ಕಾನೂನುಬಾಹಿರ ಟೆಲಿಫೋನ್ ಎಕ್ಸ್ ಚೇಂಜ್ ಸ್ಥಾಪಿಸಿ ಅಂತಾರಾಷ್ಟ್ರೀಯ ದೂರವಾಣಿ ಕರೆಗಳ ಮೋಸದ ಜಾಲ ಪತ್ತೆ: ಆರು ಮಂದಿ ಬಂಧನ.

ಬೆಂಗಳೂರು, ಜೂನ್,2, 2022 (www.justkannada.in): ಸೆಂಟ್ರಲ್ ಕ್ರೈಂ ಬ್ರ್ಯಾಂಚ್ (ಸಿಸಿಬಿ), ಸಿಮ್ ಬಾಕ್ಸ್ ಮೋಸದ ಹಗರಣವೊಂದನ್ನು ಪತ್ತೆ ಹಚ್ಚಿ, ಬೆಂಗಳೂರಿನಲ್ಲಿ ಎರಡು ಕಾನೂನುಬಾಹಿರ ಟೆಲಿಫೋನ್ ಎಕ್ಸ್ಚೇಂಜ್‌ ಗಳನ್ನು ಸ್ಥಾಪಿಸಿದ್ದ ಆರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಗುಂಪು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಂತೆ ಕಾಣುವಂತೆ ಮಾಡಿ ದೂರವಾಣಿ ಸಂಸ್ಥೆಗಳಿಗೆ ದೊಡ್ಡ ಮಟ್ಟದ ನಷ್ಟವನ್ನುಂಟು ಮಾಡಿದ್ದಾರೆ. ಪ್ರತ್ಯೇಕ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ ನಾಲ್ವರು ಹಾಗೂ ಕೇರಳದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಸಿಸಿಬಿ ಪೋಲಿಸರು ಈ ವಂಚಕರಿಂದ 17 ಸಿಮ್ ಬಾಕ್ಸ್ ಗಳು, ಎರಡು ಸೆಷನ್ ಇನಿಷಿಯೇಷನ್ ಪ್ರೋಟೊಕಾಲ್ (ಎಸ್‌ಐಪಿ) ಟ್ರಂಕ್ ಕಾಲ್ ಸಾಧನಗಳು, ಒಂಬತ್ತು ಪ್ರೈಮರಿ ರೇಟ್ ಇಂಟರ್‌ ಫೇಸ್ (ಪಿಆರ್‌ಐ) ಸಾಧನಗಳು, ಐದು ಲ್ಯಾಪ್‌ ಟಾಪ್‌ ಗಳು, ಎರಡು ಡೆಸ್ಕ್ಟಾಪ್‌ ಗಳು, ಒಂಬತ್ತು ಮೊಬೈಲ್ ಫೋನ್‌ ಗಳು, ಆರು ರೌಟರ್‌ ಗಳು ಮತ್ತು ೨೦೫ ಬಿಎಸ್‌ ಎನ್‌ ಎಲ್ ಸಿಮ್ ಕಾರ್ಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿಸಲಾಗಿರುವ ತಂಡದವರನ್ನು ಬೆಂಗಳೂರಿನ ರವಿಚಂದ್ರ, ಗಲ್ಫ್ ನಿಂದ ಹಿಂದಿರುಗಿದ್ದ ಮೂಲತಃ ಎರ್ನಾಕುಲಂ ಹಾಗೂ ಮಲಪ್ಪುರಂನ ಸುಬೇರ್, ಮನು ಎಂ.ಎಂ., ಇಸ್ಮಾಯಿಲ್ ಅಬ್ದುಲ್ಲಾ, ಜೌಹರ್ ಷರೀಫ್ ಹಾಗೂ ಷಾಹಿರ್ ಎಂದು ಗುರುತಿಸಲಾಗಿದೆ.

