ಮೈಸೂರು,ಸೆಪ್ಟಂಬರ್,27,2024 (www.justkannada.in): ಮೈಸೂರು ರೈಲ್ವೆ ನಿಲ್ದಾಣದಲ್ಲಿ ಕನ್ನಡ ಕಡೆಗಣನೆ ಮಾಡಲಾಗಿದೆ ಎಂದು ಆರೋಪಿಸಿ ಕನ್ನಡ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ಕಾರ್ಯಕರ್ತರಾದ ಸುದರ್ಶನ್, ಅರವಿಂದ ಶರ್ಮ, ಸಿದ್ದಪ್ಪ, ನೀಲಕಂಠ , ಆರ್ ಗೋವಿಂದರಾಜು ಅವರು ಕೈಯಲ್ಲಿ ‘ನನ್ನ ಪ್ರೀತಿಯ ಮೈಸೂರು ಎಂಬ ಫಲಕವನ್ನು ಹಿಡಿದು ಧರಣಿ ನಡೆಸಿದರು.
ಭಾರತೀಯ ರೈಲ್ವೆ ಬಹುಪಾಲು ಅಚ್ಚುಕಟ್ಟಾಗಿ ತನ್ನ ಭಾಷಾ ನೀತಿಯಂತೆ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ಕೊಟ್ಟು ತ್ರಿಭಾಷಾ ಸೂತ್ರವನ್ನು ಪಾಲಿಸುತ್ತಿದೆ. ಅದಕ್ಕಾಗಿ ನಮ್ಮ ಅಭಿನಂದನೆಗಳು. ಆದರೆ ಮೈಸೂರು ನಗರದ ರೈಲು ನಿಲ್ದಾಣದಲ್ಲಿ ಕೆಲವು ಕಡೆ ಕನ್ನಡವನ್ನು ಕಡೆಗಣಿಸಿರುವುದು ವಿಷಾದನೀಯ. ಉದಾಹರಣೆಗೆ ನಿಲ್ದಾಣದ ಮುಂಭಾಗದಲ್ಲಿ ‘ಐ ಲವ್ ಮೈಸೂರು’ ಎಂಬ ಸೆಲ್ಫಿ ತಾಣವನ್ನು ಇಂಗ್ಲಿಷ್ ನಲ್ಲಿ ಮಾತ್ರ ನಿರ್ಮಿಸಲಾಗಿದೆ. ವಾಸ್ತವವಾಗಿ ರೈಲ್ವೆ ಇಲಾಖೆಯ ಭಾಷಾ ನೀತಿಯಂತೆ ಮೊದಲು ‘ನನ್ನ ಪ್ರೀತಿಯ ಮೈಸೂರು’ ಎಂದಿದ್ದು ಅದರ ಕೆಳಗೆ ಇಂಗ್ಲಿಷ್ ಇರಬೇಕಾಗಿತ್ತು. ಆದ್ದರಿಂದ ಅದನ್ನು ಕೂಡಲೇ ಸರಿಪಡಿಸಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು.
ರೈಲ್ವೆ ಕಚೇರಿಯ ಮುಂಭಾಗದಲ್ಲಿ ಮೇಲೆ ‘ಸೌತ್ ಈಸ್ಟ್ ರನ್ ರೈಲ್ವೆ”ಎಂದು ಮಾತ್ರ ಇದೆ. ಇದು ರೈಲ್ವೆ ಇಲಾಖೆಯ ಭಾಷಾ ನೀತಿಗೆ ವಿರುದ್ಧವಾಗಿದೆ. ಇದನ್ನು ಕೂಡಲೇ ಬದಲಿಸಬೇಕು. ಅದೇ ರೀತಿ ಇನ್ನು ಕೆಲವು ಫಲಕಗಳಲ್ಲಿ, ವಾಹನ ನಿಲ್ದಾಣ ಮತ್ತು ಇತರ ಕಡೆ, ಇಂಗ್ಲೀಷ್ ಮಾತ್ರವಿದೆ ಇಲ್ಲವೇ ಮೊದಲ ಸ್ಥಾನದಲ್ಲಿದೆ. ರೈಲ್ವೆ ಮ್ಯೂಸಿಯಂನಲ್ಲಿ ಕನ್ನಡವನ್ನು ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಬಳಸಲಾಗಿದೆ. ಆದ್ದರಿಂದ ಅವುಗಳನ್ನು ರೈಲ್ವೆ ಇಲಾಖೆಯ ಭಾಷಾ ನೀತಿಯಂತೆ ಮೊದಲು ಕನ್ನಡಕ್ಕೆ ಸ್ಥಾನ ಕೊಟ್ಟು ಪರಿವರ್ತಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
Key words: Ignoring, Kannada, Mysore Railway Station, Protest