ಬೆಂಗಳೂರು ಫೆಬ್ರವರಿ 24: ಐಎಂಎ (ಐ-ಮಾನಿಟರಿ ಅಡ್ವೈಸರಿ) ಬಹುಕೋಟಿ ವಂಚನೆ ಪ್ರಕರಣದಿಂದಾಗಿ ಹಣ ಕಳೆದುಕೊಂಡ ಎಲ್ಲಾ ಠೇವಣಿದಾರರಿಗೂ ರಂಜಾನ್ ಹಬ್ಬಕ್ಕೂ ಮುನ್ನ ನಿಗದಿತ ಪರಿಹಾರದ ಹಣವನ್ನು ನೀಡಲು ಸೂಕ್ತ ಕ್ರಮವಹಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.
ಐಎಂಎ ಹಗರಣದ ಮೊತ್ತ ಎಷ್ಟು? ಈ ವರೆಗೆ ಈ ಸಂಸ್ಥೆಯ ಎಷ್ಟು ಕೋಟಿ ಮೌಲ್ಯದ ಸ್ಥಿರಾಸ್ತಿ/ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ? ಕಳೆದ ಏಳು ವರ್ಷದಲ್ಲಿ ಈ ಕಂಪೆನಿಯಲ್ಲಿ ಹಣ ಹೂಡಿ ಕಳೆದುಕೊಂಡ ಎಷ್ಟು ಜನರಿಗೆ ಎಷ್ಟು ಪ್ರಮಾಣದಲ್ಲಿ ಹಣ ಹಿಂತಿರುಗಿಸಲಾಗಿದೆ ಮತ್ತು ಉಳಿದ ಸಂತ್ರಸ್ತರಿಗೆ ಯಾವಾಗ ಮತ್ತು ಹೇಗೆ ಹಣ ಹಿಂತಿರುಗಿಸಬೇಕು? ಎಂಬ ಕುರಿತು ಸೋಮವಾರ ವಿಕಾಸಸೌಧ ಕಚೇರಿಯಲ್ಲಿ ಸಭೆ ನಡೆಸಿ ಚರ್ಚಿಸಲಾಯಿತು.
ಈ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್, ಶಾಸಕ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರ ಜೊತೆಗೆ ಐಎಂಎ ಹಗರಣದಿಂದ ಹಣ ಕಳೆದುಕೊಂಡ ಹಲವರು ಭಾಗಿಯಾಗಿದ್ದರು.
ಈ ವೇಳೆ ಸಂತ್ರಸ್ತರಿಗೆ ಭರವಸೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ರಂಜಾನ್ ಹಬ್ಬಕ್ಕೂ ಹತ್ತು ದಿನ ಮೊದಲೇ ಐಎಂಎ ನಲ್ಲಿ ಹಣ ಹೂಡಿ ಮೋಸ ಹೋದವರಿಗೆ ಅವರ ಹೂಡಿಕೆಯ ಅನುಪಾತದ ಆಧಾರದಲ್ಲಿ ಪರಿಹಾರ ನೀಡಲು ಕ್ರಮವಹಿಸಲಾಗುವುದು ಎಂದರು.
ಹಣ ಡಬ್ಲಿಂಗ್ ಆಸೆಯಿಂದಾಗಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಠೇವಣಿದಾರರು 3213.58 ಕೋಟಿ ರೂ.ಗಳನ್ನು ಐಎಂಎ ಕಂಪೆನಿಯಲ್ಲಿ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಕಂಪೆನಿಯ ಒಟ್ಟು ಠೇವಣಿದಾರರ ಸಂಖ್ಯೆ 69069. ಈ ಪೈಕಿ 1400 ಕೋಟಿ ರೂ.ಗಳನ್ನು ಲಾಭಾಂಶದ ಮಾದರಿಯಲ್ಲಿ ಐಎಂಎ ಕಾಲಕಾಲಕ್ಕೆ ಠೇವಣಿದಾರರಿಗೆ ನೀಡುತ್ತಾ ಬಂದಿದೆ. ಹಗರಣ ಬೆಳಕಿಗೆ ಬಂದ ನಂತರ ವಿಶೇಷ ನ್ಯಾಯಾಲಯದ ಆದೇಶದಂತೆ ಕಂಪೆನಿ ಖಾತೆಯಲ್ಲಿದ್ದ 19.12 ಕೋಟಿ ರೂ.ಗಳನ್ನು 50,000 ರೂ.ಗಳಂತೆ 6858 ಜನ ಸಂತ್ರಸ್ತರ ಖಾತೆಗಳಿಗೆ 2022 ಏಪ್ರಿಲ್ನಲ್ಲಿ ಜಮೆ ಮಾಡಲಾಗಿತ್ತು.
