ಮೈಸೂರು, ಏಪ್ರಿಲ್ 22, 2020 (www.justkannada.in):
ಮೈಸೂರು: ರಿಂಗ್ ರೋಡ್ ನಲ್ಲಿ ಕಸ ಹಾಕುತ್ತಿರುವ ಸಮಸ್ಯೆ ಬಗ್ಗೆ ಸಚಿವರ ಗಮನಕ್ಕೆ ಬಂದಾಗ, ಅಂಥ ವಾಹನಗಳನ್ನು ಸೀಜ್ ಮಾಡಿ, ಮಾಲೀಕ ಹಾಗೂ ಚಾಲಕನನ್ನು ಬಂಧಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿಯ ಡಿ.ದೇವರಾಜ ಅರಸ್ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಕ್ಕೆ ಸಂಬಂಧಪಟ್ಟಂತೆ ನಡೆದ ಕಾರ್ಯಗಳ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವರು ಮಾತನಾಡಿದರು.
ಫಾಗಿಂಗ್ ಸೇರಿದಂತೆ ಸೋಂಕು ನಿವಾರಕ ಔಷಧಗಳನ್ನು ಕೇವಲ ಮುಖ್ಯ ರಸ್ತೆಗಳಲ್ಲಿ ಸಿಂಪಡಿಸಿದರೆ ಸಾಲದು. ಎಲ್ಲ ಗಲ್ಲಿಗಳಿಗೂ ಸಿಂಪಡಿಸಬೇಕು. ನೀವು ಎಲ್ಲೆಲ್ಲಿ ಸಿಂಪಡಿಸುತ್ತೀರಿ ಎಂಬ ಪಟ್ಟಿಯನ್ನು ಶಾಸಕರಿಗೂ ಕೊಡಿ. ಅವರೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಿ ಎಂದು ಸಚಿವರು ಸೂಚಿಸಿದರು.
ಹಾಪ್ ಕಾಮ್ಸ್ ನಲ್ಲಿ ಬಾಳೆಹಣ್ಣು ಬೆಳೆಗೆ ಇಂಡೆಂಟ್ ಸಿಗುತ್ತಿಲ್ಲ ಎಂಬ ದೂರುಗಳು ನನಗೆ ಬರುತ್ತಿದ್ದು, ಎಪಿಎಂಸಿಗಳಲ್ಲಿ ಎಲ್ಲರಿಗೂ ಮಾರಾಟಕ್ಕೆ ಅನುವು ಆಗಬೇಕೆಂದು ಸಚಿವರು ಸೂಚಿಸಿದರು.
ಎಂಜಿ ರಸ್ತೆಯಲ್ಲಿರುವ ಎಕ್ಸಿಬಿಶನ್ ಆವರಣದ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮುಗಿಯುವವರೆಗೂ ಬಂದ್ ಮಾಡುವುದಾಗಿ ಫಲಕ ಹಾಕಬೇಕು ಎಂದು ಈ ಸಂದರ್ಭದಲ್ಲಿ ಸೂಚಿಸಲಾಯಿತು.
ಇಂದಿರಾ ಕ್ಯಾಂಟೀನ್ ದುರ್ಬಳಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಉಚಿತವಾಗಿ ಕೊಡುವ ಸ್ಕೀಂ ಅನ್ನು ಸರ್ಕಾರ ವಾಪಸ್ ಪಡೆದು ಪುನಃ ದರ ನಿಗದಿಪಡಿಸಲಾಯಿತು. ಹೀಗಾಗಿ ಕೂಪನ್ ಗೂ ಮತ್ತು ನೀಡುತ್ತಿರುವ ಆಹಾರಕ್ಕೂ ಪರಿಶೀಲನೆಯಾಗಲಿ ಎಂದು ಸೂಚಿಸಲಾಯಿತು.
ಈಗ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಅರ್ಧ ಲೀಟರ್ ಹಾಲನ್ನು ಸ್ಲಂಗಳಲ್ಲಿರುವ ಅತಿ ಹೆಚ್ಚು ಜನರಿಗೆ ಕೊಡಬೇಕು. ಹೀಗಾಗಿ ಸಿಗದೇ ಇರುವ ಬಡವರಿಗೆ ಹೆಚ್ಚುವರಿ ಹಾಲನ್ನು ನೀಡಿ ಎಂದು ಸಚಿವರು ಸೂಚಿಸಿದರು.
ಹಾಲನ್ನು ಪರ್ಯಾಯ ದಿನಗಳಲ್ಲಿ ಯಾವ ಯಾವ ಪ್ರದೇಶಗಳಲ್ಲಿ ಕೊಡಬೇಕು ಎಂಬ ಬಗ್ಗೆ ಆಯಾ ಶಾಸಕರ ಜೊತೆ ಚರ್ಚೆ ಮಾಡಿ ಎಲ್ಲರಿಗೂ ಹಾಲು ಕೊಡುವಂತೆ ಸಚಿವರು ಸೂಚಿಸಿದರು.
ಕೆಲವು ಮದುವೆ ಸಮಾರಂಭಗಳಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಲಾಕ್ ಡೌನ್ ಮುಗಿದ ಬಳಿಕ ತುಂಬಾ ಕಡಿಮೆ ಜನಕ್ಕೆ ಅನುಮತಿ ಕೊಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ. ದೇವೇಗೌಡ, ನಾಗೇಂದ್ರ ಇತರ ಅಧಿಕಾರಿಗಳು ಇದ್ದರು.