ಸುಬೇರ್ ಮತ್ತು ಇಸ್ಮಾಯಿಲ್ ಈ ಇಡೀ ವಂಚನೆಯ ಜಾಲದ ಹಿಂದಿನ ಮಾಸ್ಟರ್‌ ಮೈಂಡ್‌ ಗಳು ಎಂದು ಪೋಲಿಸರು ತಿಳಿಸಿದ್ದಾರೆ. ರವಿಚಂದ್ರ, ಸುಬೇರ್ ಹಾಗೂ ಮನು ಈ ಮೂವರನ್ನು ಮೇ ೧೮ರಂದು ದಾಖಲಿಸಿದ್ದ ಪ್ರಕರಣದಲ್ಲಿ ಬಂಧಿಸಲಾಗಿದ್ದರೆ, ದೂರಸಂಪರ್ಕ ಕ್ಷೇತ್ರದ ಭದ್ರತಾ ವಿಷಯಗಳಿಗೆ ಸಂಬಂಧಪಟ್ಟಂತೆ ದೂರಸಂಪರ್ಕ ಇಲಾಖೆಯ ಸಚಿವಾಲಯದ ದೂರಿನ ಹಿನ್ನೆಲೆಯಲ್ಲಿ ಇತರರನ್ನು ಬಂಧಿಸಲಾಗಿದೆ.

ಅಧಿಕಾರಿಗಳ ಪ್ರಕಾರ ಈ ಕಾನೂನುಬಾಹಿರ ಟೆಲಿಫೋನ್ ಎಕ್ಸ್ ಚೇಂಜ್‌ ನಿಂದ ದೂರಸಂಪರ್ಕ ಇಲಾಖೆಗೆ ದೊಡ್ಡ ಮಟ್ಟದ ನಷ್ಟವುಂಟಾಗಿರುವುದಷ್ಟೇ ಅಲ್ಲದೆ, ರಾಷ್ಟ್ರ ಭದ್ರತೆಗೂ ಬೆದರಿಕೆಯನ್ನು ಒಡ್ಡಿತ್ತು.

ಈ ವಂಚನೆ ಕಳೆದ ಒಂದೂವರೆ ವರ್ಷಗಳಿಂದಲೂ ನಡೆಯುತ್ತಿದ್ದು, ಗಲ್ಫ್ ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಕಡಿಮೆ ಬೆಲೆಯ ದೂರವಾಣಿ ಕರೆಗಳನ್ನು ಮಾಡಲು ಅನುವು ಮಾಡಿಕೊಡುತಿತ್ತು. ಈ ಕರೆಗಳು ಒನ್‌ ವೇಗಳಾಗಿದ್ದವು. ಕರೆ ಪಡೆಯುವವರಿಗೆ ಹಿಂದಿರುಗಿ ಕರೆ ಮಾಡುವುದು ಸಾಧ್ಯವಾಗುತ್ತಿರಲಿಲ್ಲ.

ನಗರ ಪೋಲಿಸ್ ಮುಖ್ಯಸ್ಥ ಸಿ.ಹೆಚ್. ಪ್ರತಾಪ್ ರೆಡ್ಡಿ ಅವರು ಈ ಸಂಬಂಧ ಮಾತನಾಡಿ, “ಈ ತಂಡ ಭಾರತಕ್ಕೆ ಬರುತ್ತಿದ್ದಂತಹ ಅಂತಾರಾಷ್ಟ್ರೀಯ ಕರೆಗಳನ್ನು ಪರಿವರ್ತಿಸುತ್ತಿದ್ದರು ಹಾಗೂ ದೊಡ್ಡ ಪ್ರಮಾಣದಲ್ಲಿ ಪ್ರೀ-ಆ್ಯಕ್ಟಿವೇಟೆಡ್ ಸಿಮ್ ಕಾರ್ಡುಗಳನ್ನು ಖರೀದಿಸಿದ್ದರು,” ಎಂದು ವಿವರಿಸಿದರು.

