ನವದೆಹಲಿ:ಜುಲೈ-26:(www.justkannada.in) ಪ್ರತಿಷ್ಠಿತ ಯೋಜನೆಗಳನ್ನು ಪಡೆದುಕೊಳ್ಳುವಲ್ಲಿ ಕರ್ನಾಟಕ ಮತ್ತು ತೆಲಂಗಾಣ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಈಗ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ರಾಯಚೂರಿನಿಂದ ತೆಲಂಗಾಣಕ್ಕೆ ಸ್ಥಳಾಂತಗೊಳ್ಳಲಿದೆ.
ಐಐಐಟಿ ಈ ವರ್ಷದಿಂದ ರಾಯಚೂರಿನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಬೇಕಿತ್ತು. ಆದರೆ ಅಗತ್ಯವಾದ ಜಾಗ ಲಭ್ಯವಿಲ್ಲದ ಕಾರಣ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್ಆರ್ಡಿ) ಈ ವರ್ಷದಿಂದಲೇ ಕಾಲೇಜನ್ನು ಹೈದರಾಬಾದ್ ಐಐಟಿ ಕ್ಯಾಂಪಸ್ನಿಂದ (ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿರುವ) ಪ್ರಾರಂಭಿಸಲು ನಿರ್ಧರಿಸಿದೆ.
ಆದರೆ ಕರ್ನಾಟಕ ಸರ್ಕಾರ ಇದೊಂದು “ತಾತ್ಕಾಲಿಕ ವರ್ಗಾವಣೆ” ಎಂದು ಹೇಳಿದ್ದು, ಶೀಘ್ರದಲ್ಲಿಯೇ ಪ್ರತಿಷ್ಠಿತ ಕಾಲೇಜನ್ನು ರಾಯಚೂರಿಗೆ ಸ್ಥಳಾಂತರಿಸಲಾಗುವುದು ಎಂಬ ಭರವಸೆಯಲ್ಲಿದೆ.
ಪ್ರೊ.ಡಿ.ಎಂ.ನಂಜುಂಡಪ್ಪ ಸಮಿತಿಯ ವರದಿ ಪ್ರಕಾರ ಪ್ರಾದೇಶಿಕ ಅಸಮತೋಲನ ನಿವಾರಣೆ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಪ್ರಮುಖ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಶಿಫಾರಸು ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ರಾಯಚೂರಿನಲ್ಲಿ ಕರ್ನಾಟಕದ ಐಐಟಿಯನ್ನು ಸ್ಥಾಪಿಸುವ ಬೇಡಿಕೆ ಬಹಳ ದಿನಗಳಿಂದ ಇತ್ತು. ಹಲವಾರು ರಾಜಕೀಯ ಮುಖಂದರು ಕೂಡ ಈ ಕುರಿತು ಒತ್ತಾಯಿಸಿದ್ದರು. ಅಂತಿಮವಾಗಿ ಕೇಂದ್ರ ಸರ್ಕಾರ 2016ರಲ್ಲಿ ರಾಯಚೂರನಲ್ಲಿ ಐಐಐಟಿ ಸ್ಥಾಪನೆಗೆ ನಿರ್ಧರಿಸಿತ್ತು. ಅಂತೆಯೇ ಅಂತಿಮ ಅಧಿಸೂಚನೆಯನ್ನು ಜನವರಿ 24, 2018 ರಂದು ನೀಡಲಾಯಿತು.
ಆದರೆ ರಾಜ್ಯದಲ್ಲಿ ಚುನಾವಣೆ ಹಾಗೂ ಆ ನಂತರದಲ್ಲಿ ನಡೆದ ರಾಜಕೀಯ ಪ್ರಕ್ಷುಬ್ದತೆಯ ಪರಿಣಾಮವಾಗಿ ಸರ್ಕಾರ ರಾಯಚೂರಿನಲ್ಲಿ ಐಐಐಟಿಗಾಗಿ ಭೂಮಿ ವಶಪಡಿಸಿಕೊಳ್ಳುವಲ್ಲಿ ವಿಫಲವಾಯಿತು. ಈ ನಡುವೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಆಗಸ್ಟ್ 2019 ರಿಂದ 30 ವಿದ್ಯಾರ್ಥಿಗಳನ್ನು ಒಳಗೊಂಡಂತೆ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ತೆಲಂಗಾಣದ ಐಐಟಿ ಕ್ಯಾಂಪಸ್ ನಲ್ಲೇ ತರಗತಿಗಳು ಆರಭವಾಗಲಿದೆ.