ಮೈಸೂರು,ಮಾ,31,2021(www.justkannada.in) : ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಎಎಸ್ಪಿ ಶಿವಕುಮಾರ್ ನೇತೃತ್ವದ ತಂಡ ವಶಪಡಿಸಿಕೊಂಡು, ಚಾಲಕನನ್ನು ಬಂಧಿಸಿದ್ದಾರೆ.
ಬನ್ನೂರು ನಿವಾಸಿ, ಲಾರಿ ಚಾಲಕ ಮನು ಎಂಬುವನನ್ನು ಬಂಧಿಸಿದ್ದು, ಗಳಗರಹುಂಡಿ ನಿವಾಸಿ, ಲಾರಿ ಮಾಲೀಕ ಸುರೇಶ್ ಪರಾರಿಯಾಗಿದ್ದಾರೆ.
ಬನ್ನೂರು ಸಮೀಪದ ಬಿದರಹಳ್ಳಿ ಹುಂಡಿ ಬಳಿ ಕಾವೇರಿ ನದಿ ತಟದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಎಎಸ್ಪಿ ಶಿವಕುಮಾರ್ ಅವರು ಪೇದೆ ಶ್ರೀನಿವಾಸ್ ಮತ್ತು ದೀಪು ಅವರೊಂದಿಗೆ ಗಸ್ತಿನಲ್ಲಿದ್ದಾಗ ಮಂಗಳವಾರ ಬೆಳಗ್ಗೆ ೬ರ ಸಮಯದಲ್ಲಿ ಲಾರಿಯೊಂದು ಬರುತ್ತಿರುವುದು ಕಂಡು ಬಂದಿದೆ.
ರಸ್ತೆ ಕಡಿದಾಗಿದ್ದರಿಂದ ಬನ್ನೂರು-ಮೈಸೂರು ಮುಖ್ಯ ರಸ್ತೆಗೆ ಬರುವವರೆಗೂ ಹಿಂಬಾಲಿಸಿದ ಎಎಸ್ಪಿ ನೇತೃತ್ವದ ತಂಡ, ಮುಖ್ಯರಸ್ತೆಯಲ್ಲಿ ಲಾರಿಯನ್ನು ತಡೆದು ಪರಿಶೀಲಿಸಿದಾಗ ಎಂ ಸ್ಯಾಂಡ್ ಇರುವುದು ಕಂಡು ಬಂದಿದೆ. ಕೂಡಲೇ ಎಂ ಸ್ಯಾಂಡ್ ಅನ್ನು ಬಗೆದು ನೋಡಿದಾಗ ಕೆಳಭಾಗದಲ್ಲಿ ಮರಳು ತುಂಬಿರುವುದು ಪತ್ತೆಯಾಗಿದೆ.
ಸುರೇಶ್ ಎಂಬುವರಿಗೆ ಸೇರಿದ ೨ ಲಾರಿಗಳು ಅಕ್ರಮಮರಳು ಸಾಗಿಣಿಕೆಯಲ್ಲಿ ತೊಡಗಿದ್ದು, ಮೈಸೂರು-ಬೆಂಗಳೂರಿಗೆ ಎಗ್ಗಿಲ್ಲದೆ ಮರಳು ಸಾಗಣಿಗೆ ಮಾಡುತ್ತಿವೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು ಎಂದು ಎಎಸ್ಪಿ ಶಿವಕುಮಾರ್ ತಿಳಿಸಿದ್ದಾರೆ.
key words : Illegally-Sand-carrying-Truck-Seized-arrest-driver