16 ಸಿಮ್ ಬಾಕ್ಸ್ ಗಳಿಗೆ ೪೦೦ ಸಿಮ್ ಕಾರ್ಡುಗಳನ್ನು ಪ್ಲಗ್ ಮಾಡಿ, ಅಂದಾಜು ೮,೦೦೦ ಗಂಟೆಗಳ ಟಾಕ್‌ ಟೈಮ್ ಅನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಲಾಗಿದೆ. ಒಂದು ಪಿಆರ್‌ ಐ ಲೈನ್‌ನಲ್ಲಿ ಸುಮಾರು ೩೦ ಸಂಖ್ಯೆಗಳನ್ನು ಪ್ಲಗ್ ಮಾಡಲಾಗಿತ್ತು ಹಾಗೂ ೭೨೦ ಗಂಟೆಗಳ ಟಾಕ್‌ ಟೈಂ ಅನ್ನು ಪರಿವರ್ತಿಸಲಾಗಿದೆ, ಎಂದು ಮಾಹಿತಿ ನೀಡಿದ್ದಾರೆ.

ಸಿಸಿಬಿ ಅಧಿಕಾರಿಗಳು, ಈ ಸಿಮ್ ಕಾರ್ಡುಗಳನ್ನು ಯಾವ ರೀತಿ ಹಂಚಿಕೆ ಮಾಡಲಾಯಿತು ಮತ್ತು ಎಸ್‌ಐಪಿ ಟ್ರಂಕ್ ಕಾಲ್ ಹಾಗೂ ಇತರೆ ಸಾಧನಗಳನ್ನು ಖರೀದಿಸಿದ ಗ್ರಾಹಕರ ಗುರುತಿನ ವಿವರಗಳನ್ನು ಪರಿಶೀಲಿಸಲು ಟೆಲಿಕಾಂ ಸೇವಾದಾರರು ಅನುಸಿರಿಸಿದ ವಿಧಾನವೇನು ಎಂಬ ಕುರಿತು ತಪಾಸಣೆ ನಡೆಸಲಿದ್ದಾರೆ. ಈ ವಂಚನಾ ತಂಡಕ್ಕೆ ಯಾರೇ ಸಹಾಯ ಮಾಡಿದ್ದರೂ ಸಹ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಎಸ್‌ಐಪಿ ಟ್ರಂಕ್ ಕಾಲ್ ಸಾಧನಗಳನ್ನು ಸಾಮಾನ್ಯವಾಗಿ ಕಾಲ್ ಸೆಂಟರ್‌ಗಳಿAದ ಪಡೆಯಲಾಗುತ್ತದೆ. ಈ ತಂಡವೂ ಸಹ ಈ ಸಾಧನಗಳನ್ನು ಖರೀದಿಸುವಾಗ ಅದನ್ನು ಕಾಲ್ ಸೆಂಟರ್‌ಗೆ ಬಳಸಲಾಗುತ್ತದೆ ಎಂದೇ ತಿಳಿಸಿದ್ದಾರೆ.

ತಂಡದ ರವಿಚಂದ್ರ ತನ್ನ ದಾಖಲಾತಿಗಳನ್ನು ಆತನ ದೀರ್ಘ ಕಾಲದ ಸ್ನೇಹಿತ ಸುಬೇರ್ ಎಂಬುವವನಿಗೆ ಮಹದೇವಪುರದಲ್ಲಿ ಐಕಾನ್ ಟರ್ಸ್ ಅಂಡ್ ಟ್ರಾವೆಲ್ಸ್ ಎಂಬ ಕಂಪನಿ ಸ್ಥಾಪಿಸಲು ಒದಗಿಸಿದ್ದನಂತೆ. ಆತನ ದಾಖಲೆಗಳನ್ನು ಕಾಲ್ ಸೆಂಟರ್ ತೆರೆಯಲು ಬಳಸಿಕೊಳ್ಳುವುದಾಗಿ ತಿಳಿಸಿ ಅದಕ್ಕೆ ತಿಂಗಳಿಗೆ ರೂ.೩೦,೦೦೦ ದಿಂದ ರೂ.೪೦,೦೦೦ ನೀಡುವುದಾಗಿಯೂ ಸುಬೇರ್ ತಿಳಿಸಿದ್ದನಂತೆ. ಆದರೆ ರವಿಚಂದ್ರನಿಗೆ ಈ ಮೋಸದ ಕುರಿತು ತಿಳಿದಿರಲಿಲ್ಲವಂತೆ.

