅವಕಾಶ ಕೊಡಬಹುದಷ್ಟೆ.
ರಮೇಶ್ ಜಾರಕಿಹೊಳಿ ಬದಲಿಗೆ ಸತೀಶ್ ಅವರಿಗೆ ಅವಕಾಶ ನೀಡಲಾಗಿದೆ. ಸತೀಶ್ ಎರಡನೇ ಸುತ್ತಿನಲ್ಲಿ ಸಚಿವರಾದವರು. ಬೆಳಗಾವಿಗೆ ಸತೀಶ್ ಅನಿವಾರ್ಯ.
ಎಂ.ಟಿ.ಬಿ.ನಾಗರಾಜ್ ಈ ಹಿಂದೆ ಬಿಜೆಪಿ ಸಂಪರ್ಕಕ್ಕೆ ಹೋಗಿ ಬಂದವರೆಂಬ ಕಾರಣಕ್ಕೆ ಆದ್ಯತೆ ಮೇಲೆ ಸಚಿವ ಸ್ಥಾನ ನೀಡಲಾಗಿತ್ತು. ಅವರನ್ನು ಈಗಲೂ ಉಳಿಸಿಕೊಳ್ಳುವುದು ಅನಿವಾರ್ಯ.
ಪ್ರಿಯಾಂಕ್ ಖರ್ಗೆ ದಲಿತ ಸಮುದಾಯದ ಪ್ರತಿನಿಧಿಯಾಗಿ, ಜಮೀರ್ ಮುಸ್ಲಿಂ ಸಮುದಾಯದ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದು, ಇವರನ್ನು ಬದಲಿಸುವ ಸಾಹಸ ಮಾಡದು.
ಸಚಿವರಿಗೆ ಟಾಸ್ಕ್
ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಪಕ್ಷದ ಸಚಿವರೊಂದಿಗೆ ಸಭೆ ನಡೆಸಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಸರ್ಕಾರ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜವಾಬ್ದಾರಿಗಳನ್ನು ನೀಡಿದ್ದಾರೆ.

ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಸರ್ಕಾರಿ ವಸತಿ ಗೃಹದಲ್ಲಿ ಗುರುವಾರ ಬೆಳಗ್ಗೆ ಸಚಿವರಿಗೆ ಉಪಾಹಾರ ಕೂಟ ಏರ್ಪಡಿಸಿದ್ದರು. ಈ ವೇಳೆ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡು ಸರ್ಕಾರವನ್ನು ಉಳಿಸಿಕೊಳ್ಳುವ ಕುರಿತು ಮಾತನಾಡಿದ್ದಾರೆ.

ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಕೆಲಸಗಳನ್ನು ಆದ್ಯತೆ ಮೇಲೆ ಮಾಡುಕೊಡಬೇಕು, ಅವರು ಬಿಜೆಪಿಗೆ ಸಂಪರ್ಕಕ್ಕೆ ಹೋಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಲಾಗಿದೆ. ಜತೆಗೆ ಸರ್ಕಾರ ಉಳಿಸಿಕೊಳ್ಳಲು ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುವಂತೆ ನಿರ್ದೇಶನ ನೀಡಲಾಗಿದೆ. ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಮ್ಮಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರಬಹುದು. ಯಾರೂ ಪಕ್ಷ ಬಿಡಲ್ಲ. ಸರ್ಕಾರಕ್ಕೆ ಆತಂಕ ಇಲ್ಲ. ಸಚಿವರು ಯಾರೂ ತಬ್ಬಿಬ್ಬಾಗಿಲ್ಲ ಎಂದರು. ಲೋಕಸಭೆ ಫಲಿತಾಂಶ ಈ ಮೈತ್ರಿ ಸರ್ಕಾರಕ್ಕೆ ಜನಾದೇಶ ಕೊಟ್ಟಿದ್ದಲ್ಲ. ನರೇಂದ್ರ ಮೋದಿ ಉಪ ಚುನಾವಣೆಗಳಲ್ಲಿ ಸೋತಾಗ ರಾಜಿನಾಮೆ ಕೊಟ್ಟದ್ದರೇ, ಜನ ರಾಷ್ಟ್ರದ ವಿಷಯ ನೋಡಿ ತೀರ್ಮಾನ ಮಾಡಿ ಮೋದಿಗೆ ಮತ ಕೊಟ್ಟಿದ್ದಾರೆ ಎಂದು ಹೇಳಿದರು. ಸರ್ಕಾರ ಅಸ್ತಿರಗೊಳಿಸಲು ಯಡಿಯೂರಪ್ಪ ಆರಂಭದಿಂದಲೂ ಪ್ರಯತ್ನಿಸುತ್ತಿದ್ದಾರೆ. ಆಮಿಷ ಒಡ್ಡಿ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಒಂದು ವರ್ಷದಿಂದ ಅಸಾಂವಿಧಾನಿಕವಾಗಿ ನಡೆದುಕೊಳ್ಳುತ್ತಿದ್ದಾರೆ. ಆದರೆ, ಶಾಸಕರು ಒಟ್ಟಾಗಿ ಇದ್ದಾರೆ ಯಾರೂ ಪಕ್ಷ ಬಿಡಲ್ಲ ಎಂದರು.

ಐದು ವರ್ಷ ಮೈತ್ರಿ ಸರ್ಕಾರ ಇರಬೇಕೆಂದು ಜನ ಆದೇಶ ಕೊಟ್ಟಿದ್ದಾರೆ. ಬಿಜೆಪಿಯವರು ನಮ್ಮ ಒಳ್ಳೆ ಕೆಲಸಗಳನ್ನು ಜನರ ಮನಸ್ಸಿನಿಂದ ಅಳಿಸಲು ಪ್ರಯತ್ನಿಸಿದ್ದಾರೆ ಎಂದ ಅವರು,

ಜನರ ಅಪೇಕ್ಷೆಗೆ ತಕ್ಕಂತೆ ಸರ್ಕಾರ ಕೊಡಲು ತೀರ್ಮಾನ ಮಾಡಿದ್ದೇವೆ. 2023ರಲ್ಲಿ ಚುನಾವಣೆ ಬರುತ್ತದೆ, ನಾವೇ ಗೆಲ್ಲುತ್ತೇವೆ ಎಂದು ಹೇಳಿದರು.

ಸರ್ಕಾರ ಇವತ್ತು ಬೀಳತ್ತೆ, ನಾಳೆ ಬೀಳತ್ತೆ ಎಂದು ಬಿಜೆಪಿ ನಾಯಕರು ತಪ್ಪು ಮಾಹಿತಿ ನೀಡುತ್ತಿದ್ದಾರೆ, ಇದನ್ನು ಖಂಡಿಸುವೆ. ಲೋಕಸಮರದಲ್ಲಿ 177 ಕ್ಷೇತ್ರಗಳಲ್ಲಿ ಲೀಡ್ ಬಂದಿದ್ದೇವೆ, ರಾಜೀನಾಮೆ ಕೊಡಿ ಎಂದರೆ ಹೇಗೆ?

| ಸಿದ್ದರಾಮಯ್ಯ, ಮಾಜಿ ಸಿಎಂ
ಕೃಪೆ:ವಿಜಯವಾಣಿ

ತಪ್ಪಿದರೆ ಲೆಕ್ಕಾಚಾರ ಸರ್ಕಾರಕ್ಕೆ ಸಂಚಕಾರ
if-calculation-become-wrong-state-government-will-fall