ಸಿಂಧನೂರು, ಡಿಸೆಂಬರ್,30,2023(www.justkannada.in): ನಮ್ಮ ಗ್ಯಾರಂಟಿ ಯೋಜನೆಗಳಿಂದಾಗಿ ಬರಗಾಲದಲ್ಲೂ ರಾಜ್ಯದ ಬಡವರು ಸಂಕಷ್ಟದಿಂದ ಪಾರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಸಿಂಧನೂರಿನಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ತಿಮ್ಮಾಪೂರ ಏತ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಿ, ಜಲ ಜೀವನ್ ಮಿಷನ್ (DBOT) ಯೋಜನೆಯ ಶಂಕುಸ್ಥಾಪನೆ ನೆರವೇರಿಸುವ ಜತೆಗೆ ಸಿಂಧನೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು.
ನಾವು ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿದೆ. ಮೋದಿ ಅವರು ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಭಾಷಣ ಮಾಡಿದ್ದರು. ಆದರೆ ಅವರ ಮಾತು ಮತ್ತೊಮ್ಮೆ ಸುಳ್ಳಾಗಿದೆ ಎಂದು ಟೀಕಿಸಿದರು.
120 ಕೋಟಿ ಮಹಿಳೆಯರು ಉಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. 1.16 ಕೋಟಿ ಮಹಿಳೆಯರ ಖಾತೆಗೆ ತಿಂಗಳಿಗೆ 2 ಸಾವಿರ ಕೊಡಲಾಗುತ್ತಿದೆ. ಹೀಗೆ ಪ್ರತಿ ಕುಟುಂಬಕ್ಕೆ ತಿಂಗಳಿಗೆ 5-6 ಸಾವಿರ ರೂಪಾಯಿ ಉಳಿತಾಯ ಆಗುತ್ತಿದೆ.
ನಾವು ಕನ್ನಡಿಗರು ಪ್ರತೀ ವರ್ಷ ಕೇಂದ್ರಕ್ಕೆ 4 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ಹಣ ಕೊಡ್ತೀವಿ. ಆದರೆ ಕೇಂದ್ರ ನಮಗೆ ವಾಪಾಸ್ ಕೊಡುವುದು 52 ಸಾವಿರ ಕೋಟಿ ಮಾತ್ರ. ಬರಗಾಲ ಬಂದಿದ್ದರೂ ಕೇಂದ್ರದಿಂದ ನಯಾಪೈಸೆ ಬಂದಿಲ್ಲ. ಇದನ್ನು ರಾಜ್ಯದ ಜನತೆ ಬಿಜೆಪಿ ಸಂಸದರಿಗೆ ಪ್ರಶ್ನಿಸಬೇಕು ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರ ರಾಜ್ಯ ಜನರ ನೆರವಿಗೆ ಬರದಿದ್ದರೂ ನಾವು ರಾಜ್ಯದ ಜನರ ಕೈ ಬಿಡುವುದಿಲ್ಲ. ಹಿಂದಿನ ಬಿಜೆಪಿ ಸರ್ಕಾರ ನೀರಾವರಿ ಹೆಸರಲ್ಲಿ ಹಣ ತಿಂದು ತೇಗಿ ಹೋಗಿದೆ. ಆದರೂ ನಾವು ರಾಜ್ಯದ ಜನರಿಗೆ ಅಗತ್ಯ ನೀರಾವರಿ ಸವಲತ್ತು ಒದಗಿಸುತ್ತೇವೆ ಎಂದು ಭರವಸೆ ನೀಡಿದರು.
ಸಿಂಧನೂರಿಗೆ ಇದುವರೆಗೂ ಶೇ.80 ರಷ್ಟು ನೀರಾವರಿ ಸವಲತ್ತು ಸಿಕ್ಕಿದೆ. ಶಾಸಕರು ನೂರಕ್ಕೆ ನೂರರಷ್ಟು ನೀರಾವರಿ ಮಾಡಲು ಬದ್ದರಾಗಿದ್ದಾರೆ. ನಮ್ಮ ಸರ್ಕಾರ ಇದಕ್ಕೆ ಸಂಪೂರ್ಣ ಸಹಕಾರ ನೀಡಿ ರೈತರ ಬದುಕನ್ನು ಉನ್ನತೀಕರಿಸಲು ನಾವು ಬದ್ದರಾಗಿದ್ದೇವೆ. ನವಿಲೆ ಬ್ಯಾಲೆಂಸಿಂಗ್ ಅಣೆಕಟ್ಟು ನಿರ್ಮಿಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.
ಹಂಪನಗೌಡ ಬಾದರ್ಲಿ ಸಜ್ಜನ ಮತ್ತು ಅಭಿವೃದ್ಧಿ ಬಗ್ಗೆ ಹೆಚ್ಚು ಶ್ರಮಿಸುವ ಶಾಸಕರು. ಇವರಂತೆಯೇ ಎಲ್ಲಾ ಶಾಸಕರು ಶ್ರಮಿಸಿದರೆ ಇಡಿ ರಾಜ್ಯ ಮತ್ತು ಹೈದರಾಬಾದ್ ಕರ್ನಾಟಕ ಹೆಚ್ಚು ಅಭಿವೃದ್ಧಿಯಾಗುತ್ತದೆ ಎಂದು ಶಾಸಕರ ಕಾರ್ಯಕ್ಷಮತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್, ಜಿಲ್ಲೆಯ ಶಾಸಕರುಗಳಾದ ಹಂಪಯ್ಯ ನಾಯಕ್, ಮಾನಪ್ಪ ಡಿ.ವಜ್ಜಲ್, ಬಸವನಗೌಡ ದದ್ದಲ್, ಡಾ.ಎಸ್.ಶಿವರಾಜ್ ಪಾಟೀಲ್, ಆರ್. ಬಸವನಗೌಡ ತುರ್ವಿಹಾಳ, ಶರಣಗೌಡ ಪಾಟೀಲ್ ಬಯ್ಯಾಪುರ ಸೇರಿ ಹಲವು ಮುಖಂಡರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Implementation – five guarantees – CM –Siddaramaiah- BJP