66.66 ಕೋಟಿ ರೂ.ಗಳನ್ನು 53,142 ಜನ ಸಂತ್ರಸ್ತರ ಖಾತೆಗಳಿಗೆ 8/11/2023 ರಂದು ಜಮೆ ಮಾಡಲಾಗಿತ್ತು. 1.28 ಕೋಟಿ ರೂ.ಗಳನ್ನು 626 ಸಂತ್ರಸ್ತರ ಖಾತೆಗಳಿಗೆ 23/5/2024 ರಂದು ಜಮೆ ಮಾಡಲಾಗಿತ್ತು. 276 ಜನ ಸಂತ್ರಸ್ತರಿಗೆ 36.14 ಲಕ್ಷ ರೂ.ಗಳನ್ನು 7/11/2024 ರಂದು ಜಮೆ ಮಾಡಲಾಗಿತ್ತು. ಒಟ್ಟಾರೆ ಈವರೆಗೆ 87.43 ಕೋಟಿ ರೂ.ಗಳನ್ನು 60902 ಜನ ಸಂತ್ರಸ್ತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಯಿತು.
ಐಎಂಎ ಕಂಪೆನಿಗೆ ಸಂಬಂಧಿಸಿದ ಹತ್ತಕ್ಕೂ ಹೆಚ್ಚು ಆಸ್ತಿಗಳನ್ನು ಈಗಾಗಲೇ ಸರ್ಕಾರ ವಶಕ್ಕೆ ಪಡೆದಿದೆ. ಚರಾಸ್ಥಿಗಳ ಮೌಲ್ಯ 106.92 ಕೋಟಿ ಹಾಗೂ ಸ್ಥಿರಾಸ್ತಿಗಳ ಮೌಲ್ಯ 401.92 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಕಂಪೆನಿಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಗಳಿಂದ 2.88 ಕೋಟಿ ರೂ., ನಗದು ಹಣ 11.72 ರೂ. ಹೂಡಿಕೆ ಪತ್ರ 11.06 ಕೋಟಿ ರೂ. ಸೇರಿದಂತೆ ಒಟ್ಟಾರೆ 534.5 ಕೋಟಿ ರೂ.ಗಳನ್ನು ಸರ್ಕಾರ ಮುಟ್ಟುಗೋಲು ಈಗಾಗಲೇ ಹಾಕಿದೆ. ನ್ಯಾಯಮೂರ್ತಿ ಜಸ್ಟೀಸ್ ನಾಗಪ್ರಸನ್ನ ಪೀಠದ ಆದೇಶದಂತೆ ಶೀಘ್ರವೇ ಈ ಆಸ್ತಿಗಳನ್ನು ಹರಾಜಿಗೊಳಪಡಿಸಿ ಇದರಿಂದ ಬಂದ ಹಣವನ್ನು ಹೂಡಿಕೆದಾರರಿಗೆ ಹಿಂತಿರುಗಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ತಿಳಿಸಿದರು.
ಅರ್ಹ ಸಂತ್ರಸ್ತರಿಗೆ ಪರಿಹಾರ..!
ಐಎಂಎ ಹಗರಣ ಬೆಳಕಿಗೆ ಬಂದಾಗಲೇ ಸರ್ಕಾರ ಸಂತ್ರಸ್ತರನ್ನು ಗುರುತಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ನೀಡಿತ್ತು. ಈ ವೇಳೆ ಐಎಂಎ ಜೊತೆ ಆರ್ಥಿಕ ವ್ಯವಹಾರ ಮಾಡಿದ ಬ್ಯಾಂಕ್ ಖಾತೆ ಚಾಲ್ತಿಯಲ್ಲಿದ್ದರೆ ಅದನ್ನೇ ಅಧಿಕೃತ ಎಂದು ಪರಿಗಣಿಸಲಾಯಿತು. ಒಂದು ವೇಳೆ ಖಾತೆ ನಿಷ್ಕ್ರಿಯವಾಗಿದ್ದರೆ ಠೇವಣಿಪತ್ರ, ಷೇರುಪ್ರಮಾಣ ಪತ್ರದಂತಹ ದಾಖಲಾತಿಗಳನ್ನು ಕೋರಿತ್ತು.
ಅರ್ಜಿ ಸಲ್ಲಿಸುವವರ ಮಾಹಿತಿಗಳನ್ನು ಐಎಂಎ ಸಂಸ್ಥೆಯಲ್ಲಿರುವ ದತ್ತಾಂಶಗಳೊಂದಿಗೆ ಹೊಂದಾಣಿಕೆ ಮಾಡಿ ಹಾಗೂ ಆಧಾರ್ ಕಾರ್ಡ್, ಇತರ ಮಾಹಿತಿಗಳನ್ನು ಸಮೀಕರಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. ಒಂದು ವೇಳೆ ಫಲಾನುಭವಿಗಳು ಮೃತಪಟ್ಟಿದ್ದರೆ ಠೇವಣಿದಾರರು ಸೂಚಿಸಿರುವ ನಾಮನಿರ್ದೇಶಿತ ವ್ಯಕ್ತಿಗಳಿಗೆ ಆ ಹಣವನ್ನು ನೀಡಲು ಕ್ರಮವಹಿಸಲಾಗಿದೆ.
key words: IMA scam, Compensation, Ramzan, Krishna Byre Gowda
IMA scam: Compensation for those who lost money ahead of Ramzan, says Krishna Byre Gowda