ಸಾಫ್ಟ್ ವೇರ್ ಇಂಜಿನಿಯರ್ ಮನು, ಭಾರತದಲ್ಲಿರುವ ಕುಟುಂಬದ ಸದಸ್ಯರಿಗೆ ನಿಯಮಿತವಾಗಿ ಕರೆಗಳನ್ನು ಮಾಡುವ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ದತ್ತಾಂಶವನ್ನು ಸಂಗ್ರಹಿಸಲು ಅಗತ್ಯವಿರುವ ತಾಂತ್ರಿಕ ಸಹಾಯವನ್ನು ನೀಡಿದ್ದರು. ಷರೀಫ್ ಈ ತಾಂತ್ರಿಕ ತಜ್ಞತೆಯನ್ನು ಎಕ್ಸ್ಚೇಂಜ್ ಸ್ಥಾಪಿಸಲು ಹಾಗೂ ನಿರ್ವಹಿಸಲು ಬಳಸಿಕೊಂಡಿದ್ದಾನೆ. ಷಾಹಿರ್ ಇದಕ್ಕೆ ಬೇಕಾದ ಸಾಧನಗಳನ್ನು ಸರಬರಾಜು ಮಾಡಿದ್ದಾನೆ.

ಚಿಕ್ಕಸಂದ್ರದಲ್ಲಿ ಒಂದು ಬಾಡಿಗೆ ಮನೆಯಲ್ಲಿ ಈ ಎಕ್ಸ್ಚೇಂಜ್ ಅನ್ನು ಸ್ಥಾಪಿಸಲಾಗಿತ್ತು. ಮತ್ತೊಂದನ್ನು ಮಹದೇವಪುರದಲ್ಲಿದ್ದ ಐಕಾನ್ ಟರ್ಸ್  ಅಂಡ್ ಟ್ರಾವೆಲ್ಸ್ ಕಚೇರಿಯಲ್ಲಿ ತೆರೆಯಲಾಗಿತ್ತು. ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳದಿಂದ ಸಿಮ್ ಕಾರ್ಡುಗಳನ್ನು ಖರೀದಿಸಿ, ಅವುಗಳನ್ನು ಸಿಮ್ ಬಾಕ್ಸ್ ಗಳಲ್ಲಿ ಪ್ಲಗ್ ಮಾಡಲಾಗಿತ್ತು.

ಸಿಮ್ ಬಾಕ್ಸ್ ವಂಚನೆ ಎಂದರೇನು?

ಸಿಮ್ ಬಾಕ್ಸ್ ಅನ್ನು ವಾಯ್ಸ್ ಓವರ್ ಇಂಟೆರ್‌ ನೆಟ್ ಪ್ರೊಟೋಕಾಲ್ (VoIP) ಗೇಟ್‌ ವೇ ಅಳವಡಿಕೆಗೆ ಬಳಸಲಾಗುತ್ತದೆ. ಈ ಸಿಮ್ ಬಾಕ್ಸ್ ನಲ್ಲಿ ನೂರಾರು ಸಿಮ್ ಕಾರ್ಡುಗಳನ್ನು ಪ್ಲಗ್ ಮಾಡಬಹುದು. ಇದು VoIP (ಇಂಟೆರ್‌ನೆಟ್ ಕಾಲಿಂಗ್) ಮೂಲಕ ಕರೆಯ ಮಾರ್ಗವನ್ನು ಬದಲಾಯಿಸುವಲ್ಲಿ ನೆರವಾಗುತ್ತದೆ. ಈ ಸಿಮ್ ಬಾಕ್ಸ್ ಅನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ಕರೆಗಳು ಸ್ಥಳೀಯ ಕರೆಗಳಂತೆ ಕಾಣುವ ಹಾಗೆ ಮಾಡಬಹುದು.

