ಬೆಂಗಳೂರು:ಜೂ-24:(www.justkannada.in) ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸದಿಂತೆ ಮಾಲೀಕ ಮನ್ಸೂರ್ ಅಲಿ ಖಾನ್ ಹೊಸದೊಂದು ವಿಡಿಯೋ ಬಿಡುಗಡೆಮಾಡಿದ್ದು, ಅದರಲ್ಲಿ ರಾಜಕಾರಣಿಗಳು ಸೇರಿದಂತೆ ಹಲವಾರು ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ.
ಮನ್ಸೂರ್ ದುಬೈನಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿತ್ತು. ಈಗ ಅಲ್ಲಿಂದಲೇ ಮತ್ತೊಂದು ವೀಡಿಯೋ ಬಿಡುಗಡೆಗೊಳಿಸಿ, ಅದರಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಕೆ. ರೆಹಮಾನ್ ಖಾನ್, ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಶರವಣ, ಮೊಹಮದ್ ಉಬೇದುಲ್ಲಾ ಶರೀಫ್ ಸೇರಿದಂತೆ ಹಲವಾರು ಹೆಸರನ್ನು ಮನ್ಸೂರ್ ಬಹಿರಂಗಪಡಿಸಿದ್ದಾನೆ.
ರಾಜಕಾರಣಿಗಳು, ಹೂಡಿಕೆದಾರರು ನನ್ನ ಕುತ್ತಿಗೆ ಮೇಲೆ ಕುಳಿತಿದ್ದರು. ನನ್ನ ಸಹಾಯಕ್ಕೆ ಯಾರೂ ಇಲ್ಲದ ಕಾರಣ ಕುಟುಂಬದ ಜತೆ ವಿದೇಶಕ್ಕೆ ಹೊರಡಬೇಕಾಯಿತು. ಜೂ.14ರಂದು ವಾಪಸ್ ಬರಲು ವಿಮಾನ ನಿಲ್ದಾಣಕ್ಕೆ ಬಂದಿದ್ದೆ. ಆದರೆ, ವಿಮಾನ ಟಿಕೆಟ್ ಮತ್ತು ಪಾಸ್ಪೋರ್ಟ್ ತಡೆಹಿಡಿದಿದ್ದರಿಂದ ಭಾರತಕ್ಕೆ ಬರಲು ಸಾಧ್ಯವಾಗಿಲ್ಲ’ ಎಂದು ಆತ ಹೇಳಿದ್ದಾನೆ. ಅಲ್ಲದೇ, ನಾನು ಭಾರತಕ್ಕೆ ಬಂದು ಎಲ್ಲ ಗ್ರಾಹಕರಿಗೆ ಹಣ ವಾಪಸ್ ನೀಡುವ ಮನಸಿದೆ. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಆಗುತ್ತಿಲ್ಲ ಎಂದು ಮನ್ಸೂರ್ ಖಾನ್ ಹೇಳಿಕೊಂಡಿದ್ದಾನೆ.
ಭಾರತಕ್ಕೆ ಬರಲು ಜೀವ ಬೆದರಿಕೆಯಿದೆ. ಪೊಲೀಸ್ ಕಸ್ಟಡಿಯಲ್ಲಿ ನನ್ನನ್ನು ಮುಗಿಸಲು ಕೆಲವರು ಸಂಚು ರೂಪಿಸಿದ್ದರು. ಹೀಗಾಗಿ ಕುಟುಂಬ ಸಮೇತ ಬೆಂಗಳೂರು ಬಿಟ್ಟು ಬಂದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದರೆ ಎದುರಿಸಲು ಸಿದ್ಧನಿದ್ದೇನೆ. ನಾನು ಅಪರಾಧಿ ಎನ್ನುವುದಾದರೆ ನನ್ನ ಹಿಂದೆ ಅನೇಕರು ಇದ್ದಾರೆ. ಅವರಿಗೂ ಶಿಕ್ಷೆಯಾಗಲಿ’ ಎಂದು ಮನ್ಸೂರ್ ಒತ್ತಾಯಿಸಿದ್ದಾನೆ. ಐಎಂಎ ನೈಜ ಉದ್ಯಮವಾಗಿತ್ತು. ಕಿಡಿಗೇಡಿಗಳು ದುರುದ್ದೇಶದಿಂದ ಇದನ್ನು ಹಾಳು ಮಾಡುತ್ತಿದ್ದಾರೆ. ಐಎಂಎ ಮುಳುಗಿಸಲು ಯಾರು ಪ್ರಯತ್ನ ಪಟ್ಟಿದ್ದಾರೋ ಅವರ ಪಟ್ಟಿ ನನ್ನ ಬಳಿಯಿದೆ. ಎಲ್ಲರ ಹೆಸರು ಬಹಿರಂಗಪಡಿಸುವೆ ಎಂದು ಮನ್ಸೂರ್ ತಿಳಿಸಿದ್ದಾನೆ.