ಒಮ್ಮೆ ಮುಕ್ತಾಯಗೊಳಿಸಿದ ನಂತರ ಈ VoIP ಕರೆಯನ್ನು, ಸ್ಥಳೀಯ ಕರೆಯಂತೆ ಕಾಣುವ ಸಂಖ್ಯೆಯ ಮೂಲಕ ನಿರ್ಧಿಷ್ಟ ದೂರವಾಣಿ ಸಂಖ್ಯೆಗೆ ಸಂಪರ್ಕ ಕಲ್ಪಿಸಬಹುದು. ಅಂದರೆ ಇದರ ಅರ್ಥ ತಪಾಸಣಾ ಏಜೆನ್ಸಿಗಳಿಗೆ,  country code ನಂತಹ ಕರೆಯ ಮೂಲವನ್ನು ಪತ್ತೆ ಹಚ್ಚುವುದು ಸಾಧ್ಯವಾಗುವುದಿಲ್ಲ. ವಂಚಕರು ಹಾಗೂ ಅಪರಾಧಿಗಳು ಬೆದರಿಕೆಯ ಕರೆಗಳನ್ನು ಮಾಡಲು ಇಂತಹ ಕಾನೂನುಬಾಹಿರ ಎಕ್ಸ್ಚೇಂಜ್‌ ಗಳನ್ನು ಬಳಸುತ್ತಾರೆ. ಇದರಿಂದ ದೂರಸಂಪರ್ಕ ಇಲಾಖೆಗೆ ಪ್ರತಿ ವರ್ಷ ಸಾವಿರಾರು ಕೋಟಿಗಳ ನಷ್ಟವುಂಟಾಗುತ್ತದೆ. ಏಕೆಂದರೆ, ವಂಚಕರು ಆಪರೇಟರ್ ಶುಲ್ಕಗಳನ್ನು ತಮ್ಮ ಜೇಬಿಗಿಳಿಸಿಕೊಳ್ಳುತ್ತಿರುತ್ತಾರೆ. ಈ ಪ್ರಕರಣದಲ್ಲಿ ವಂಚಕರ ತಂಡ ಪ್ರತಿ ಪರಿವರ್ತಿತ ಕರೆಗೆ ಒಂದು ರೂ.೧ ಗಳಿಸುತಿತ್ತು.

ರಾಜಕಾರಣಿಗಳಿಗೆ ಬೆದರಿಕೆ ಕರೆಗಳು

ಮಾರ್ಚ್ ತಿಂಗಳಲ್ಲಿ ಪಶ್ಚಿಮ ಏಷ್ಯಾದಲ್ಲಿ ಕುಳಿತು ವಂಚಕರು, ದಕ್ಷಿಣ ಕನ್ನಡದ ಪುತ್ತೂರಿನಲ್ಲಿರುವ ರಾಜಕೀಯ ಪಕ್ಷವೊಂದರ ಕಾರ್ಯಕರ್ತ ೨೪ ವರ್ಷ ವಯಸ್ಸಿನ ಚಂದ್ರಹಾಸ ಎಂ. ಎಂಬುವವರಿಗೆ ಬೆದರಿಕೆ ಕರೆಗಳನ್ನು ಮಾಡಲು ಮಹದೇವಪುರದಲ್ಲಿ ಇವರು ಸ್ಥಾಪಿಸಿದ್ದಂತಹ ಎಕ್ಸ್ಚೇಂಜ್ ಮೂಲಕ ಮೂರು ದೂರವಾಣಿ ಸಂಖ್ಯೆಗಳನ್ನು ಬಳಸಿಕೊಂಡಿದ್ದರು ಎಂದು ಮಾಹಿತಿ ಲಭಿಸಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: illegal- telephone- exchange – fraudulent -networks – international -telephone- calls-bangalore